ನೀರಜ್ ಚೋಪ್ರಾ ಪೋಲೆಂಡ್‌ನಲ್ಲಿ ನಡೆದ ಓರ್ಲೆನ್ ಜಾನುಸ್ ಕುಸೋಸಿನ್ಸ್ಕಿ ಸ್ಮರಣಾರ್ಥ ಕೂಟದಲ್ಲಿ 84.14 ಮೀಟರ್ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದರು. ಜರ್ಮನಿಯ ಜೂಲಿಯನ್ ವೆಬರ್ 86.12 ಮೀ. ದೂರ ಎಸೆದು ಚಿನ್ನ ಗೆದ್ದರು.

ಚೋರ್ಜೋವ್ (ಪೋಲೆಂಡ್): ಕಳೆದ ವಾರ ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀ. ದೂರಕ್ಕೆ ಜಾವೆಲಿನ್ ಎಸೆದು ದ್ವಿತೀಯ ಸ್ಥಾನ ಪಡೆದಿದ್ದ ನೀರಜ್ ಚೋಪ್ರಾ ಮತ್ತೊಂದು ಬೆಳ್ಳಿ ಗೆದ್ದಿದ್ದಾರೆ. ಆದರೆ ಈ ಬಾರಿ 90 ಮೀ. ದೂರ ದಾಖಲಿಸಲಾಗಲಿಲ್ಲ.

ಶುಕ್ರವಾರ ಪೋಲೆಂಡ್‌ನಲ್ಲಿ ಓರ್ಲೆನ್ ಜಾನುಸ್ ಕುಸೋಸಿನ್ಸ್ಕಿ ಸ್ಮರಣಾರ್ಥ ಕೂಟದಲ್ಲಿ ನೀರಜ್ 84.14 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದು 2ನೇ ಸ್ಥಾನಿಯಾದರು. ಮೊದಲ ಎಸೆತ ಪೌಲ್ ಆದ ಬಳಿಕ 2ನೇ ಎಸೆತದಲ್ಲಿ ನೀರಜ್ 81.28 ದಾಖಲಿಸಿದರು. ಬಳಿಕ 3, 4ನೇ ಎಸೆತವೂ ಫೌಲ್ ಆಯಿತು. 5ನೇ ಎಸೆತವನ್ನು 81.80 ಮೀ. ದೂರಕ್ಕೆಸೆದ ನೀರಜ್ 3ನೇ ಸ್ಥಾನದಲ್ಲೇ ಉಳಿದಿದ್ದರು. ಕೊನೆ ಎಸೆತದಲ್ಲಿ 84.14 ಮೀಟರ್ ದಾಖಲಿಸಿ ಬೆಳ್ಳಿ ತಮ್ಮದಾಗಿಸಿಕೊಂಡರು.

ದೋಹಾದಲ್ಲಿ ಚಿನ್ನ ಗೆದ್ದಿದ್ದ ಜರ್ಮನಿಯ ಜೂಲಿಯನ್ ವೆಬರ್ ಮತ್ತೊಮ್ಮೆ ನೀರಜ್‌ರನ್ನು ಸೋಲಿಸಿದರು. ಅವರು 86.12 ಮೀ. ದೂರ ಎಸೆದರೆ, ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ (83.24 ಮೀ.) ಕಂಚಿಗೆ ತೃಪ್ತಿಪಟ್ಟುಕೊಂಡರು.

ರಾಜ್ಯ ಈಜು: ಧಿನಿಧಿ, ಅನೀಶ್ ಗೌಡ ವೈಯಕ್ತಿಕ ಚಾಂಪಿಯನ್

ಬೆಂಗಳೂರು: ಇಲ್ಲಿನ ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಅನೀಶ್ ಗೌಡ ಹಾಗೂ ಒಲಿಂಪಿಯನ್ ಧಿನಿಧಿ ದೇಸಿಂಘು ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಕೂಟದ ಕೊನೆ ದಿನವಾದ ಶುಕ್ರವಾರ ಬಸವನಗುಡಿ ಈಜು ಕೇಂದ್ರದ ಅನೀಶ್ ಪುರುಷರ 1500 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದರು. ಇದು ಕೂಟದಲ್ಲಿ ಅವರಿಗೆ ಸಿಕ್ಕ 3ನೇ ಚಿನ್ನ, ಇನ್ನು, ಡಾಲ್ಟನ್ ಈಜು ಕೇಂದ್ರದ ಧಿನಿಧಿ ದೇಸಿಂಘು ಕೂಟದಲ್ಲಿ ಒಟ್ಟು 4 ಚಿನ್ನದ ಪದಕ ಗೆದ್ದಿದ್ದಾರೆ.

