ಬಿಗ್‌ಬಾಸ್ ಎಲಿಮನೇಷನ್: ಪೂರ್ವ ನಿರ್ಧರಿತವೋ, ವೋಟ್ ಮೇಲೆ ನಡೆಯುತ್ತಾ?
ತೆಲುಗಿನಲ್ಲಿ ಸೆ.31ರಿಂದ ಬಿಗ್ ಬಾಸ್ ರಿಯಾಲಿಟ್ ಶೋ ಆರಂಭವಾಗುತ್ತಿದ್ದು, ಕನ್ನಡದಲ್ಲಿಯೂ ಇನ್ನೇನು ಕೆಲವೇ ದಿನಗಳಲ್ಲಿ ಈ ಶೋ ಆರಂಭವಾಗಲಿದೆ. ಆದರೆ, ಪ್ರತೀ ಬಿಗ್‌ಬಾಸ್ ಶುರುವಾದಾಗಲೂ ಎಲಿಮನೇಷನ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಇದು ಪೂರ್ವ ನಿರ್ಧರಿತವೆಂದು ಕೆಲವರು ಹೇಳುವುದಿದೆ. ಸ್ಪರ್ಧಿಗಳು ಎಷ್ಟು ದಿನ ಮನೆಯೊಳಗೆ ಇರಲು ಒಪ್ಪುತ್ತಾರೋ ಅದರ ಆಧಾರದ ಮೇಲೆ ಅವರಿಗೆ ವೇತನ ನಿಗದಿಪಡಿಸಲಾಗುವುದೆಂದೂ, ಕೆಲವರನ್ನು ಹೊರತು ಪಡಿಸಿ, ಬಹುತೇಕ ಸ್ಪರ್ಧಿಗಳು ಎಷ್ಟು ದಿನ ಇರಬೇಕೆಂಬುವುದೂ ನಿರ್ಧಾರವಾಗಿರುತ್ತದೆ ಎನ್ನಲಾಗುತ್ತದೆ. ಏನು ಇದರ ಸತ್ಯಾಸತ್ಯತೆ?
ಅಕ್ಕಿನೇನಿ ನಾಗಾರ್ಜುನ ನೇತೃತ್ವದಲ್ಲಿ ತೆಲುಗಿನ ಬಿಗ್‌ಬಾಸ್‌ಗೆ ಸೆ.31ರಂದು ಚಾಲನೆ ಸಿಗಲಿದ್ದು, ಕನ್ನಡ ಬಿಗ್‌ಬಾಸ್‌ಗೆ ಈ ಬಾರಿಯೂ ಸುದೀಪ್ ಆ್ಯಂಕರ್ ಆಗುತ್ತಾರೋ, ಅಥವಾ ಬೇರೆಯವರೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಹುಟ್ಟು ಹಬ್ಬಕ್ಕೆ ಸಂಬಂಧಿಸಿದಂತೆ ಸುದೀಪ್ ಇಂದು ಪ್ರೆಸ್ ಮೀಟ್ ಮಾಡಿದ್ದು, ಬೀಗ್ ಬಾಸ್ ಆ್ಯಂಕರಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಉತ್ತರ ನೀಡಿದ್ದು, ಕಿಚ್ಚನೇ ಈ ಸಲದ ಕನ್ನಡ ಬಿಗ್ ಬಾಸ್ ನಿರೂಪಣೆ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕಿಲ್ಲ.
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕುತೂಹಲಕಾರಿ ವಿಷಯಗಳು, ಹಿಂದಿನ ಸೀಸನ್‌ಗಳಲ್ಲಿ ಏನಾಯಿತು ಎಂಬುದನ್ನು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಅನೇಕ ಬಿಗ್ ಬಾಸ್ ಅಭಿಮಾನಿಗಳು ಚರ್ಚಿಸುತ್ತಿರುವ ವಿಷಯವೆಂದರೆ ಬಿಗ್ ಬಾಸ್ ರಿಯಾಲಿಟ್ ಶೋನಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಹೇಗಿರುತ್ತದೆ ಎಂಬುದು.
