ರುದ್ರಾಭಿಷೇಕಂನಲ್ಲಿ ದ್ವಿಪಾತ್ರದಲ್ಲಿ ವಿಜಯ ರಾಘವೇಂದ್ರ: ಮೊದಲ ಬಾರಿಗೆ ವೀರಗಾಸೆ ಕಲಾವಿದನಾಗಿ ನಟನೆ!
ನಿರ್ದೇಶಕರು ವೀರಗಾಸೆ ಕಲೆಯ ಹಿನ್ನೆಲೆ ಇಟ್ಟುಕೊಂಡು ಒಂದೊಳ್ಳೆ ಕಾನ್ಸೆಪ್ಟ್ ರೆಡಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಾನು ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲ ಚಿತ್ರದಲ್ಲಿ ನನಗೆ ಸಾಕಷ್ಟು ಗೆಟಪ್ ಗಳಿವೆ ಎಂದು ವಿಜಯ ರಾಘವೇಂದ್ರ ಹೇಳಿದರು.
ವಿಜಯ ರಾಘವೇಂದ್ರ ‘ರುದ್ರಾಭಿಷೇಕಂ’ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆ, ಮಗನ ಪಾತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಈ ಸಿನಿಮಾದ ನಾಯಕಿ.
ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ವೀರಗಾಸೆ ಕಲಾವಿದನ ಪಾತ್ರಕ್ಕೆ ಬಣ್ಣ ಹಚ್ಚಿರುವುದು ವಿಶೇಷ. ವಸಂತ್ ಕುಮಾರ್ ಈ ಸಿನಿಮಾದ ನಿರ್ದೇಶಕರು. ನಮ್ಮ ನಾಡಿನ ಜಾನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ಒಂದು ಕಲೆಯನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.
ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ರುದ್ರಾಭಿಷೇಕಂ ಚಿತ್ರದಲ್ಲಿ ಹೇಳಲಾಗಿದೆ ಎಂದು ವಸಂತ ಕುಮಾರ್ ತಿಳಿಸಿದ್ದಾರೆ.
ಇದೊಂದು ಒಳ್ಳೆಯ ಪ್ರಯತ್ನ. ನಮ್ಮ ನಾಡಿನ ಸಾಂಸ್ಕೃತಿಕ ಹಿನ್ನೆಲೆಯ ಜತೆಗೆ ಒಂದು ಸಣ್ಣ ಇತಿಹಾಸ, ಅದರ ವೈಭವವನ್ನು ತೆಗೆದುಕೊಂಡು ಹೋಗುವ ಕಥೆ. ಕಮರ್ಷಿಯಲ್ ಎಲಿಮೆಂಟ್ ಒಳಗೊಂಡಿದ್ದರೂ ಕೂಡ ಸಾಕಷ್ಟು ಡಿವೈನಿಟಿ ಇರುವ ಚಿತ್ರ.
ನಿರ್ದೇಶಕರು ವೀರಗಾಸೆ ಕಲೆಯ ಹಿನ್ನೆಲೆ ಇಟ್ಟುಕೊಂಡು ಒಂದೊಳ್ಳೆ ಕಾನ್ಸೆಪ್ಟ್ ರೆಡಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಾನು ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲ ಚಿತ್ರದಲ್ಲಿ ನನಗೆ ಸಾಕಷ್ಟು ಗೆಟಪ್ ಗಳಿವೆ ಎಂದು ವಿಜಯ ರಾಘವೇಂದ್ರ ಹೇಳಿದರು.
ನಿರ್ದೇಶಕರ ಸ್ನೇಹಿತರಾದ ಜಯರಾಮಣ್ಣ, ಶಿವರಾಮ್ ಮೊದಲಾದವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಖಳನಟನಾಗಿ ಜನಪ್ರಿಯ ನಟ ಬಾಲ ರಾಜವಾಡಿ ನಟಿಸುತ್ತಿದ್ದಾರೆ. ಸಿನಿಮಾದ ಮತ್ತೊಂದು ಮುಖ್ಯ ಪಾತ್ರದಲ್ಲಿ ಬಿರಾದರ, ಗುರುರಾಜ್ ಹೊಸಕೋಟೆ ಇನ್ನೂ ಕೆಲವು ಹಿರಿಯ ನಟರ ಜೊತೆಗೆ ಕೆಲವು ಹೊಸ ನಟರೂ ಸಹ ಸೇರಿಕೊಂಡಿದ್ದಾರೆ.
ದೇವನಹಳ್ಳಿ ಸುತ್ತಮುತ್ತ ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ. ಫೆಬ್ರವರಿ ಎರಡನೇ ವಾರದಿಂದ 2ನೇ ಹಂತದ ಶೂಟಿಂಗ್ ಪ್ರಾರಂಭಿಸಲಾಗುವುದು.