ಇದೇ ವೇಳೆ ತಂಡ ವಿಭಾಗದಲ್ಲಿ ಬಸವನಗುಡಿ ಈಜು ಕೇಂದ್ರ ಸಮಗ್ರ ಚಾಂಪಿಯನ್ ಆದರೆ, ಡಾನ್ ಈಜು ಕೇಂದ್ರ ರನ್ನರ್-ಅಪ್ ಆಯಿತು. ಬಸವನಗುಡಿ ಈಜು ಪಟುಗಳು 23 ಚಿನ್ನ, 26 ಬೆಳ್ಳಿ, 23 ಕಂಚು ಸೇರಿ ಒಟ್ಟು 72 ಪದಕ ಗೆದ್ದರೆ, ಡಾಲ್ವಿನ್ ಸ್ಪರ್ಧಿಗಳು 10 ಚಿನ್ನ, 11 ಬೆಳ್ಳಿ, 4 ಕಂಚು ಸೇರಿ 25 ಪದಕ ಜಯಿಸಿದರು.

ಕೋಚ್ ವೇತನ ಶೇ.50 ಹೆಚ್ಚಿಸಿದ ಕ್ರೀಡಾ ಇಲಾಖೆ

ನವದೆಹಲಿ: ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆಯು ಕೋಚ್‌ಗಳ ವೇತನ ಶೇ.50ರಷ್ಟು ಹೆಚ್ಚಿಸಿದ್ದು, ಕ್ರೀಡಾಪಟುಗಳ ಭತ್ಯೆಯೂ ಏರಿಕೆ ಮಾಡಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಸಹಾಯ ಯೋಜನೆಯಲ್ಲಿ ಈ ಬದಲಾವಣೆಗಳನ್ನು ಘೋಷಿಸಿದೆ.

ಇದರ ಪ್ರಕಾರ ಗುಂಪು ಸ್ಪರ್ಧೆಯ ಕ್ರೀಡಾಪಟುಗಳು ಶಿಬಿರದ ಹೊರಗಿನ ದಿನದಲ್ಲಿ ಆಹಾರ ಭತ್ಯೆಯಾಗಿ ತಿಂಗಳಿಗೆ 210 ಸಾವಿರ ಪಡೆಯಲಿದ್ದಾರೆ. ರಾಷ್ಟ್ರೀಯ ಶಿಬಿರಗಳಲ್ಲಿ ಹಿರಿಯ ಕ್ರೀಡಾಪಟುಗಳಿಗೆ ನಿತ್ಯ 690 ರುಪಾಯಿಗಳು ಇದ್ದ ಆಹಾರ ಭತ್ಯೆಯನ್ನು 1000, ಜೂನಿಯರ್‌ಗಳಿಗೆ 480 ಇದ್ದ ಭತ್ಯೆ 850ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಕೋಚ್ ಗಳ ವೇತನವನ್ನು ಶೇ.50ರಷ್ಟು ಹೆಚ್ಚಿಸಿದೆ. ಮಾಸಿಕ 5 ಲಕ್ಷ ಪಡೆಯುತ್ತಿದ್ದ ಮುಖ್ಯ ರಾಷ್ಟ್ರೀಯ ತರಬೇತುದಾರರು ಇನ್ನು ತಿಂಗಳಿಗೆ 77.5 ಲಕ್ಷ, ಇತರ ತರಬೇತುದಾರರು 23 ಲಕ್ಷ(ಹಿಂದೆ 2 ಲಕ್ಷ ಇತ್ತು) ಪಡೆಯಲಿದ್ದಾರೆ.