ರಮಣೀಯ ತಾಣಕ್ಕೆ ಪ್ರಿಯಾಳನ್ನ ಕರೆದೊಯ್ದು ಸರ್ಪ್ರೈಸ್ ನೀಡಿದ ಅಶೋಕ್… ಈ ಸುಂದರ ಜಾಗ ಯಾವುದು ಗೊತ್ತಾ?
ಸೀತಾ ರಾಮ ಧಾರವಾಹಿಯ ಮತ್ತೊಂದು ಕ್ಯೂಟ್ ಜೋಡಿಗಳಾದ ಪ್ರಿಯಾ ಮತ್ತು ಅಶೋಕ್ ಇದೀಗ ಸುಂದರವಾದ ಜಾಗದಲ್ಲಿ ರೊಮ್ಯಾಂಟಿಕ್ ಡೇಟಿಂಗ್ ಮಾಡ್ತಿದ್ದಾರೆ. ಆ ಸುಂದರ ತಾಣ ಯಾವುದು ಗೊತ್ತ?
ಸೀತಾ ರಾಮ (Seetha Rama) ಧಾರವಾಹಿಯಲ್ಲಿ ಸೀತಾ ಮತ್ತು ರಾಮನ ಜೋಡಿಯಂತೆ ಮತ್ತೊಂದು ಮುದ್ದಾದ ಜೋಡಿ ಅಂದ್ರೆ ಅದು ಅಶೋಕ್ ಮತ್ತು ಪ್ರಿಯಾ. ಈ ಜೋಡಿಯನ್ನು ನೋಡೊದಕ್ಕೆ ಅಭಿಮಾನಿಗಳು ಕಾಯ್ತಿರ್ತಾರೆ. ಇಷ್ಟು ದಿನ ಮಿಸ್ ಆಗಿದ್ದ ಪ್ರಿಯಾ ಇದೀಗ ಮತ್ತೆ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದು, ಸ್ಪೆಷಲ್ ಎಪಿಸೋಡ್ ನಲ್ಲಿ ಈ ಜೋಡಿಯನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಪ್ರಿಯಾ ಮತ್ತು ಅಶೋಕ್ ಜೋಡಿಯನ್ನು ನೋಡಿ ಖುಷಿ ಪಡ್ತಿದ್ದ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ್ದು ಅಂದ್ರೆ ಪ್ರಿಯಾಳ ಸ್ತನ ಕ್ಯಾನ್ಸರ್. ಪದೇ ಪದೇ ತಾನು ಪ್ರೆಗ್ನೆಂಟ್ ಎಂದುಕೊಂಡು ವೈದ್ಯರನ್ನು ಕನ್ಸಲ್ಟ್ ಮಾಡುತ್ತಿದ್ದ ಪ್ರಿಯಾಕ್ಕೆ ಸ್ತನ ಕ್ಯಾನ್ಸರ್ (breast cancer) ಇರೋದು ನೋಡಿ, ಅಶೋಕ್ ಗೆ ಆಕಾಶವೇ ಕೆಳಗೆ ಬಿದ್ದ ಅನುಭವ. ಆದರೆ ಪ್ರಿಯಾ ಮಾತ್ರಾ ಇದ್ಯಾವ ವಿಷ್ಯವೂ ಗೊತ್ತಿಲ್ಲದೇ ಹ್ಯಾಪಿಯಾಗಿದ್ದಾಳೆ.
ಇದೀಗ ಅಶೋಕ್, ತನ್ನ ಮುದ್ದಿನ ಮಡದಿಗೆ ಸರ್ಪೈಸ್ ನೀಡೋದಕ್ಕೆ ಪ್ರಕೃತಿಯ ಮಡಿಲಲ್ಲಿರುವ ಸುಂದರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲದೇ ಅಲ್ಲಿ ರೋಮ್ಯಾಂಟಿಕ್ ಆಗಿ ಡೇಟಿಂಗ್ ಅರೇಂಜ್ ಮೆಂಟ್ ಮಾಡಿದ್ದು, ಟೇಬಲ್, ಟೀ, ತಿಂಡಿ ಎಲ್ಲವನ್ನೂ ಅಲ್ಲೇ ತರಿಸಿದ್ದಾರೆ ಅಶೋಕ್.
ಯಾವಾಗ್ಲೂ ಸೀರಿಯಸ್ ಆಗಿರುವ ಗಂಡ ಅಶೋಕ್ ಈ ರೀತಿಯಾಗಿ ಮೊದಲ ಬಾರಿಗೆ ರೊಮ್ಯಾಂಟಿಕ್ ಗಂಡನಂತೆ, ಸರ್ಪ್ರೈಸ್ ನೀಡಿ, ಡೇಟಿಂಗ್ ಪ್ಲ್ಯಾನ್ (dating plan) ಮಾಡಿರೋದು ಪ್ರಿಯಾಗೆ ಸಖತ್ ಖುಷಿ ಕೊಟ್ಟಿದೆ, ಅದರಲ್ಲೂ ಅಶೋಕ್ ಕರೆದುಕೊಂಡು ಹೋಗಿದ್ದ ತಾಣವನ್ನು ನೋಡಿ ಖುಷಿ ಪಟ್ಟಿದ್ದಾಳೆ ಪ್ರಿಯಾ.
