ಭಾರತೀಯ ವಾಯುಸೇನೆಯ ಬಲವರ್ಧನೆಗಾಗಿ, ಕೇಂದ್ರ ಸರ್ಕಾರವು ಫ್ರಾನ್ಸ್‌ನಿಂದ ಹೊಸದಾಗಿ 114 ರಫೇಲ್‌ ಯುದ್ಧವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಈ ಪೈಕಿ ಹೆಚ್ಚಿನ ವಿಮಾನಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಮತ್ತು ಈ ವರ್ಷಾಂತ್ಯದೊಳಗೆ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ.

ನವದೆಹಲಿ: ಇತ್ತೀಚಿನ ಪಾಕ್‌ ವಿರುದ್ಧದ ಆಪರೇಷನ್‌ ಸಿಂದೂರ ವೇಳೆ ತನ್ನ ಸಾಮರ್ಥ್ಯವನ್ನು ಯಶಸ್ವಿಯಾಗಿ ಒರೆಹಚ್ಚಿದ್ದ ಫ್ರಾನ್ಸ್‌ನ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳನ್ನು ಮತ್ತಷ್ಟು ಪ್ರಮಾಣದಲ್ಲಿ ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲು ಭಾರತ ಮುಂದಾಗಿದೆ. ಹೊಸದಾಗಿ 114 ರಫೇಲ್‌ ಖರೀದಿ ಸಂಬಂಧ ಶೀಘ್ರದಲ್ಲೇ ಫ್ರಾನ್ಸ್‌ಗೆ ಪ್ರಸ್ತಾಪ ಸಲ್ಲಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ. ಬಹುತೇಕ ಭಾರತದಲ್ಲೇ ಉತ್ಪಾದನೆಯಾಗಲಿರುವ ಈ ರಫೇಲ್‌ ಯುದ್ಧವಿಮಾನಗಳ ಖರೀದಿಗೆ ಸಂಬಂಧಿಸಿ ಈ ವರ್ಷಾಂತ್ಯದೊಳಗೆ ಅಂತಿಮ ಮುದ್ರೆ ಬೀಳುವ ನಿರೀಕ್ಷೆ ಇದೆ.

ಮಿಗ್‌ ವಿಮಾನಗಳನ್ನು ಸೇವೆಯಿಂದ ನಿವೃತ್ತಿಗೊಳಿಸಿದ ಬಳಿಕ ಕುಸಿದಿರುವ ಭಾರತೀಯ ವಾಯುಸೇನೆಯ ಬಲವರ್ಧನೆಗಾಗಿ ಕೇಂದ್ರ ಸರ್ಕಾರವು ಇನ್ನಷ್ಟು ರಫೇಲ್‌ ಯುದ್ಧವಿಮಾನಗಳ ಖರೀದಿಗೆ ಮುಂದಾಗಿದೆ. ಇದೀಗ ಹೊಸದಾಗಿ ಬೇಡಿಕೆ ಸಲ್ಲಿಸುತ್ತಿರುವ 114 ಯುದ್ಧವಿಮಾನಗಳಲ್ಲಿ 90 ವಿಮಾನಗಳನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತದೆ. ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಮತ್ತು ಭಾರತೀಯ ಸಂಸ್ಥೆಯ ಪಾಲುದಾರಿಕೆಯಲ್ಲಿ ವಿಮಾನ ಉತ್ಪಾದನೆಯಾಗಲಿದ್ದು, ಬಾಕಿ ವಿಮಾನಗಳನ್ನು ನೇರವಾಗಿ ಪೂರೈಕೆಯಾಗಲಿವೆ.

ಮೋದಿ ಭೇಟಿ:

ಈ ನಡುವೆ, ವಾಯುಸೇನಾ ಮುಖ್ಯಸ್ಥ ಎ.ಪಿ. ಸಿಂಗ್‌ ಅವರು ಮುಂದಿನ ತಿಂಗಳ ಆರಂಭದಲ್ಲೇ ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಆ ಬಳಿಕ ಪ್ರಧಾನಿ ಮೋದಿ ಕೂಡ ಜೂನ್‌ ತಿಂಗಳಲ್ಲಿ ಫ್ರಾನ್ಸ್‌ಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ಭಾರತ ಈಗಾಗಲೇ 26 ರಫೇಲ್‌ ಯುದ್ಧ ವಿಮಾನಗಳನ್ನು ಹೊಂದಿದೆ. ಭಾರತೀಯ ನೌಕಾಪಡೆ ಕೂಡ ಮುಂದಿನ ಕೆಲ ವರ್ಷಗಳಲ್ಲಿ 26 ರಫೇಲ್‌-ಎಂ ಯುದ್ಧ ವಿಮಾನಗಳ ಸೇರ್ಪಡೆಗೆ ಸಿದ್ಧತೆ ಆರಂಭಿಸಿದೆ.

ಹೊಸದಾಗಿ ಖರೀದಿಸಲುದ್ದೇಶಿಸಿರುವ ರಫೇಲ್ ಯುದ್ಧವಿಮಾನಗಳು ಶೇ.50ರಷ್ಟು ದೇಶೀಯ ಬಿಡಿಭಾಗಗಳನ್ನು ಹೊಂದಿರಲಿವೆ. ಈ ಯುದ್ಧ ವಿಮಾನಗಳಿಗೆ ಸ್ವದೇಶಿ ನಿರ್ಮಿತ ಅಸ್ತ್ರ, ಬ್ರಹ್ಮೋಸ್‌ನಂಥ ಕ್ಷಿಪಣಿಗಳನ್ನು ಅಳವಡಿಸುವ ಉದ್ದೇಶದಿಂದ ವಿಮಾನದ ಇಂಟರ್‌ಫೇಸ್‌ ಕಂಟ್ರೋಲ್‌ ಡಾಕ್ಯುಮೆಂಟ್‌ಗೆ ಭಾರತ ಬೇಡಿಕೆ ಇಟ್ಟಿದೆ.