‘ನನ್ನ ದೇವ್ರು’ ಸೀರಿಯಲ್ ನಾಯಕಿಯಾಗಿ ಕಿರುತೆರೆಗೆ ರೀ ಕೊಡ್ತಿದ್ದಾರೆ ಮಯೂರಿ ಕ್ಯಾತರಿ
ಅಶ್ವಿನಿ ನಕ್ಷತ್ರದ ಮೂಲಕ ಕೋಟ್ಯಾಂತರ ಮನಸು ಗೆದ್ದ, ಅಶ್ವಿನಿ ಆಲಿಯಾಸ್ ಮಯೂರಿ ಕ್ಯಾತರಿ ಇದೀಗ ಹಲವು ವರ್ಷಗಳ ಬಳಿಕ ಸೀರಿಯಲ್ ಜಗತ್ತಿಗೆ ರೀಎಂಟ್ರಿಕೊಟ್ಟಿದ್ದಾರೆ, ಅದೂ ನಾಯಕಿಯಾಗಿ.
ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮನ ಗೆದ್ದಿದ್ದ ಮುದ್ದು ಮುಖದ ಬೆಡಗಿ ಮಯೂರಿ ಕ್ಯಾತರಿ (Mayuri Kyatari) ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಸೀರಿಯಲ್ ನಾಯಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಮಯೂರಿ ಕ್ಯಾತರಿ ಮತ್ತು ಜೆಕೆ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಅಶ್ವಿನಿ ನಕ್ಷತ್ರ (Ashwini Nakshatra) ಸೀರಿಯಲ್ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು. ಇಂದಿಗೂ ಜನ ಮಯೂರಿಯನ್ನು ನೆನಪಿಸೋದೆ ಅಶ್ವಿನಿ ನಕ್ಷತ್ರದ ಅಶ್ವಿನಿಯಾಗಿ. ಈ ಸೀರಿಯಲ್ ಬಳಿಕ ಮಯೂರಿ ಕಿರುತೆರೆಗೆ ಬೈಬೈ ಹೇಳಿ ಚಂದನವನದಲ್ಲಿ ಮಿಂಚಿದ್ದರು.
ಮಯೂರಿ ಸ್ಯಾಂಡಲ್‌ವುಡ್‌ನಲ್ಲಿ ಕೃಷ್ಣ ಲೀಲಾ ಸಿನಿಮಾದಿಂದ ಹಿಡಿದು ಹಲವು ಸಿನಿಮಾಗಳಲ್ಲೂ ಮಿಂಚಿದ್ದಾರೆ. 2020 ರಲ್ಲಿ ಮದುವೆಯಾಗಿ, ಬಳಿಕ ಮಗುವಾದ ನಂತ್ರ ನಟಿ ನಟನೆಯಿಂದ ಸಂಪೂರ್ಣವಾಗಿ ದೂರವೇ ಉಳಿದಿದ್ದರು. ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಯಾಗುವ ಮೂಲಕ ಕಮ್ ಬ್ಯಾಕ್ ಮಾಡಿದ್ರು.
ಇದೀಗ ಅಶ್ವಿನಿ ನಕ್ಷತ್ರ ಸೀರಿಯಲ್ ಮುಗಿದು ಎಷ್ಟೋ ವರ್ಷಗಳ ಬಳಿಕ ಮಯೂರಿ ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗಲಿರುವ ಹೊಸ ಸೀರಿಯಲ್, ‘ನನ್ನ ದೇವ್ರು’ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಈಗಾಗಲೇ ಸೀರಿಯಲ್ ಪ್ರೊಮೋ ಬಿಡುಗಡೆಯಾಗಿದ್ದು ಭಾರಿ ಸದ್ದು ಮಾಡುತ್ತಿದೆ.
ಈ ಸೀರಿಯಲ್ ನಲ್ಲಿ ಕನ್ನಡ ಖ್ಯಾತ ಹಾಸ್ಯ ನಟ ನರಸಿಂಹ ರಾಜು ಅವರ ಮೊಮ್ಮಗ ಅವಿನಾಶ್ (Avinash) ನಾಯಕನಾಗಿ ನಟಿಸುತ್ತಿದ್ದಾರೆ. ಇವರು ಲಾಸ್ಟ್ ಬಸ್, ಮದುವೆ ಮನೆ ಅನ್ನೋ ಸೀರಿಯಲ್ ನಲ್ಲಿ ನಟಿಸಿದ್ದು, ಹಲವು ಸಿನಿಮಾ, ಜಾಹೀರಾತುಗಳಿಗೂ ಇವರು ಕೆಲಸ ಮಾಡಿದ್ದಾರೆ.
ಮಗುವಾದ ಬಳಿಕವೂ 20ರ ಹರೆಯದ ಯುವತಿಯಂತೆ ಕಾಣುವ ಮಯೂರಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರೋದು ಜನರಿಗೆ ಖುಷಿ ತಂದಿದೆ. ಸೀರಿಯಲ್‌ನಿಂದ ಹೋಗಿ ಮತ್ತೆ ಸೀರಿಯಲ್‌ಗೆ ಬಂದಿರೋದು ಖುಷಿಯಾಗಿದೆ. ನಿಮ್ಮನ್ನ ನೋಡಿದ್ರೆ, ಒಂದು ಮಗುವಿನ ಅಮ್ಮ ಅಂತ ಯಾರೂ ಹೇಳೊದೆ ಇಲ್ಲ. ತುಂಬಾನೆ ಮುದ್ದಾಗಿದ್ದೀರಿ. ನೀವು ಮತ್ತೆ ಕಿರುತೆರೆಗೆ ಬಂದಿರೋದೇ ಖುಷಿ ಎಂದೆಲ್ಲಾ ಜನ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ನಟಿಗೆ ಆಲ್ ದ ಬೆಸ್ಟ್ ಕೂಡ ಹೇಳಿದ್ದಾರೆ.
ಧಾರಾವಾಹಿಯಲ್ಲಿ ಮಯೂರಿ ಗ್ರಾಮೀಣ ಹುಡುಗಿಯಾಗಿ ನಟಿಸಿದ್ರೆ, ಅವಿನಾಶ್ ಊರಿನ ಕಷ್ಟ -ಸುಖಗಳಿಗೆ ಹೆಗಲು ಕೊಡುವ, ಊರಿಗೆ ಹಾಗೂ ಹುಡುಗಿಯ ಪಾಲಿನ ದೇವರಾಗಿರುವ ಊರಿನ ನಾಯಕನ ಪಾತ್ರದಲ್ಲಿ ಅವಿನಾಶ್ ನಟಿಸುತ್ತಿದ್ದಾರೆ. ಸೀರಿಯಲ್ ಕಥೆ ಏನಿರಬಹುದು ಎನ್ನುವ ಕುತೂಹಲ ಈಗಾಗಲೇ ಜನರಲ್ಲಿ ಹೆಚ್ಚಾಗಿದೆ. ಸೀರಿಯಲ್ ಶುರು ಯಾವಾಗ ಆಗುತ್ತೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಎಲ್ಲದಕ್ಕೂ ಕಾದು ನೋಡಬೇಕು.