ಪ್ರಿಯಾಳನ್ನು ಅಶೋಕ್ ಕರೆದುಕೊಂಡು ಹೋಗಿದ್ದ ಜಾಗ ಇದೀಗ ವೀಕ್ಷಕರ ಗಮನ ಸೆಳೆದಿದೆ. ಸುತ್ತಮುತ್ತ ಕಣ್ಣ ಹಾಯಿಸಿದಷ್ಟು ದೂರದವರೆಗೂ ಬೆಟ್ಟ, ಗುಡ್ಡ ಹಚ್ಚ ಹಸಿರು ಕಾಣಿಸುತ್ತಿದೆ. ಅಲ್ಲೇ ದೂರದಲ್ಲಿ ತುಂಬಿರುವ ಕೆರೆಯೂ ಕಾಣಿಸ್ತಿದೆ. ಈ ಸುಂದರ ಜಾಗ ಯಾವುದೂ ಎಂದು ಹಲವರು ಪ್ರಶ್ನಿಸಿದ್ರೆ, ಇನ್ನೂ ಕೆಲವು ಅಭಿಮಾನಿಗಳು ಇದು ನಮ್ಮೂರು, ನಮ್ಮ ಜಾಗ ಎಂದಿದ್ದಾರೆ. ಅಷ್ಟಕ್ಕೂ ಈ ತಾಣ ಯಾವುದು ಗೊತ್ತಾ? ರಾಮನಗರದ ಎಸ್ ಆರ್’ಎಸ್ ಬೆಟ್ಟ .
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ಸಮೀಪದಲ್ಲಿರುವ ರೇವಣ ಸಿದ್ದೇಶ್ವರ ಬೆಟ್ಟದ (Revan Siddeshwara Hills) ಸುತ್ತಮುತ್ತಲಿನ ಸುಂದರವಾದ ತಾಣ ಇದು. ರೇವಣ ಸಿದ್ದೇಶ್ವರ ಬೆಟ್ಟ ಇತಿಹಾಸ ಪ್ರಸಿದ್ಧವಾದ ಏಕಶಿಲಾ ಗಿರಿಯಾಗಿದೆ. ಬೆಟ್ಟದ ಮೇಲೆ ರೇವಣ ಸಿದ್ದೇಶ್ವರ ಮಂದಿರವಿದೆ. ಈ ಬೆಟ್ಟದಲ್ಲಿ ರೇವಣ ಸಿದ್ಧರೆನ್ನುವ ಯತಿಗಳು ತಪಸ್ಸು ಮಾಡಿದ್ದರಿಂದ ಈ ಸ್ಥಳಕ್ಕೆ ಅದೇ ಹೆಸರು ಬಂದಿತಂತೆ.
ಇನ್ನು ಬೆಟ್ಟದ ಕೆಳಭಾಗದಲ್ಲಿ ರೇಣುಕಾಂಬ ದೇವಾಲಯ, ಬಸವೇಶ್ವರ ದೇವಾಲಯ, ವೀರಭದ್ರ ಸ್ವಾಮಿ ದೇವಾಲಯ, ಭೀಮೇಶ್ವರ ದೇವಾಲಯ (Bheemeshwara Temple), ಮರುಳ ಸಿದ್ದೇಶ್ವರ ದೇವಾಲಯಗಳನ್ನು ಕಾಣಬಹುದು, ಅಷ್ಟೇ ಅಲ್ಲ ಇಲ್ಲಿ ಪಾಂಡವರು ಬಂದು ಕೆಲ ಸಮಯ ವಾಸ ಮಾಡಿದ್ದರೆಂದು, ಇಲ್ಲಿ ಭೀಮನ ಪಾದದ ಗುರುತು ಇದೆ ಎಂದು ಸಹ ಹೇಳಲಾಗಿದೆ.
ಇಲ್ಲಿ ನಡೆಯುವ ಲಕ್ಷ ದೀಪೋತ್ಸವ, ಜಾತ್ರೆಗೆ ದೂರ ದೂರದೂರುಗಳಿಂದ ಸಾವಿರಾರು ಭಕ್ತರು ಬಂದು ಸೇರುತ್ತಾರೆ. ನೀವು ಚಾರಣ ಪ್ರಿಯರಾಗಿದ್ರೆ ಬೆಂಗಳೂರಿನಿಂದ ಸ್ವಲ್ಪವೇ ದೂರವಿರುವ ಈ ಸುಂದರ ತಾಣಕ್ಕೆ ನೀವು ಚಾರಣ ಮಾಡಿ, ಬೆಟ್ಟದ ಮೇಲಿನ ಲಿಂಗದ ದರ್ಶನ ಪಡೆದು, ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡಬಹುದು.