ನಿಧಿ ಸಿಕ್ಕ ಕುಟುಂಬ ಸರ್ವನಾಶ; ಅರ್ಧಾಯುಷ್ಯಕ್ಕೆ ಪತನ? ಪುರಾಣ, ಮನುಸ್ಮೃತಿಯಂತೆ ಏನು ಮಾಡಬೇಕು?
ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿದೆ. ಆದರೆ ನಿಧಿ ಸಿಕ್ಕ ಬಳಿಕ ಏನು ಮಾಡಬೇಕು? ಇದ್ದಕ್ಕಿದ್ದಂತೆ ಕೆಲವರು ಶ್ರೀಮಂತರಾಗುವುದುಂಟು. ಆದರೆ ಒಂದಲ್ಲ ಒಂದು ರೀತಿಯ ಸಂಕಷ್ಟಗಳು ಬರುತ್ತವೆ, ಅರ್ಧಾಯುಷ್ಯಕ್ಕೆ ಸಾಯುತ್ತಾರೆ, ಒಂದೊಂದು ದಿಕ್ಕಿನಿಂದ ಸಮಸ್ಯೆ ಬರುವುದು ಎನ್ನುತ್ತಾರೆ. ಸತ್ಯ ಏನು?

ಇತಿಹಾಸಕಾರರು ಏನಂತಾರೆ?
ಇತಿಹಾಸಕಾರ ಡಾ ಶೆಲ್ವಪಿಳ್ಳೈ ಅವರು “ಚಿನ್ನ ಸಿಕ್ಕರೆ ಅಪಶಕುನ ಅಲ್ಲ. ನಿಧಿ ಪೂಜೆ ಮಾಡದೆ, ನಿಧಿ ಹುಡುಕದೆ ಅನಿರೀಕ್ಷಿತವಾಗಿ ಸಿಕ್ಕಿದೆ. ಯಾರದ್ದೋ ಆಸ್ತಿಯನ್ನು ಯಾರೋ ಕಬಳಿಸೋಕೆ ಹೋದಾಗ ಉದ್ಧಾರ ಆಗಲ್ಲ ಎಂದು ಹಿಂದು ಧರ್ಮದಲ್ಲಿ ಹೇಳಿದ್ದಾರೆ. ಲಕ್ಕುಂಡಿಯಲ್ಲಿ ನಿಧಿ ಸಿಕ್ಕಾಗ ಆ ಕುಟುಂಬವು ಸರ್ಕಾರಕ್ಕೆ ಒಪ್ಪಿಸಿರೋದನ್ನು ಮೆಚ್ಚಬೇಕು” ಎಂದು ಹೇಳಿದ್ದಾರೆ.
ಇಡೀ ಪ್ರಪಂಚ ಸುತ್ತುತ್ತಾರೆ
“ಕೆಲವರು ನಿಧಿ ಹುಡುಕೋಕೆ ಇಡೀ ಪ್ರಪಂಚ ಸುತ್ತುತ್ತಾರೆ. ಚಂದ್ರಗಿರಿ, ಬೆನಗೊಂಡ, ಹಂಪೆ ಸುತ್ತಮುತ್ತ ವಿಜಯನಗರ, ಗುಪ್ತರ ನಿಧಿಗೋಸ್ಕರ ಅಗೆಯಲಾಗಿದೆ. ರಾಷ್ಟ್ರಕೂಟರ ನಿಧಿಗೋಸ್ಕರ ಹುಡುಕಾಟ ನಡೆದಿದೆ. ನಿಧಿಗೋಸ್ಕರ ಗುಂಪು ಮಾಡುತ್ತಾರೆ. ಆಗ ಸಾವು-ನೋವುಗಳು ಆಗಿವೆ. ನಿಧಿ ಎನ್ನೋದು ಮರೀಚಿಕೆ" ಎಂದು ಹೇಳಿದ್ದಾರೆ.
ನಿಧಿಯನ್ನು ಸರ್ಪ ಕಾಯುತ್ತದೆಯೇ?
