ಎರಡು ವರ್ಷಗಳ ಬಳಿಕ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದ ನೀರಜ್ ಚೋಪ್ರಾ!
ಪ್ಯಾರಿಸ್: ಎರಡು ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಬದ್ದ ಎದುರಾಳಿ ಜೂಲಿಯನ್ ವೇಬರ್ ಮಣಿಸಿ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಭಾರತದ ತಾರಾ ಅಥ್ಲೀಟ್, ಎರಡು ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಬರೋಬ್ಬರಿ ಎರಡು ವರ್ಷಗಳ ಬಳಿಕ ಡೈಮಂಡ್ ಲೀಗ್ ಅಥ್ಲೇಟಿಕ್ಸ್ ಕೂಟದಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಜರ್ಮನ್‌ನ ಬದ್ದ ಎದುರಾಳಿ ಜೂಲಿಯನ್ ವೇಬರ್ ಅವರನ್ನು ಹಿಂದಿಕ್ಕಿ 27 ವರ್ಷದ ನೀರಜ್ ಚೋಪ್ರಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಶುಕ್ರವಾರ ತಡರಾತ್ರಿ ನಡೆದ ಪ್ಯಾರಿಸ್ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ 88.16 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಈ ಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇನ್ನು ನೀರಜ್ ಚೋಪ್ರಾ ಬದ್ದ ಎದುರಾಳಿ ಜೂಲಿಯನ್ ವೇಬರ್ 87.88 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರೆ, ಬ್ರಜಿಲ್‌ನ ಲ್ಯೂಜ್ ಮೌರಿಕೋ ಡಿ ಸಿಲ್ವಾ 86.62 ಮೀಟರ್ ದೂರ ಜಾವೆಲಿನ್ ಎಸೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ನೀರಜ್ ಚೋಪ್ರಾ 2023ರ ಜೂನ್‌ನಲ್ಲಿ ಲಾಸನ್ನೆಯಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಕೊನೆಯ ಬಾರಿಗೆ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸಿದ್ದರು. ಇದೀಗ ಬರೋಬ್ಬರಿ ಎರಡು ವರ್ಷಗಳ ಬಳಿಕ ನೀರಜ್ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸಿದ್ದಾರೆ.
ಕಳೆದ ಮೇ 16ರಂದು ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ 90.23 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದರು.
ಆದರೆ ಅದೇ ಸ್ಪರ್ಧೆಯಲ್ಲಿ ವೇಬರ್ 91.06 ಮೀಟರ್ ದೂರ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದರು. ಹೀಗಾಗಿ ನೀರಜ್ ಚೋಪ್ರಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.