ಗೌರಿಶಂಕರ ಸೀರಿಯಲ್ ಮೂಲಕ ಮತ್ತೆ ಕಿರುತೆರೆಯಲ್ಲಿ ಮಿಂಚಲಿದ್ದಾರೆ ಕೌಸ್ತುಭ ಮಣಿ
ನನ್ನರಸಿ ರಾಧೆ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ಕೌಸ್ತುಭ ಮಣಿ, ಇದೀಗ ಗೌರಿ ಶಂಕರ ಸೀರಿಯಲ್ ಮೂಲಕ ಮತ್ತೆ ಕಿರುತೆರೆಯಲ್ಲಿ ಮಿಂಚಲು ಹೊರಟಿದ್ದಾರೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಸೀರಿಯಲ್ ನಲ್ಲಿ ಇಂಚರಾ ಪಾತ್ರದ ಮೂಲಕ ಜನಮನ ಗೆದ್ದಿದ್ದ ನಟಿ ಕೌಸ್ತುಭ ಮಣಿ, ಇದೀಗ ಸಿನಿಮಾಗಳಲ್ಲಿ ನಟಿಸಿದ ಬಳಿಕೆ ಮತ್ತೆ ಕಿರುತೆರೆಯಲ್ಲಿ ಮಿಂಚಲು ರೆಡಿ ಆಗ್ತಿದ್ದಾರೆ.
ಕನ್ನಡ ತೆಲುಗು ಸೀರಿಯಲ್‌ಗಳಲ್ಲಿ ಹಾಗೂ ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಕೌಸ್ತುಭ (Kaustubha Mani) ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಗೌರಿಶಂಕರ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸ್ಟಾರ್ ಸುವರ್ಣ (Star Suvarna) ಈಗಾಗಲೇ ಸೀರಿಯಲ್ ಪ್ರೋಮೋ ಬಿಡುಗಡೆ ಮಾಡಿದ್ದು, ಹೆಣ್ಣು ಇರೋದು ಗಂಡಿನ ಸೇವೆ ಮಾಡೋಕೆ ಎನ್ನುವ ಶಿವರುದ್ರಪ್ಪನ ಮಗ ಶಂಕರ, ಹುಡುಗರು ಯಾವತ್ತೂ ಹುಡುಗಿಯರ ಹಿಂದೆ ಸುತ್ತಬಾರದು, ಹುಡುಗಿಯರೇ ಹುಡುಗರ ಹಿಂದೆ ಬರಬೇಕು ಎಂದು ಹೇಳುತ್ತಲೇ ನಾಯಕಿ ಗೌರಿಯ ಪ್ರೀತಿಯಲ್ಲಿ ಮೊದಲ ನೋಟದಲ್ಲೇ ಬೀಳುವ ಕಥೆ ಇದು.
ಒರಟು, ರೌಡಿ ಹುಡುಗನ ಪಾತ್ರದಲ್ಲಿ ಯಶವಂತ್ ನಟಿಸಿದ್ದಾರೆ. ಹುಡುಗಿಯ ಹಿಂದೆ ಹಿಂದೆ ಸುತ್ತಿ, ಕೊನೆಗೆ ಬಿಲ್ಡಪ್ ಮೂಲಕ ಪ್ರಪೋಸ್ ಮಾಡುವ ಶಂಕರನಿಗೆ, ಸರಿಯಾಗಿಯೇ ತಿರುಗೇಟು ನೀಡುವ ಗೌರಿಯ ಕಥೆ ಇದಾಗಿದೆ.
ಯಶವಂತ್ (Yashvant) ಈ ಹಿಂದೆ ಕೆಲವು ಕನ್ನಡ ಸೀರಿಯಲ್ ಗಳಲ್ಲಿ ನಾಯಕನಾಗಿ ನಟಿಸಿದ್ದರು. ಚಂದನ ಅನಂತಕೃಷ್ಣ ಜೊತೆ ಹೂಮಳೆ ಸೀರಿಯಲ್ ನಲ್ಲಿ ಯಧುವೀರ್ ಆಗಿ ನಟಿಸಿದ್ದರು. ಅಲ್ಲದೇ ಇವಳು ಸುಜಾತ ಸೀರಿಯಲ್ ನಲ್ಲೂ ನಟಿಸಿದ್ದರು.
ಇನ್ನು ನಾಯಕಿ ಕೌಸ್ತುಭ ಈಗಾಗಲೇ ಯುವ ಪ್ರತಿಭೆ ತೇಜ್ ಜೊತೆ ನಟಿಸಿ, ನಿರ್ದೇಶನ ಮಾಡುತ್ತಿರುವ ಸಿನಿಮಾ 'ರಾಮಾಚಾರಿ 2.0' ಚಿತ್ರಕ್ಕೆ ನಾಯಕಿಯಾಗಿ ನಟಿಸಿದ್ರು, ಇದೀಗ ಶಿವರಾಜ್ ಕುಮಾರ್ ನಟಿಸಿರುವ ಅರ್ಜುನ್ ಜನ್ಯ ನಿರ್ದೇಶನದ ಚಿತ್ರದಲ್ಲೂ ಕೌಸ್ತುಭ ನಟಿಸುತ್ತಿದ್ದಾರೆ.
ಕೌಸ್ತುಭಗೆ ಧಾರಾವಾಹಿ ನಟನೆಯ ಆರಂಭದ ದಿನಗಳಿಂದಲೇ ಸಿನಿಮಾದಲ್ಲಿ ನಟಿಸಬೇಕು ಅನ್ನುವ ಆಸೆ ಇತ್ತಂತೆ. ಆದರೆ ಇವರಿಗೆ ಕಿರುತೆರೆ, ಹಿರಿತೆರೆ ಅನ್ನುವ ವ್ಯತ್ಯಾಸ ಏನೂ ಇಲ್ಲ. ಎರಡೂ ಒಂದೇ. ಕೆಲಸದ ಮೇಲಿರುವ ಪ್ರೀತಿ ಹಾಗೂ ಗೌರವ ಎರಡಕ್ಕೂ ಸಮಾನವಾಗಿದೆ ಎನ್ನುವ ಕೌಸ್ತುಭ, ಸಿನಿಮಾದಲ್ಲೂ ಸೀರಿಯಲ್ ಗಳಲ್ಲೂ ಜೊತೆಯಾಗಿ ನಟಿಸುತ್ತಿದ್ದಾರೆ.