ಸಾಮಾನ್ಯವಾಗಿ ಮೇಲ್ನೋಟಕ್ಕೆ ಕಂಡು ಬರುವಂತೆ ಎಲಿಮಿನೇಷನ್ ಪ್ರಕ್ರಿಯೆಯನ್ನು ಪ್ರೇಕ್ಷಕರ ಮತದಾನದ ಮೂಲಕ ನಿರ್ಧರಿಸಲಾಗುತ್ತದೆ. ಈ ಮಟ್ಟಿಗೆ ಪ್ರೇಕ್ಷಕರು ಮತ ಚಲಾಯಿಸಬೇಕೆಂದು ಬಿಗ್ ಬಾಸ್ ಆಯೋಜಕರು ಕೋರುತ್ತಾರೆ. ಬಿಗ್ ಬಾಸ್ ಸ್ಪರ್ಧಿಗಳು ಆ ವಾರ ನಡೆಯುವ ಟಾಸ್ಕ್ ಹಾಗೂ ಸ್ಪರ್ಧೆಗಳಲ್ಲಿ ಹೆಚ್ಚು ನಕಾರಾತ್ಮಕ ಅಂಶಗಳನ್ನು ಹೊಂದಿರುವ ಸ್ಪರ್ಧಿಯನ್ನು ನಾಮನಿರ್ದೇಶನ ಮಾಡುತ್ತಾರೆ. ಹೆಚ್ಚಿನ ಮತದಾನ ನಾಮನಿರ್ದೇಶನಗಳು ಬಂದ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಾರೆ. ಈ ವಿಷಯದಲ್ಲಿ ಕ್ಯಾಪ್ಟನ್ ಆದೋರಿಗೆ ಕೆಲವೊಮ್ಮೆ ಎಲಿಮನೇಟ್ ತಡೆಯುವ ವಿಶೇಷ ಅಧಿಕಾರವನ್ನೂ ಬಿಗ್ ಬಾಸ್ ನೀಡಿರುತ್ತಾರೆ.
ಉದಾಹರಣೆಗೆ ಮೊದಲ ವಾರ ಆರು ಸ್ಪರ್ಧಿಗಳು ಎಲಿಮಿನೇಷನ್‌ಗೆ ನಾಮನಿರ್ದೇಶನಗೊಂಡರೆ, ಅವರೆಲ್ಲರೂ ಪ್ರೇಕ್ಷಕರನ್ನು ವಿನಂತಿಸಿಕೊಂಡು ಹೆಚ್ಚು ಮತಗಳನ್ನು ಪಡೆಯಬೇಕಾಗುತ್ತದೆ. ಎಲ್ಲರಿಗಿಂತ ಕಡಿಮೆ ಮತಗಳನ್ನು ಪಡೆದ ಸ್ಪರ್ಧಿಯನ್ನು ಈ ರಿಯಾಲಿಟಿ ಶೋನ ನಿರೂಪಕರು ಎಲಿಮನೇಟ್ ಆಗಿರುವುದಾಗಿ ಘೋಷಿಸುತ್ತಾರೆ. ಉಳಿದವರು ಸೇಫ್. ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ ಇದು. ಆದರೆ, ಈ ಪ್ರಕ್ರಿಯೆ ಸೀಸನ್‌ನಿಂದ ಸೀಸನ್‌ಗೆ ಬದಲಾಗುವು ಸಾಧ್ಯತೆಯೂ ಇರುತ್ತದೆ. ಈ ಬಗ್ಗೆ ಸಾಮಾನ್ಯವಾಗಿ ಯಾವುದೇ ಕ್ಲಾರಿಟಿ ಇರುವುದಿಲ್ಲ.
