ಬೆಂಗಳೂರಿನ ರಾಜಭವನ ರಸ್ತೆಯಲ್ಲಿ, ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಚಾಲಕನೊಬ್ಬ ಮಾಜಿ ಸಚಿವ ನಾರಾಯಣಗೌಡ ಅವರ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ, ನಿರ್ಲಕ್ಷ್ಯದ ಚಾಲನೆಯ ಬಗ್ಗೆ ನಾರಾಯಣಗೌಡ ಅವರು ಚಾಲಕನನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರು (ಮಾ.14): ಮಾಜಿ ಸಚಿವ ನಾರಾಯಣಗೌಡ ಅವರ ನಿಂತಿದ್ದ ಕಾರಿಗೆ ಮತ್ತೊಂದು ಕಾರು ಗುದ್ದಿರುವ ಘಟನೆ ರಾಜಭವನ ರಸ್ತೆಯಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಫೋನ್‌ನಲ್ಲಿ ಮಾತನಾಡಿಕೊಂಡು ಕಾರು ಚಾಲನೆ ಮಾಡಿಕೊಂಡು ಬಂದಿರುವ ಚಾಲಕ ರಾಜಭವನ ರಸ್ತೆಯಲ್ಲಿ ನಿಂತಿದ್ದ ಮಾಜಿ ಸಚಿವ ನಾರಾಯಣಗೌಡ ಅವರ ಕಾರಿಗೆ ಗುದ್ದಿದ್ದಾನೆ. ಇದರಿಂದ ಕೆರಳಿದ ನಾರಾಯಣಗೌಡ ಅವರು ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರು ಚಾಲಕ ಸಹಕಾರ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Add Asianetnews Kannada as a Preferred SourcegooglePreferred

ಸರ್ಕಾರಿ ನೌಕರನಾಗಿ ನೀನು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಕಾರು ಓಡಿಸುವುದು ಸರಿನಾ? ಕಾರು ಡ್ಯಾಮೇಜ್‌ ಆದರೆ ಇನ್ಶೂರೆನ್ಸ್ ಕ್ಲೈಮ್‌ ಮಾಡಿ ಸರಿಪಡಿಸಿಕೊಳ್ಳಬಹುದು. ಆದರೆ ಜೀವ ಹೋದರೆ ಬರುತ್ತಾ? ನಾನು ಕಾರಲ್ಲಿದ್ದೆ ಪರವಾಗಿಲ್ಲ, ಒಂದು ವೇಳೆ ಬೈಕ್‌ಗೆ ಗುದ್ದಿದ್ದರೆ ಏನಾಗುತ್ತಿತ್ತು ಯೋಚನೆ ಮಾಡಿದ್ದೀಯಾ ಎಂದು ಕಾರು ಚಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ನಾರಾಯಣಗೌಡ ಸ್ಥಳದಿಂದ ತೆರಳಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.