ನಂದಗೋಕುಲದ ಸೊಸೆ ಮೀನಾ ಪಾತ್ರಕ್ಕೆ ವೀಕ್ಷಕರು ಫಿದಾ... ಯಾರೀಕೆ ನೆನಪಿದ್ಯಾ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಂದಗೋಕುಲ ಧಾರಾವಾಹಿಯಲ್ಲಿ ಮೀನಾ ಪಾತ್ರದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೀನಾ ನಂದ ಮನೆಗೆ ಎಂಟ್ರಿ ಕೊಟ್ಟ ಬಳಿಕ ಕಥೆ ಸಖತ್ ಮನರಂಜನೆ ಕೊಡುತ್ತಿದೆ.

ಕಲರ್ಸ್ ಕನ್ನಡದಲ್ಲಿ (Colors Kannada) ಇತ್ತೀಚೆಗೆ ಶುರುವಾದ ಧಾರಾವಾಹಿ ನಂದಗೋಕುಲ. ಹಳೆ ಸೀರಿಯಲ್ ಹೆಸರನ್ನು ಇಟ್ಟುಕೊಂಡು ಹೊಸದಾಗಿ ಬಂದ ಧಾರಾವಾಹಿ ಇದು. ಫ್ರೀತಿಸಿ ಮದುವೆಯಾದ ನಂದ ಕುಮಾರ್, ತನ್ನ ಮಕ್ಕಳು ಯಾವತ್ತೂ ಪ್ರೀತಿಸಿ ಮದುವೆಯಾಗಬಾರದು ಎನ್ನುವ ಶರತ್ತು ವಿಧಿಸಿರುತ್ತಾನೆ ಮಕ್ಕಳಿಗೆ.
ಆರಂಭದಿಂದಲೂ ಸ್ಟ್ರಿಕ್ಟ್ ಅಪ್ಪ ಆಗಿ, ಎದುರಲ್ಲೇ ಇರುವ ಹೆಂಡತಿಯ ತವರು ಮನೆಯವರಿಗಿಂತಲೂ ತಾವೇ ಒಂದು ಕೈ ಮೇಲೆ ಇರುವಂತೆ ನಡೆದುಕೊಳ್ಳುವ ವ್ಯಕ್ತಿ ನಂದ. ಒಂದೇ ರೀತಿ ಕತೆ ನೋಡಿ ಜನರಿಗೆ ಸ್ವಲ್ಪ ಬೋರ್ ಹೊಡೆಸಿದ್ದು, ನಿಜಾ. ಆದರೆ ಇದೀಗ ಧಾರಾವಾಹಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಪ್ರೀತಿಯನ್ನೇ ದ್ವೇಷಿಸುವ ನಂದನ ಮಗ ಕೇಶವ ತಂದೆಗೆ ನೋಡಿದರೇನೆ ಆಗದ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಆಕೆಯನ್ನು ಮನೆಗೂ ಕರೆದುಕೊಂಡು ಬಂದಿದ್ದಾನೆ. ಇನ್ನು ಕತೆ ಪೂರ್ತಿಯಾಗಿ ಸೀರಿಯಸ್ ಮೋಡ್ ಗೆ ತಿರುಗುತ್ತೆ ಎಂದು ವೀಕ್ಷಕರು ಅಂದುಕೊಂಡಿದ್ದರೆ, ಮದುವೆಯಾಗಿ ಬಂದ ಮೀನಾ ಕಥೆಯೇ ಉಲ್ಟಾ ಹೊಡೆಯುವಂತೆ ಮಾಡಿದ್ದಾಳೆ.
ಮನೆಯಲ್ಲಾದ ಅವಂತಾರದಿಂದ ಬೇಸರದಲ್ಲಿ ಎಲ್ಲರೂ ಊಟ ಮಾಡದೆ ಉಪಾವಾಸ ಮಾಡಿಕೊಂಡಿದ್ದಾರೆ. ಪಾಪ ಇವತ್ತಷ್ಟೇ ಬಂದ ಅತ್ತಿಗೆಗೆ ಹಸಿವಾಗಬಹುದು ಎಂದು ರಕ್ಷಾ ಬಟ್ಟಲು ತುಂಬ ಅನ್ನ ತುಂಬಿ ಅತ್ತಿಗೆಗೆ ತಂದು ಕೊಡುತ್ತಾಳೆ. ಇನ್ನೇನು ಮೀನಾ ಊಟಕ್ಕೆ ಕೈ ಹಾಕಬೇಕು ಎನ್ನುವಾಗಲೇ ಅತ್ತೆ ಬಂದು ಬಾಯಿ ತುಂಬಾ ಬೈದು, ಮನೆಯಲ್ಲಿ ಎಲ್ಲರೂ ಹಸಿವಿನಿಂದ ಮಲಗಿದ್ರೆ, ನೀನು ಬಟ್ಟಲು ತುಂಬಾ ಊಟ ತುಂಬಿ ಕೂತಿದ್ದೀಯಾ ಎನ್ನುತ್ತಾರೆ.