ನಿಧಿಯನ್ನು ಸರ್ಪಗಳು ಕಾಯುತ್ತಿರುತ್ತವೆ ಎಂಬ ಮಾತನ್ನು ಹೇಳಲಾಗಿತ್ತು. ಈ ಬಗ್ಗೆ ಕೂಡ ಇತಿಹಾಸಕಾರ ಡಾ ಶೆಲ್ವಪಿಳ್ಳೈ ಅವರು ಮಾತನಾಡಿ, “ಕೆಲವರು ನಿಧಿ ಕಳ್ಳರ ವಶ ಆಗಬಾರದು ಎಂದು ಭೂಮಿಯಲ್ಲಿ ಇಟ್ಟಿರುತ್ತಾರೆ. ಲೋಹಗಳು ಸೂರ್ಯನ ಶಾಖವನ್ನು ಗ್ರಹಿಸಿ, ಹಿಡಿದಿಟ್ಟುಕೊಳ್ಳುತ್ತವೆ. ಹಾವು ಶೀತರಕ್ತ ಪ್ರಾಣಿ, ಭೂಮಿಯೊಳಗಡೆ ಅವು ಶೀತವನ್ನು ಹುಡುಕಿಕೊಂಡು ಹೋಗುವುದುಂಟು. ಹಾವುಗಳು ಬಿಸಿಯನ್ನು ತಗೊಳ್ತವೆ, ಹೀಗಾಗಿಯೇ ಹುತ್ತದಲ್ಲಿ ಇರುತ್ತದೆ. ಲೋಹಗಳು ಶಾಖ ಗ್ರಹಿಸಿದಾಗ ಆ ಹಾವು ಅಲ್ಲಿ ಹೋಗುತ್ತವೆ ಅಷ್ಟೇ” ಎಂದು ಹೇಳಿದ್ದಾರೆ.
ರಾಜರು ನಿಧಿಗೆ ದಿಗ್ಬಂಧನ ಮಾಡ್ತಿದ್ರಾ?
“ಪುರಾಣಗಳಲ್ಲಿ ನಿಧಿಯನ್ನು ಸರ್ಪಗಳು ಕಾಯುತ್ತವೆ ಎಂದು ಹೇಳಲಾಗಿದೆ. ರಾಜರು ನಿಧಿಯನ್ನು ಸಂರಕ್ಷಣೆ ಮಾಡಲು ಅಥವಾ ಬೇರೆ ದೇಶದವರು ಕೊಳ್ಳೆ ಹೊಡೆಯಬಾರದು ಎಂದು ದಿಗ್ಬಂಧನ ಮಾಡಿದ್ದರು ಎನ್ನಲಾಗಿದೆ. ಆದರೆ ನರ ಬಲಿ ಕೊಟ್ಟು ನಿಧಿ ತಗೋಬೇಕು ಎನ್ನೋದು ಮೌಢ್ಯವಾಗಿದೆ” ಎಂದು ಇತಿಹಾಸಕಾರ ಡಾ ಶೆಲ್ವಪಿಳ್ಳೈ ಅವರು ಹೇಳಿದ್ದಾರೆ.
ಪ್ರಾಚೀನ ಸ್ಮೃತಿ ಏನು ಹೇಳುವುದು?
ಪ್ರಾಚೀನ ಸ್ಮೃತಿಗಳ ಪ್ರಕಾರ, ನಿಧಿ ಯಾರಿಗೆ ಸಿಗುವುದು ಎನ್ನುವುದರ ಮೇಲೆ ಏನು ಮಾಡಬೇಕು ಎಂದು ಹೇಳಲಾಗುತ್ತದೆ. ಒಬ್ಬ ಜ್ಞಾನಿ ಅಥವಾ ಸದಾಚಾರಿ ಬ್ರಾಹ್ಮಣನಿಗೆ ನಿಧಿ ಸಿಕ್ಕರೆ, ಅವನು ಅದನ್ನು ಧರ್ಮ ಕಾರ್ಯಗಳಿಗೆ ಬಳಸುತ್ತಾನೆ ಎಂಬ ಕಾರಣಕ್ಕೆ ಅವನೇ ಇಟ್ಟುಕೊಳ್ಳಬಹುದು ಎನ್ನಲಾಗುತ್ತದೆ.
ಸಾಮಾನ್ಯ ವ್ಯಕ್ತಿಗೆ ನಿಧಿ ಸಿಕ್ಕರೆ?
