- Home
- Technology
- Science
- ಅಮೆರಿಕದ ಎಫ್-35ಗೆ ಸಡ್ಡು ಹೊಡೆವ ದೇಶಿ ವಿಮಾನಕ್ಕೆ ಪ್ಲ್ಯಾನ್, 5ನೇ ತಲೆಮಾರಿನ ಫೈಟರ್‌ಜೆಟ್ ತಯಾರಿಗೆ ಸಿದ್ಧತೆ
ಅಮೆರಿಕದ ಎಫ್-35ಗೆ ಸಡ್ಡು ಹೊಡೆವ ದೇಶಿ ವಿಮಾನಕ್ಕೆ ಪ್ಲ್ಯಾನ್, 5ನೇ ತಲೆಮಾರಿನ ಫೈಟರ್‌ಜೆಟ್ ತಯಾರಿಗೆ ಸಿದ್ಧತೆ
ಭಾರತ ಸರ್ಕಾರವು ವಾಯುಪಡೆಗಾಗಿ 5ನೇ ತಲೆಮಾರಿನ ಸ್ವದೇಶಿ ಸ್ಟೆಲ್ತ್ ಫೈಟರ್‌ಜೆಟ್ (ಆ್ಯಮ್ಕಾ) ನಿರ್ಮಾಣ ಯೋಜನೆಗೆ ಚಾಲನೆ ನೀಡಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಟಾಟಾ, ಎಲ್ & ಟಿ, ಮತ್ತು ಭಾರತ್ ಫೋರ್ಜ್‌ಗೆ ಆಹ್ವಾನ ನೀಡಲಾಗಿದ್ದು, ಎಚ್‌ಎಎಲ್ ಅನ್ನು ಪರಿಗಣಿಸದಿರುವುದು ಕುತೂಹಲ ಮೂಡಿಸಿದೆ.

5ನೇ ತಲೆಮಾರಿನ ಫೈಟರ್‌ಜೆಟ್ ತಯಾರಿ
ನವದೆಹಲಿ: ಸ್ವದೇಶಿ, 5ನೇ ತಲೆಮಾರಿನ, ಅತ್ಯಾಧುನಿಕ ಬಹುಪಯೋಗಿ ಸ್ಟೆಲ್ತ್ ವಿಮಾನ ಅಭಿವೃದ್ಧಿ ಮತ್ತು ಉತ್ಪಾದನೆಯ ಮಹತ್ವಕಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರ ಅಡಿಗಲ್ಲು ಹಾಕಿದೆ. ಭಾರತೀಯ ವಾಯುಪಡೆಗಾಗಿ ಸುಧಾರಿತ ಬಹು-ಉಪಯೋಗಿ ಯುದ್ಧ ವಿಮಾನ (ಎಎಂಸಿಎ) ಕನಸು ನನಸಾಗಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ 3 ಕಂಪನಿಗಳನ್ನು ಆಹ್ವಾನಿಸಿದೆ. ಆದರೆ ಇದಕ್ಕೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಚ್‌ಎಎಲ್ ಅನ್ನು ಪರಿಗಣಿಸಿಲ್ಲ. ಆದರೆ ಬೆಂಗಳೂರಿನಲ್ಲೇ ಕೇಂದ್ರ ಕಚೇರಿ ಹೊಂದಿರುವ ಬಿಇಎಲ್ ಮತ್ತು ಬಿಇಎಂಎಲ್ ಪಾಲುದಾರರಾಗಿರುವ ಇನ್ನೆರೆಡು ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ.
3 ಕಂಪನಿಗೆ ಆಹ್ವಾನ
ಟಾಟಾ ಅಡ್ವಾನ್ಸ್ಡ್ ಸಿಸ್ಟಂ, ಎಲ್ & ಟಿ, ಭಾರತ್ ಫೋರ್ಜ್‌ಗೆ ರಕ್ಷಣಾ ಇಲಾಖೆ ಕಡೆಯಿಂದ ಪ್ರಸ್ತಾವನೆ ಸಲ್ಲಿಸಲು ಆಹ್ವಾನ ನೀಡಲಾಗಿದೆ. ಸದ್ಯ ಎಲ್ & ಟಿ ಕಂಪನಿಯು ಬಿಇಎಲ್ ಜತೆ ಹಾಗೂ ಭಾರತ್ ಫೋರ್ಜ್ ಬಿಇಎಂಎಲ್ ಜತೆ ಪಾಲುದಾರಿಕೆ ಮಾಡಿಕೊಂಡಿವೆ. ಇವುಗಳು ಪ್ರಸ್ತಾವನೆ ಸಲ್ಲಿಸಿದ 3-4 ತಿಂಗಳಲ್ಲಿ ಕಂಪನಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಳಿಕ ಆಯ್ಕೆಯಾದ ಕಂಪನಿಯು ರಕ್ಷಣಾ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ಬೆಂಗಳೂರಿನಲ್ಲಿರುವ ವಿಮಾನ ಅಭಿವೃದ್ಧಿ ಸಂಸ್ಥೆ (ಎಡಿಎ) ಜತೆ ಸೇರಿಕೊಂಡು ಹೊಸ ವಿಮಾನದ ಅಭಿವೃದ್ಧಿ, ತಯಾರಿ ಕೆಲಸ ಆರಂಭಿಸಲಿದ್ದಾರೆ.
