ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಅಮೆರಿಕದ F-35 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಘೋಷಿಸಿದೆ. ಇದೇ ವೇಳೆ, ಇಸ್ರೇಲ್‌ನ ಟೆಲ್ ಅವೀವ್ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ ಸೇತುವೆಯನ್ನು ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ.

ತೆಹ್ರಾನ್/ಟೆಲ್ ಅವೀವ್ (ಏ.3): ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ಭೀಕರವಾಗಿದ್ದು, ಅಮೆರಿಕದ ಅತ್ಯಾಧುನಿಕ F-35 ಸ್ಟೆಲ್ತ್ ಯುದ್ಧ ವಿಮಾನವನ್ನು ಮತ್ತೊಮ್ಮೆ ಹೊಡೆದುರುಳಿಸಿರುವುದಾಗಿ ಇರಾನ್ ಘೋಷಿಸಿದೆ. ಇದು ಅಮೆರಿಕಕ್ಕೆ ನೀಡಿದ ಮತ್ತೊಂದು ದೊಡ್ಡ ಹೊಡೆತ ಎಂದು ಇರಾನ್ ಬಣ್ಣಿಸಿದೆ

ಮಧ್ಯ ಇರಾನ್ ಭಾಗದಲ್ಲಿ ಅಮೆರಿಕದ F-35 ಲೈಟ್ನಿಂಗ್ II ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್‌ನ 'ಖತಮ್ ಅಲ್ ಅನ್ಬಿಯಾ' ಪ್ರಕಟಣೆ ತಿಳಿಸಿದೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಈ ವಿಮಾನ ಬಂದಿತ್ತು ಎಂದು ಇರಾನ್ ಆರೋಪಿಸಿದೆ. ಸ್ಫೋಟದ ತೀವ್ರತೆಗೆ ವಿಮಾನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪೈಲಟ್ ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಇರಾನ್ ಹೇಳಿದೆ. ಈ ಬಗ್ಗೆ ಅಮೆರಿಕ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಟೆಲ್ ಅವೀವ್‌ನಲ್ಲಿ ಮಿಸೈಲ್‌ ಮಳೆ

ಇತ್ತ ಇಸ್ರೇಲ್‌ನ ರಾಜಧಾನಿ ಟೆಲ್ ಅವೀವ್ ಮೇಲೆ ಇರಾನ್ ಮಿಸೈಲ್‌ ದಾಳಿ ನಡೆಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಟೆಲ್ ಅವೀವ್‌ನ ಸವಿದೋರ್ ಸೆಂಟ್ರಲ್ ರೈಲ್ವೆ ನಿಲ್ದಾಣದ ಮೇಲೆ ಮಿಸೈಲ್‌ ಬಿದ್ದಿದ್ದು, ಕಟ್ಟಡಗಳು ಧ್ವಂಸವಾಗಿವೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಮಿಸೈಲ್‌ ಅವಶೇಷಗಳು ನಗರದ ಒಂಬತ್ತು ವಿವಿಧ ಸ್ಥಳಗಳಲ್ಲಿ ಬಿದ್ದಿವೆ. ದಾಳಿಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿರುವುದು ವರದಿಯಾಗಿದೆ. ಅಪ್ಪರ್ ಗಲಿಲಿ, ಕಿರ್ಯತ್ ಶೋಮನ ಸೇರಿದಂತೆ ಹಲವು ಭಾಗಗಳಲ್ಲಿ ಇಸ್ರೇಲ್ ವಾಯುದಾಳಿಯ ಮುನ್ನೆಚ್ಚರಿಕೆ ನೀಡಿದೆ. ಶತ್ರು ವಿಮಾನಗಳ ಸಂಚಾರ ಇರುವುದನ್ನು ಇಸ್ರೇಲ್ ಸೇನೆ (IDF) ಖಚಿತಪಡಿಸಿದೆ.

ಸೇತುವೆಗಳ ಮೇಲೆ ಇರಾನ್ ಕಣ್ಣು - ಟ್ರಂಪ್ ವೀಡಿಯೋ ಬಿಡುಗಡೆ

ಇರಾನ್‌ನ ಅತಿ ದೊಡ್ಡ ಸೇತುವೆಯನ್ನು ಅಮೆರಿಕದ ವಾಯುದಾಳಿ ಧ್ವಂಸಗೊಳಿಸಿರುವ ದೃಶ್ಯಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡುಗಡೆ ಮಾಡಿದ್ದಾರೆ. ಇರಾನ್‌ನ ಕರಾಜ್‌ನಲ್ಲಿರುವ ಪ್ರಮುಖ ಸೇತುವೆ ಇದಾಗಿದೆ. ಅಮೆರಿಕದ ಈ ಕ್ರಮಕ್ಕೆ ಪ್ರತಿಯಾಗಿ ಇರಾನ್ ಮಿತ್ರ ರಾಷ್ಟ್ರಗಳ ಪ್ರಮುಖ ಸೇತುವೆಗಳನ್ನು ಧ್ವಂಸಗೊಳಿಸುವ ಬೆದರಿಕೆ ಹಾಕಿದೆ. ಕುವೈತ್‌ನ ಶೇಖ್ ಜಾಬಿರ್ ಅಲ್ ಅಹಮದ್ ಅಲ್ ಸಬಾ ಸಮುದ್ರ ಸೇತುವೆ, ಸೌದಿ ಅರೇಬಿಯಾ ಮತ್ತು ಬಹ್ರೇನ್ ಸಂಪರ್ಕಿಸುವ ಕಿಂಗ್ ಫಹದ್ ಕಾಸ್‌ವೇ, ಯುಎಇ ಮತ್ತು ಜೋರ್ಡಾನ್‌ನ ಪ್ರಮುಖ ಸೇತುವೆಗಳನ್ನು ಗುರಿಯಾಗಿಸುವುದಾಗಿ ಇರಾನ್ ಎಚ್ಚರಿಸಿದೆ.

"ಬೆನ್ನಿಗೆ ಬಿದ್ದ ಪೆಟ್ಟಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಮತ್ತು ನಮ್ಮನ್ನು ರಕ್ಷಿಸಿಕೊಳ್ಳುವ ಸಂಪೂರ್ಣ ಹಕ್ಕು ನಮಗಿದೆ" ಎಂದು ಇರಾನ್‌ನ ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.