700 ಎಪಿಸೋಡ್ ಗಳನ್ನು ಪೂರೈಸಿದ ಸಂಭ್ರಮದಲ್ಲಿ 'Lakshmi Nivasa' ತಂಡ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ 700 ಎಪಿಸೋಡ್ ಗಳನ್ನು ಪೂರೈಸಿದ್ದು, ಈ ಸಂಭ್ರಮವನ್ನು ಧಾರಾವಾಹಿ ತಂಡ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಬಹು ತಾರಾಗಣವನ್ನು ಹೊಂದಿರುವ ಹಾಗೂ ಹಲವು ಕಥೆಗಳನ್ನು ಹೊಂದಿರುವ ಧಾರಾವಾಹಿಯಾಗಿದ್ದು, ಅದ್ಭುತವಾಗಿ ಮೂಡಿ ಬರುತ್ತಿದೆ.
ಸೀರಿಯಲ್ ಆರಂಭವಾದಾಗಿನಿಂದ ‘ಲಕ್ಷ್ಮೀ ನಿವಾಸ’ ತನ್ನ ಕಥೆ, ಟ್ವಿಸ್ಟ್ ಮೂಲಕ ವೀಕ್ಷಕರನ್ನು ಗೆಲ್ಲುತ್ತಾ, ಉತ್ತಮ ಟಿ ಆರ್ ಪಿ ಪಡೆದು ಸಾಗುತ್ತಿತ್ತು. ನಂಬರ್ 1 ಸ್ಥಾನ ಮತ್ತು ನಂಬರ್ 2 ಸ್ಥಾನಗಳ ಮೂಲಕ ಇಲ್ಲಿವರೆಗೆ ಜನರಿಗೆ ಮನರಂಜನೆ ನೀಡುತ್ತಾ ಬಂದಿರುವ ಲಕ್ಷ್ಮೀ ನಿವಾಸ ಹೊಸ ಮೈಲುಗಲ್ಲು ತಲುಪಿದೆ.
ಹೌದು ಲಕ್ಷ್ಮೀ ನಿವಾಸ ಧಾರಾವಾಹಿ ಯಶಸ್ವಿಯಾಗಿ ಬರೋಬ್ಬರಿ 700 ಸಂಚಿಕೆಗಳನ್ನು ಪೂರೈಸಿದೆ. ಇದೇ ಸಂಭ್ರಮದಲ್ಲಿ ಸೀರಿಯಲ್ ತಂಡ ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡಿ, ಕಲಾವಿದರಿಗೆ ಸ್ಮರಣಿಕೆ ನೀಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 700 ಎಪಿಸೋಡ್ ಗಳ ಸಂಭ್ರಾಚರಣೆಯಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯ ನಟ-ನಟಿಯರೆಲ್ಲಾ ಆಗಮಿಸಿ ಸಂಭ್ರಮಿಸಿದ್ದಾರೆ. ನಟಿ ಮಾನಸ ಮನೋಹರ್ ಹಲವು ಫೋಟೊಗಳನ್ನು ಸೊಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಲಕ್ಷ್ಮೀ ನಿವಾಸ’ ಸೀರಿಯಲ್ ಸಂಭ್ರಮಾಚರಣೆಯಲ್ಲಿ ಹಿರಿಯ ನಿರ್ದೇಶಕ ಗಿರೀಶ್ ಕಾಸವಳ್ಳಿ ಸಹ ಆಗಮಿಸಿದ್ದು, ಧಾರಾವಾಹಿ ನಟ-ನಟಿಯರಿಗೆ ನೆನಪಿನ ಕಾಣಿಕೆ ನೀಡಿದ ಹರಸಿದ್ದಾರೆ. ಇಲ್ಲಿದೆ ಸಂಭ್ರಮಾಚರಣೆಯ ಸುಂದರ ಫೋಟೊಗಳು.
ಲಕ್ಷ್ಮೀ ನಿವಾಸ ಧಾರಾವಾಹಿಯ ಕಥೆ ಹೇಳಬೇಕು ಅಂದ್ರೆ, ಲಕ್ಷ್ಮೀ ಮತ್ತು ಶ್ರೀನಿವಾಸರ ದೊಡ್ಡ ಕನಸಿನಿಂದ ಆರಂಭವಾಗುವ ಧಾರಾವಾಹಿ ಇದು. ಲಕ್ಷ್ಮೀಗೆ ಮಕ್ಕಳ ಮದುವೆ ಮಾಡುವ ಕನಸು ಇದ್ದರೆ, ಶ್ರೀನಿವಾಸರಿಗೆ ತಮ್ಮ ಸ್ವಂತ ಮನೆ ಕಟ್ಟುವ ಕನಸು. ಇಬ್ಬರ ಕನಸು ಹೇಗೆ ಸಾಗುತ್ತದೆ ಅನ್ನೋದು ಕಥೆ.
ಲಕ್ಷ್ಮೀ ಕನಸಿನಂತೆ ಮಕ್ಕಳ ಮದುವೆಯೇನೋ ಆಗಿದೆ. ಆದರೆ ಯಾವ ಮದುವೆಯಲ್ಲೂ ಸುಖ ಇಲ್ಲ. ಶ್ರೀನಿವಾಸ ಕನಸಿನಂತೆ ಮನೆ ಕಟ್ಟೋದಕ್ಕೂ ಆಗಲಿಲ್ಲ. ಇನ್ನೊಂದೆಡೆ ಹಿರಿಯ ಮಗ ಸಂತೋಷ್ ಸ್ವಾರ್ಥದಿಂದ ತನಗೆ ಬೇಕಾದದ್ದು ಸಾಧಿಸಿದರೆ, ಕಿರಿಯ ಮಗ ತನ್ನ ಹೆಂಡ್ತಿ ಸೆರಗು ಹಿಡಿದು ಹೋಗಿದ್ದಾನೆ.
ಸದ್ಯಕ್ಕಂತೂ ಧಾರಾವಾಹಿಯಲ್ಲಿ ಪ್ರತಿಯೊಬ್ಬರ ಜೀವನ ಒಂದೊಂದು ದಿಕ್ಕಿನಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಧಾರಾವಾಹಿಯಲ್ಲಿ ಏನೆಲ್ಲಾ ತಿರುವು ಸಿಗುತ್ತದೆ. ಕಥೆಯಲ್ಲಿ ಏನು ನಡೆಯುತ್ತೆ ಅನ್ನೋದನ್ನು ಕಾದು ನೋಡಬೇಕು.