ಯಾವಾಗ? ಎಲ್ಲಿ ಆರಂಭ:
ಈ ವಿಮಾನದ ಮೊದಲ ಪ್ರೋಟೋಟೈಪ್ 2027ರಲ್ಲಿ ಶುರುವಾಗಲಿದ್ದು, ಮೊದಲ ಹಾರಾಟ 2028-29ರ ನಡುವೆ ನಡೆಯಲಿದೆ. 2030ರಲ್ಲಿ ಇವುಗಳ ಸರಣಿ ಉತ್ಪಾದನೆ ಆರಂಭವಾಗಲಿದೆ. ಇವುಗಳನ್ನು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ 15,803 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಂಯೋಜನೆ ಮತ್ತು ಹಾರಾಟ ಪರೀಕ್ಷಾ ಸಂಕೀರ್ಣದಲ್ಲಿ ಉತ್ಪಾದಿಸಲಾಗುವುದು.
ಏನಿದು ಯೋಜನೆ ಆ್ಯಮ್ಕಾ?
ಸೇನೆಗೆ ಸ್ವದೇಶಿ ಬಲ ತುಂಬುವ ಭಾಗವಾಗಿ ಆ್ಯಮ್ಕಾ ಯೋಜನೆಯನ್ನು ಆರಂಭಿಸಲಾಗಿದೆ. ಇದರಡಿ 5 ಮೂಲಮಾದರಿಗಳ (ಪ್ರೋಟೋಟೈಪ್) ಯುದ್ಧವಿಮಾನ ತಯಾರಿಸುವ ಗುರಿ ಇದೆ. ಮಧ್ಯಮ ತೂಕದ ಇವು, 5ನೇ ತಲೆಮಾರಿನ, 2 ಎಂಜಿನ್‌ನ ಯುದ್ಧವಿಮಾನಗಳಾಗಿರಲಿದ್ದು, ರಾಡಾರ್‌ಗಳ ಕಣ್ತಪ್ಪಿಸುವ ಸ್ಟೆಲ್ತ್ ಸಾಮರ್ಥ್ಯವನ್ನೂ ಹೊಂದಿರಲಿವೆ. ಭಾರತದಲ್ಲೇ ತಯಾರಾಗುವ ಫ್ರಾನ್ಸ್‌ನ ಸಾಫ್ರನ್ ಕಂಪನಿಯ 120 ಕಿಲೋನ್ಯೂಟನ್ಸ್ ಸಾಮರ್ಥ್ಯದ ಎಂಜಿನ್ ಅಥವಾ ಅಮೆರಿಕದ ಜಿಇ ಕಂಪನಿಯ ಎಫ್ 414 ಎಂಜಿನ್‌ಗಳನ್ನು ಇದರಲ್ಲಿ ಬಳಸಲಾಗುವುದು. ಸದ್ಯ ಎಚ್‌ಎಎಲ್ ನಿರ್ಮಿಸುತ್ತಿರುವ ತೇಜಸ್ ಯುದ್ಧವಿಮಾನಗಳಿಗಿಂತಲೂ ಉತ್ತಮ ತಂತ್ರಜ್ಞಾನ ಹಾಗೂ ಕ್ಷಮತೆ ಆ್ಯಮ್ಕಾದಲ್ಲಿರಲಿದೆ.
ಎಫ್-35ಗೆ ಟಕ್ಕರ್
ಶಬ್ದಕ್ಕಿಂತ ವೇಗವಾಗಿ ಚಲಿಸಬಲ್ಲ ಈ ಆ್ಯಮ್ಕಾ ವಿಮಾನಗಳಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಜಾಗ, ಸುಧಾರಿತ ಎಐ ಅಳವಡಿಸಲಾಗಿದೆ. ಜತೆಗೆ, ದೇಶೀಯವಾಗಿ ಅಭಿವೃದ್ಧಿಪಡಿಸಿದ ದೀರ್ಘ ವ್ಯಾಪ್ತಿಯ, ಅಸ್ತ್ರ ಕ್ಷಿಪಣಿ, ಗಾಳಿಯಿಂದ ಭೂಮಿಯತ್ತ ಹಾರುವ ಕ್ಷಿಪಣಿ, ಲೇಸರ್ ಮಾರ್ಗದರ್ಶಿ ಮತ್ತು ಗ್ಲೈಡ್ ಬಾಂಬ್‌ಗಳು ಇರಲಿವೆ. ಈ ವೈಶಿಷ್ಟ್ಯಗಳು ಆ್ಯಮ್ಕಾವನ್ನು ಅಮೆರಿಕದ ಎಫ್-35, ರಷ್ಯಾದ ಸು-35 ಎಂಕೆಐ, ಚೀನಾದ ಜೆ-20ಗಳ ಸಮಾನ ಸ್ತರದಲ್ಲಿ ನಿಲ್ಲಿಸಲಿವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

