ಕನ್ನಡದಲ್ಲಿ ಬರ್ತಿದೆ ಭಯಗೊಳಿಸೋ ವೆಬ್ ಸೀರೀಸ್: ಶ್ರುತಿ ನಾಯ್ಡು ನಿರ್ಮಾಣದ ಅಯ್ಯನ ಮನೆ
ರಮೇಶ್ ಇಂದಿರಾ ನಿರ್ದೇಶಿಸಿರುವ ಈ ವೆಬ್ ಸೀರೀಸ್ ಹೆಸರು ‘ಅಯ್ಯನ ಮನೆ’. ಏ.25ರಂದು ಜೀ5ನಲ್ಲಿ ಈ ವೆಬ್ ಸೀರೀಸ್ ಪ್ರಸಾರವಾಗಲಿದೆ.

ಕನ್ನಡದಲ್ಲಿ ವೆಬ್ ಸೀರೀಸ್ ಭರಾಟೆ ಅಷ್ಟೇನೂ ಜೋರಿರಲಿಲ್ಲ. ಕೆಲವು ಪ್ರಯತ್ನಗಳಾಗಿದ್ದರೂ ಅಂಥಾ ಯಶಸ್ಸು ದೊರೆತಿಲ್ಲ. ಇದೀಗ ಈ ವಿಭಾಗದಲ್ಲಿ ದೊಡ್ಡ ಮಟ್ಟಿನ ಪ್ರಯತ್ನ ನಡೆದಿದೆ.
ಶ್ರುತಿ ನಾಯ್ಡು ಏಳು ಎಪಿಸೋಡಿನ ವೆಬ್ ಸೀರೀಸ್ ಅನ್ನು ನಿರ್ಮಾಣ ಮಾಡಿದ್ದಾರೆ. ರಮೇಶ್ ಇಂದಿರಾ ನಿರ್ದೇಶಿಸಿರುವ ಈ ವೆಬ್ ಸೀರೀಸ್ ಹೆಸರು ‘ಅಯ್ಯನ ಮನೆ’. ಏ.25ರಂದು ಜೀ5ನಲ್ಲಿ ಈ ವೆಬ್ ಸೀರೀಸ್ ಪ್ರಸಾರವಾಗಲಿದೆ.
ತೊಂಭತ್ತರ ದಶಕದಲ್ಲಿ ಚಿಕ್ಕಮಗಳೂರಿನ ಮನೆಯೊಂದರಲ್ಲಿ ನಡೆಯುವ ಕತೆ ಇದಾಗಿದ್ದು, ಆ ಮನೆಯಲ್ಲಿ ನಿಗೂಢ ಕೊಲೆಗಳು ಸಂಭವಿಸುತ್ತಿರುತ್ತವೆ. ಆ ಕೊಲೆಯ ಹಿಂದಿನ ರಹಸ್ಯದ ಕತೆಯನ್ನು ಈ ವೆಬ್ ಸೀರಿಸ್ ಹೊಂದಿದೆ.
ಆ ದೊಡ್ಡ ಮನೆಗೆ ಸೊಸೆಯೊಬ್ಬಳು ಪ್ರವೇಶ ಮಾಡುವಲ್ಲಿಂದ ಕತೆ ಶುರುವಾಗಲಿದೆ. ಈ ಮಹತ್ವದ ವೆಬ್ ಸೀರೀಸಿನಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್, ರಮೇಶ್ ಇಂದಿರಾ, ಶೋಭರಾಜ್ ಪಾವೂರ್ ನಟಿಸಿದ್ದಾರೆ.
ಈ ಕುರಿತು ಹೆಚ್ಚಿಗೆ ಮಾಹಿತಿ ನೀಡಲು ನಿರಾಕರಿಸಿರುವ ನಿರ್ಮಾಪಕಿ ಶ್ರುತಿ ನಾಯ್ಡು, ‘ನಮಗೆ ಒಳ್ಳೆಯ ಪ್ಲಾಟ್‌ಫಾರ್ಮ್ ಸಿಕ್ಕಿದೆ. ಹಾಗಾಗಿ ಒಳ್ಳೆಯ ಒರಿಜಿನಲ್ ಕತೆಯನ್ನು ಹೆಚ್ಚಿನ ಜನರಿಗೆ ತಲುಪಿಸಲು ಸಾಧ್ಯವಾಗಲಿದೆ. ಸದ್ಯ ಇದಕ್ಕಿಂತ ಹೆಚ್ಚೇನೂ ಹೇಳಲಾರೆ’ ಎಂದಿದ್ದಾರೆ.