ಸಾಮಾನ್ಯ ವ್ಯಕ್ತಿಗೆ ನಿಧಿ ಸಿಕ್ಕರೆ, ಅದನ್ನು ಅವನು ರಾಜನಿಗೆ ಮಾಹಿತಿ ಕೊಡಬೇಕು. ರಾಜನು ಆ ನಿಧಿಯ ಬಹುಪಾಲನ್ನು ಪಡೆದುಕೊಂಡು, ಉಳಿದ ಒಂದು ಭಾಗವನ್ನು ಪತ್ತೆ ಹಚ್ಚಿದ ವ್ಯಕ್ತಿಗೆ ಬಹುಮಾನವಾಗಿ ಕೊಡುತ್ತಿದ್ದನು ಎನ್ನಲಾಗುವುದು. ರಾಜನಿಗೆ ನಿಧಿ ಸಿಕ್ಕರೆ, ಅದನ್ನು ಅವನು ಅರ್ಧದಷ್ಟು ವಿದ್ವಾಂಸರಿಗೆ ನೀಡಿ, ಉಳಿದ ಅರ್ಧವನ್ನು ರಾಜ್ಯದ ಏಳಿಗೆಗಾಗಿ ಬಳಸಬೇಕು.
ಪುರಾಣಗಳು ಏನು ಹೇಳುತ್ತವೆ?
ಪುರಾಣಗಳ ಪ್ರಕಾರ, ಭೂಮಿಯಲ್ಲಿರುವ ನಿಧಿಯನ್ನು ನಾಗರಹಾವುಗಳು ಅಥವಾ ಯಕ್ಷರು ಕಾಯುತ್ತಿರುತ್ತಾರೆ ಎಂಬ ನಂಬಿಕೆಯಿದೆ. ಆದ್ದರಿಂದ ನಿಧಿ ಸಿಕ್ಕಾಗ ಅದನ್ನು ಮೊದಲು ಶುದ್ಧೀಕರಣ ಮಾಡಬೇಕು, ಆ ಭೂಮಿಯ ದೇವತೆ ಅಥವಾ ಕ್ಷೇತ್ರಪಾಲನಿಗೆ ಕೃತಜ್ಞತೆ ಸಲ್ಲಿಸಲು ಪೂಜೆ ಅಥವಾ ಶಾಂತಿ ಹೋಮವನ್ನು ಮಾಡಬೇಕು. ಅನ್ಯಾಯದ ಹಣ ಅಥವಾ ಶಾಪಗ್ರಸ್ತ ಹಣದ ದೋಷ ತಟ್ಟದಿರಲಿ ಎಂದು ದಾನ ಮಾಡಬೇಕು.
ಸಂಪೂರ್ಣ ಸ್ವಂತಕ್ಕಾಗಿ ಬಳಸಬೇಡಿ
ನಿಧಿ ಸಿಕ್ಕಾಗ ಅದನ್ನು ಸಂಪೂರ್ಣವಾಗಿ ಸ್ವಂತ ಭೋಗಕ್ಕಾಗಿ ಬಳಸುವುದು ಅಧರ್ಮ ಎನ್ನಲಾಗುತ್ತದೆ. ಹೀಗಾಗಿ ಆ ನಿಧಿಯಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಬೇಕು, ಬಡವರಿಗೆ ಅನ್ನದಾನ ಮಾಡಬೇಕು, ಕೆರೆ, ಕಟ್ಟೆ ಅಥವಾ ಸಾರ್ವಜನಿಕ ಉಪಯೋಗಕ್ಕೆ ಬಳಸಬೇಕು.
ಅನ್ಯಾಯದ ಹಣವು ಅಧೋಗತಿಗೆ ದಾರಿ
ಅಪ್ರಾಮಾಣಿಕವಾಗಿ ಸಿಕ್ಕ ನಿಧಿಯನ್ನು ಬಚ್ಚಿಡುವುದು ಅಥವಾ ದೋಚುವುದು ಇಡೀ ವಂಶಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಅನ್ಯಾಯದಿಂದ ಬಂದ ಹಣವು ಅಧೋಗತಿಗೆ ದಾರಿ" ಎಂದು ಹೇಳಲಾಗುತ್ತಿದೆ. ಸಿಕ್ಕ ನಿಧಿಯನ್ನು ಸದ್ವಿನಿಯೋಗ ಮಾಡಿದರೆ ಮಾತ್ರ ಅದು ಸಮೃದ್ಧಿ ಆಗುವುದು.

