ಗಡಿಯಲ್ಲಿ ಸಾವು, ನೋವು… ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ: ಯೋಧನ ಪುತ್ರಿ ಸಂಗೀತ ಶೃಂಗೇರಿ
ಚಂದನವನದ ನಟಿ ಸಂಗೀತ ಶೃಂಗೇರಿ ಗಡಿಯಲ್ಲಿ ಯುದ್ಧ ಆಗುತ್ತಿದ್ದು, ಸಾವು ನೋವಿನ ಸಂದರ್ಭದಲ್ಲಿ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.

ಕನ್ನಡ ಸಿನಿಮಾಗಳು, ಸೀರಿಯಲ್ ಹಾಗೂ ಬಿಗ್ ಬಾಸ್ ಕನ್ನಡ ಮೂಲಕ ಜನ ಮನ ಗೆದ್ದ ಸಿಂಹಿಣಿ ಸಂಗೀತ ಶೃಂಗೇರಿಯವರ(Sangeetha Sringeri) ಹುಟ್ಟುಹಬ್ಬ ಇದೇ ಮೇ 13ರಂದು ಇದೆ. ಹುಟ್ಟುಹಬ್ಬ ಸನಿಹದಲ್ಲೆ ಇರುವಾಗ ನಟಿ ದೊಡ್ಡದೊಂದ ನಿರ್ಣಯ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 10 ರ (Bigg Boss Season 10) ಬಳಿಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಸಂಗೀತ ಶೃಂಗೇರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಸಹ ಇದ್ದಾರೆ. ಕಳೆದ ವರ್ಷ ನಟಿ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಭರ್ಜರಿಯಾಗಿಯೇ ಆಚರಿಸಿಕೊಂಡಿದ್ದರು. ಆದರೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಯೋಧನ ಮಗಳಾಗಿರುವ ಸಂಗೀತ ಶೃಂಗೇರಿ.
ಹೌದು ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಸಂಗೀತ, ನನಗೆ ಗೊತ್ತು ಇದು ವರ್ಷದ ಆ ಸಮಯ, ಈ ಸಂದರ್ಭದಲ್ಲಿ ನೀವು ಸರ್ಪ್ರೈಸ್ ನೀಡಲು, ನನಗಾಗಿ ಪ್ರೀತಿಯನ್ನು ಕಳುಹಿಸಲು, ನನ್ನ ಜೊತೆ ನನ್ನ ಹುಟ್ಟುಹಬ್ಬ ಸೆಲೆಬ್ರೇಟ್ (birthday celebration) ಮಾಡಲು ತಯಾರಿ ನಡೆಸಿರುತ್ತೀರಿ. ನಿಮ್ಮ ಕಠಿಣ ಪರಿಶ್ರಮ ಎಂದಿಗೂ ನಿರ್ಲಕ್ಷಕ್ಕೆ ಒಳಗಾಗೋದಿಲ್ಲ. ಯಾಕಂದ್ರೆ ನಿಮ್ಮ ಆ ಪ್ರೀತಿ ನನ್ನ ದಿನವನ್ನು ಮತ್ತಷ್ಟು ವಿಶೇಷವಾಗಿಸಿದೆ ಅನ್ನೋದು ನಿಜಾ.
ಆದರೆ ಈ ವರ್ಷ ವಿಭಿನ್ನವಾಗಿದೆ. ಸದ್ಯ ಗಡಿಯಲ್ಲಿ ಏನೇನೋ ನಡೆಯುತ್ತಿದೆ. ಎಲ್ಲಾದಕ್ಕೂ ನಮ್ಮ ಹೆಮ್ಮೆಯ ಸೈನಿಕರು (soldiers in border) ಗಟ್ಟಿಯಾಗಿಯೇ ನಿಂತು ನಮ್ಮನ್ನು ರಕ್ಷಿಸುತ್ತಿದ್ದಾರೆ. ಅಲ್ಲದೇ ಮುಗ್ಧ ಜೀವಗಳು ಪ್ರಾಣ ಕಳೆದುಕೊಂಡಿವೆ, ಹಲವ ಜೀವನ ಹರಿದು ಹೋಗಿವೆ. ಇದರಿಂದ ನನ್ನ ಹೃದಯ ತುಂಬಿ ಬಂದಿದೆ.
ಹಾಗಾಗಿ ದೇಶದಲ್ಲಿ ಹಲವಾರು ಜನರು ನೋವಿನಲ್ಲಿ ನಲುಗುತ್ತಿರುವಾಗ, ಎಷ್ಟೋ ಜನ ತಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿರಲಿ ಎಂದು ಬೇಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ನನ್ನ ಹುಟ್ಟುಹಬ್ಬವನ್ನು ಆಚರಿಸೋದು ನನಗೆ ಸರಿ ಎಂದೆನಿಸುವುದಿಲ್ಲ ಎಂದಿದ್ದಾರೆ ಸಂಗೀತ ಶೃಂಗೇರಿ.
ಈ ವರ್ಷ ನಾನು ಯಾಕೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಬಯಸುವುದಿಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಾನು ನಂಬಿದ್ದೇನೆ. ಇದು ನನ್ನ ಬಗ್ಗೆ ಅಲ್ಲ, ನೋಯುತ್ತಿರುವವರೊಂದಿಗೆ ಸಹಾನುಭೂತಿ (empathy) ಮತ್ತು ಒಗ್ಗಟ್ಟಿನಿಂದ ನಿಲ್ಲುವುದರ ಬಗ್ಗೆ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಸಂಗೀತ ಶೃಂಗೇರಿ.
ನೋವಲ್ಲಿ ಇವರುವರನ್ನು, ಸೈನಿಕರನ್ನು ನಿಮ್ಮ ಹೃದಯದಲ್ಲಿಡಿ, ನಿಮ್ಮ ಪ್ರಾರ್ಥನೆಯಲ್ಲಿರಲಿ. ಪ್ರತಿಕ್ಷಣ ನನ್ನ ಮೇಲೆ ಪ್ರೀತಿಯನ್ನು ಸುರಿಸಿರೋದಕ್ಕೆ ತುಂಬಾನೆ ಧನ್ಯವಾದಗಳು. ಮೌನದಲ್ಲೂ ನಿಮ್ಮ ಪ್ರೀತಿ ನಮಗೆ ತಲುಪಲಿದೆ ಎಂದಿದ್ದಾರೆ.
ಒಬ್ಬ ಯೋಧನ ಮಗಳಾಗಿ ಇಂಥ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ಈ ನಿಮ್ಮ ಅಭಿಮಾನ...ದೇಶಭಕ್ತಿಗೆ...ನಿಮ್ಮ ಚಿಂತನೆಗೆ... ನಿಮ್ಮ ಕಾಳಜಿಗೆ ನನ್ನದೊಂದು ಸಲಾಂ ಎಂದು ಹೇಳಿದ್ದಾರೆ.