ಆದರೆ ಪ್ರೇಕ್ಷಕರಲ್ಲಿ ಎಲಿಮಿನೇಷನ್ ಪ್ರಕ್ರಿಯೆಯ ಬಗ್ಗೆ ಬಹಳಷ್ಟು ಅನುಮಾನಗಳಿವೆ. ಅನೇಕ ಸಂದರ್ಭಗಳಲ್ಲಿ ಎಲಿಮಿನೇಷನ್ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದೂ ಇದೆ. ಆದರೆ, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಎಷ್ಟೇ ಚರ್ಚೆಯಾದರೂ ಬಿಗ್ ಬಾಸ್ ಆಯೋಜಕರು ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯನ್ನೂ ಮಾಡುವುದಿಲ್ಲ ಎಂಬುವುದು ವಿಶೇಷ.
ಬಿಗ್ ಬಾಸ್ ಎಲಿಮಿನೇಷನ್ ಪ್ರೇಕ್ಷಕರ ಮತದಾನದ ಪ್ರಕಾರ ಜೆನ್ಯೂನ್ ಆಗಿದೆಯೇ ಅಥವಾ ಅವರು ಬಯಸಿದವರನ್ನು ರಕ್ಷಿಸುವ ಮೂಲಕ ವಂಚನೆ ಮಾಡುತ್ತಿದ್ದಾರೆಯೇ ಎಂಬ ಅನುಮಾನಗಳಿವೆ. ಕಳೆದ ತೆಲಗು ಬಿಗ್‌ಬಾಸ್ ಸೀಸನ್‌ನಲ್ಲಿ ಪಾಲ್ಕೊಂಡಿದ್ದ ಕನ್ನಡತಿ ಶೋಭಾ ಶೆಟ್ಟಿ ಎಲಿಮನೇಟ್ ಆದಾಗ ಈ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಶೋಭಾ ಶೆಟ್ಟಿ ಅನೇಕ ಸಂದರ್ಭಗಳಲ್ಲಿ ಹೊರಹೋಗಬೇಕಿತ್ತು ಎಂಬುವುದು ಪ್ರೇಕ್ಷಕರ ವಾದವಾಗಿತ್ತು. ಆದರೆ ಅವರು ಹೊರ ಹೋದ ವಾರದಲ್ಲಿ ಮಾತ್ರ ಅವರ ಆಟ ಹೆಚ್ಚು ಮನೋರಂಜನೀಯವಾಗಿತ್ತು. ಅದಕ್ಕೂ ಮುಂಚೆ ಶೋಭಾ ಶೆಟ್ಟಿಯವರನ್ನು ರಕ್ಷಿಸಲು ಹೆಚ್ಚು ಮತಗಳನ್ನು ಪಡೆದವರನ್ನು ಸಹ ಹೊರಹಾಕಲಾಗಿದೆ ಎಂಬ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.
ಎಲಿಮಿನೇಷನ್‌ನಲ್ಲಿ ಕೆಲವು ಗಿಮಿಕ್ ಸಹ ನಡೆಯುತ್ತದೆ. ಒಬ್ಬ ಸ್ಪರ್ಧಿಯನ್ನು ಹೊರಹಾಕಿ.. ಅವರನ್ನು ಎರಡು ಮೂರು ವಾರಗಳ ನಂತರ ವೈಲ್ಡ್ ಕಾರ್ಡ್ ರೂಪದಲ್ಲಿ ಮರಳಿ ಕರೆ ತರುತ್ತಾರೆ. ಈ ಬಗ್ಗೆ ಯಾವ ರೀತಿಯ ಕಾಂಟ್ರಾಕ್ಟ್‌ಗೆ ಸ್ಪರ್ಧಿಗಳು ಸಹಿ ಮಾಡಿರುತ್ತಾರೆಂಬ ಬಗ್ಗೆ ಸ್ಪಷ್ಟತೆ ಆಯೋಜಕರಿಗೆ ಮಾತ್ರ ಇರುತ್ತೆ. ಇದನ್ನು ಯಾವುದೇ ಕಾರಣಕ್ಕೂ ರಿವೀಲ್ ಆಗದಂತೆ ಎಚ್ಚರ ವಹಿಸುತ್ತಾರೆ.