ಅಮ್ಮ ಬೈದಿರೋದನ್ನು ನೋಡಿ ಅತ್ತಿಗೆ ಬೇಜಾರಿನಿಂದ ಊಟ ಬಿಟ್ಟು ಅಳುತ್ತಾರೆ ಅಂತ ರಕ್ಷಾ ಅಂದುಕೊಂಡ್ರೆ ಅಲ್ಲಿ ಆಗಿರೋದೆ ಉಲ್ಟಾ. ಮುಷ್ಟಿ ಅಲ್ಲಿ ಅನ್ನ ತುಂಬಿ ಊಟ ಮಾಡಿ ಮುಗಿಸುವ ಮೀನಾ, ನನ್ನ ಮೇಲೆ ಈ ಮನೆಯವರು ಇನ್ನೊಂದು ೧೦ ದಿನ ಆದ್ರೂ ಮುನಿಸಿಕೊಂಡು, ಬೈಯ್ಯುತ್ತಾರೆ. ಹಾಗಾಗಿ ನನಗೆ ಬೈಸಿಕೊಳ್ಳಲು ಶಕ್ತಿ ಬೇಕು, ಅದಕ್ಕಾಗಿ ನಾನು ಊಟ ಬಿಡಲ್ಲ ಎನ್ನುತ್ತಾಳೆ.
ಮರುದಿನ ಕೆಲಸಕ್ಕೆ ಹೊರಟು ನಿಂತ ಮೀನಾಳನ್ನು ಅತ್ತೆ ತಡೆದು, ಮಾವ ಕೆಲಸಕ್ಕೆ ಹೋಗೋದು ಬೇಡ ಅಂದ್ರೆ ನೀನು ಹೋಗ್ತಿಯಾ ಎಂದು ಕೇಳಿದ್ರೆ, ಮೀನಾ ಅಯ್ಯೋ ಇಲ್ಲಪ್ಪಾ ಮಾವ ಹಾಕಿದ ಗೆರೆ ದಾಟಲ್ಲ ನಾನು, ಸರ್ಕಾರಿ ಕೆಲಸವನ್ನು ದೇವರ ಕೆಲಸ ಅನ್ನುತ್ತಾರೆ. ಅಂತಹ ಕೆಲಸಕ್ಕೆ ದೇವರ ಅಪ್ಪಣೆ ಇಲ್ಲದೇ ಹೋಗೋದು ಸರೀನಾ? ನಾನು ಕೆಲಸಕ್ಕೆ ಹೋಗಿ ಬರ್ತೀನಿ ಮಾವ ಎನ್ನುತ್ತಾಳೆ, ಕೇಶವ ಸೇರಿ ಮನೆಯವರೆಲ್ಲಾ ಕಕ್ಕಾಬಿಕ್ಕಿಯಾಗುತ್ತಾರೆ.
ಮೀನಾಳ ಲವಲವಿಕೆಯ ಪಾತ್ರ ತುಂಬಾನೆ ಮುದ್ದಾಗಿ ಮೂಡಿ ಬಂದಿದೆ. ಯಾವಾಗ್ಲೂ ಅಳುಮುಂಜಿ ಪಾತ್ರ ನೋಡಿ ಬೇಸರವಾಗಿದ್ದ ವೀಕ್ಷಕರಿಗೆ ಈ ಪಾತ್ರ ಇಷ್ಟವಾಗಿದೆ. ಹಾಗಾಗಿ ಸೀರಿಯಲ್ ಕಡೆಗೆ ವೀಕ್ಷಕರ ಒಲವು ಕೂಡ ಹೆಚ್ಚಾದಂತೆ ಕಾಣುತ್ತಿದೆ. ಮಾವನಿಂದ ತಕ್ಕ ಸೊಸೆ ಮೀನಾ. ಇವರ ಮದುವೆಯಾದ ಮೇಲೆ ಸೀರಿಯಲ್ ಚೆನ್ನಾಗಿ ಬರ್ತಿದೆ. ಸೂಪರ್ ಸೀರಿಯಲ್, ಈ ವರ್ಷ ಮನಮೆಚ್ಚಿದ ಸೊಸೆ ಪ್ರಶಸ್ತಿ ಈಕೆಗೆ ಎಂದಿದ್ದಾರೆ.
ಮೀನಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮೇಘಾ ಎಸ್ ವಿ. (Megha SV)ಇವರು ಈ ಹಿಂದೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಇಷ್ಟ ದೇವತೆ, ಜೀವ ಹೂವಾಗಿದೆ ಹಾಗೂ ಜೀ ಕನ್ನಡದ ನಾಗಿಣಿ ಧಾರವಾಹಿಯಲ್ಲೂ ಸಹ ಮೇಘಾ ನಟಿಸಿದ್ದರು.
ಅಷ್ಟೇ ಅಲ್ಲ ಇವರು ಕಲರ್ಸ್ ಕನ್ನಡದ ಕಪಲ್ಸ್ ರಿಯಾಲಿಟಿ ಶೋ ರಾಜಾ ರಾಣಿ ಸೀಸನ್ 3 ವಿನ್ನರ್ (Raja Rani Season 3 Winner) ಕೂಡ ಹೌದು. ಇವರ ಪತಿ ಸಂಜಯ್. ಇಬ್ಬರ ಜೋಡಿಯನ್ನು ಜನ ಇಷ್ಟಪಟ್ಟಿದ್ದರು. ಈಕೆ ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು.