ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಬಗ್ಗೆ ಗೊತ್ತಿರದ ವಿಷಯಗಳಿವು!
ಕನ್ನಡ ಸಿನಿಮಾ ಲೋಕದ ದಂತಕಥೆ ಡಾ.ರಾಜ್ ಕುಮಾರ್ ಅವರ 95ನೇ ಹುಟ್ಟುಹಬ್ಬವನ್ನು ಇಂದು ಆಚರಿಸಲಾಗುತ್ತಿದೆ. ಡಾ. ರಾಜ್ ತಮ್ಮ ಕರಿಯರ್ ನಲ್ಲಿ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ವಿವಿಧ ವಿಭಿನ್ನ ಪಾತ್ರಗಳ ಮೂಲಕ ಮಿಂಚಿದ್ದಾರೆ. ಡಾ.ರಾಜ್ ಕುಮಾರ್ ಬಗ್ಗೆ ಅನೇಕರಿಗೆ ತಿಳಿದಿಲ್ಲದ ಇಂಟ್ರೆಸ್ಟಿಂಗ್ ವಿಷಯಗಳ ಬಗ್ಗೆ ಇಲ್ಲಿದೆ ವರದಿ.
ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಎಂಬ ಹೆಸರಿನಿಂದ ಜನಿಸಿದ ರಾಜ್ ಕುಮಾರ್ (Dr Rajkumar( ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಸಾಂಸ್ಕೃತಿಕ ಐಕಾನ್ ಆಗಿ ಬೆಳೆದರು. ಗುಬ್ಬಿ ನಾಟಕ ಕಂಪನಿಯಿಂದ ಆರಂಭವಾದ ಇವರ ನಟನಾ ಜರ್ನಿ, ಸಿನಿಮಾವರೆಗೂ ಹಬ್ಬಿತ್ತು.
ಡಾ. ರಾಜ್ ಕುಮಾರ್ ಅವರು ಹೆಚ್ಚೇನೂ ಓದಿಲ್ಲ. ಮೂರನೇ ತರಗತಿಯ ನಂತರ ಅವರ ವಿಧ್ಯಾಭ್ಯಾಸ ಕೊನೆಗೊಂಡಿತು, ಏಕೆಂದರೆ ಅವರು ನಟನಾಗುವ ಹಂಬಲದಿಂದಾಗಿ ಮನರಂಜನಾ ಕ್ಷೇತ್ರಕ್ಕೆ ಧುಮುಕಿದರು. ಅಲ್ಲಿಂದ ಮತ್ತೆ ಅವರು ಹಿಂದಿರುಗಿ ನೋಡಿಲ್ಲ.
1952ರಲ್ಲಿ ತೆರೆಕಂಡ 'ಬೇಡರ ಕಣ್ಣಪ್ಪ' (Bedara Kannappa) ಚಿತ್ರದಲ್ಲಿನ ಕಣ್ಣಪ್ಪನ ಪಾತ್ರದಿಂದ ಜನಪ್ರಿಯತೆ ಪಡೆದಿದ್ದರೂ, ರಾಜ್ ಕುಮಾರ್ ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ‘ಶ್ರೀನಿವಾಸ ಕಲ್ಯಾಣ’ (1952) ಚಿತ್ರದಲ್ಲಿ, ಅಲ್ಲಿ ಅವರು ಸಪ್ತರ್ಷಿಗಳಲ್ಲಿ ಒಬ್ಬರಾಗಿ ಸಣ್ಣ ಪಾತ್ರವನ್ನು ನಟಿಸಿದ್ದರು.
ತಮ್ಮ 200 ಕ್ಕೂ ಹೆಚ್ಚು ಚಲನಚಿತ್ರಗಳ ವೃತ್ತಿ ಜೀವನದುದ್ದಕ್ಕೂ, ರಾಜ್ ಕುಮಾರ್ ವಿಭಿನ್ನ ಪಾತ್ರಗಳ ಮೂಲಕ ಮಿಂಚಿದ್ದರು, ಆದರೆ ಅವರು ಯಾವತ್ತೂ ಪರದೆಯ ಮೇಲೆ ಧೂಮಪಾನ ಮಾಡಲಿಲ್ಲ ಅಥವಾ ಕುಡುಕನ ಪಾತ್ರವನ್ನು ನಿರ್ವಹಿಸಲಿಲ್ಲ, ಆ ಮೂಲಕ ಮಾದರಿ ನಾಯಕನಾಗಿ ಉಳಿದುಕೊಂಡರು.
2000ನೇ ಇಸವಿಯಲ್ಲಿ ಕುಖ್ಯಾತ ದರೋಡೆಕೋರ ವೀರಪ್ಪನ್ (Veerappan) ಗಾಜನೂರಿನಿಂದ ರಾಜ್ ಕುಮಾರ್ ನನ್ನು ಅಪಹರಿಸಿ ದಕ್ಷಿಣ ಭಾರತದ ಕಾಡುಗಳಲ್ಲಿ 109 ದಿನಗಳ ಕಾಲ ಸೆರೆಯಲ್ಲಿಟ್ಟಿದ್ದ. ಇದು ದೇಶಾದ್ಯಂತ ಕೋಲಾಹಲ ಎಬ್ಬಿಸಿತ್ತು.
ಗೋಕಾಕ್ ಚಳವಳಿಯಲ್ಲಿ (Gokak Movement) ಅವರ ಪಾಲ್ಗೊಳ್ಳುವಿಕೆ, ಕನ್ನಡ ಭಾಷೆಯ ಪ್ರಾಧಾನ್ಯತೆಗಾಗಿ ಹೋರಾಟ, ಎಲ್ಲವೂ ಇವರು ಸಿನಿಮಾ ನಾಯಕ ಮಾತ್ರವಲ್ಲ, ಜನಗಳಿಗೆ ಬೇಕಾದ ನಿಜವಾದ ನಾಯಕ ಎನ್ನುವುದನ್ನು ಮನದಟ್ಟು ಮಾಡುವಂತೆ ಮಾಡಿತು.
ರಾಜ್ ಕುಮಾರ್ ಅವರು ನಟ ಮಾತ್ರವಲ್ಲ, ಟ್ರೈಂಡ್ ಶಾಸ್ತ್ರೀಯ ಗಾಯಕರೂ (trained clasical singer)ಆಗಿದ್ದರು, ಅವರು ಕನ್ನಡದಲ್ಲಿ ತಮ್ಮ ವಿಶಿಷ್ಟ ಶಬ್ದಕೋಶಕ್ಕೆ ಹೆಸರುವಾಸಿಯಾಗಿದ್ದರು. ಅವರು 1974 ರಿಂದ ಸಿನಿಮಾಗಳಲ್ಲಿ ಹಾಡಲು ಪ್ರಾರಂಭಿಸಿದರು. ಇಂದಿನವರೆಗೂ ಇವರ ಹಾಡುಗಳು ಜನಪ್ರಿಯವಾಗಿವೆ.
1978ರಲ್ಲಿ ತೆರೆಕಂಡ 'ಆಪರೇಷನ್ ಡೈಮಂಡ್ ರಾಕೆಟ್' ಚಿತ್ರದಲ್ಲಿ ಇಂಗ್ಲಿಷ್ ಹಾಡೊಂದನ್ನು ಹಾಡಿದ್ದರು. ಆ ಮೂಲಕ ಮೂರನೇ ಕ್ಲಾಸ್ ಕಲಿತರು ಕಲಿಯುವ ಉತ್ಸಾಹ ಇದ್ದರೆ, ಭಾಷೆಯ ಹಂಗಿಲ್ಲ ಅನ್ನೋದನ್ನು ತಿಳಿಸಿದರು.
ಡಾ. ರಾಜ್ ಕುಮಾರ್ ಅವರು ಹನ್ನೊಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಹತ್ತು ದಕ್ಷಿಣ ಫಿಲಂ ಫೇರ್ ಪ್ರಶಸ್ತಿಗಳು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 1983 ರಲ್ಲಿ ಪದ್ಮಭೂಷಣ ಮತ್ತು 1995 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಂತಹ ಪ್ರತಿಷ್ಠಿತ ಗೌರವಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ರಾಜ್ ಕುಮಾರ್ ಅವರನ್ನು ನಟಸಾರ್ವಭೌಮ , ಬಂಗಾರದ ಮನುಷ್ಯ ಮತ್ತು ಅಣ್ಣಾವ್ರು ಮುಂತಾದ ವಿವಿಧ ಬಿರುದುಗಳಿಂದ ಕರೆಯಲಾಗುತ್ತದೆ, ಇದು ಜನರಿಂದ ಒಬ್ಬ ನಟನಿಗೆ ಸಿಕ್ಕಂತಹ ಮಹಾನ್ ಗೌರವವಾಗಿದೆ.