ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ ಬರ್ತ್ ಡೇ ಸೆಲೆಬ್ರೇಶನ್ ಹೀಗಿತ್ತು ನೋಡಿ
ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಮೂಲಕ ಮೋಡಿ ಮಾಡಿದ ನಟಿ ಶ್ವೇತಾ ಶ್ರೀವಾತ್ಸವ್ ಸಿಂಪಲ್ ಆಗಿ ತಮ್ಮ ಪತಿ ಮತ್ತು ಮಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಹೇಗಿತ್ತು ನೋಡಿ ಸೆಲೆಬ್ರೇಶನ್.
ಮುಖಾಮುಖಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಂತರ ಆ ದಿನಗಳು ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿ, ಸೈಬರ್ ಯುಗದೊಳ್ ನವಯುಗ ಪ್ರೇಮ ಕಾವ್ಯ ಚಿತ್ರದ ಮೂಲಕ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ನಟಿ ಶ್ವೇತಾ ಶ್ರೀವಾತ್ಸವ್ (Shwetha Srivatsav).
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಶ್ವೇತಾ ವಿದ್ಯಾಭ್ಯಾಸವನ್ನು ಸಹ ಇಲ್ಲೇ ಪೂರ್ಣ ಮಾಡಿ, ಮೀಡಿಯಾ ವಿಷಯವನ್ನು ಸಹ ಕಲಿತು ಅನೇಕ ಟಿವಿ ಕಾರ್ಯಕ್ರಮಗಳಿಗೆ ನಿರೂಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇದಲ್ಲದೆ ಅನೇಕ ಕನ್ನಡ, ತೆಲುಗು, ಧಾರಾವಾಹಿಗಳಲ್ಲಿ ಅಭಿನಯಿಸಿ, ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.
ಶ್ವೇತಾ 2013 ರಲ್ಲಿ ಬಿಡುಗಡೆಯಾದ ಸಿಂಪಲ್ಲಾಗೊಂದು ಲವ್ ಸ್ಟೋರಿ (Simple ag ondu love story) ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಸಿಂಪಲ್ ಆದ ಜೊತೆಗೆ ಅದ್ಭುತವಾದ ಪಾತ್ರದ ಮೂಲಕ ಶ್ವೇತಾ ಶ್ರೀವಾತ್ಸವ್ ಕರ್ನಾಟಕದ ಮನೆ ಮನ ತಲುಪಿದ್ದರು.
ಶ್ವೇತ ಶ್ರೀವಾತ್ಸವ್ ಅವರು ಜನಿಸಿದ್ದು ಸೆಪ್ಟೆಂಬರ್ 4 ರಂದು ಬೆಂಗಳೂರಿನಲ್ಲಿ. ನಿನ್ನೆಯಷ್ಟೇ ಸಿಂಪಲ್ಲಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಈ ಸಿಂಪಲ್ ಬೆಡಗಿ ಬರ್ತ್ ಡೇ ಫೋಟೋ ಮತ್ತು ವಿಡೀಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಂದಿ ಹಿಲ್ಸ್ ಬಳಿ ಇರುವ ಲಕ್ಸುರಿ ಬಾಟಿಕ್ ರೆಸಾರ್ಟ್ ನಲ್ಲಿ ತುಂಬಾನೆ ಸಿಂಪಲ್ ಆಗಿ ತಮ್ಮ ಗಂಡ ಮತ್ತು ಮಗಳೊಂದಿಗೆ ನಟಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ನೀಲಿ ಬಣ್ಣದ ಒನ್ ಪೀಸ್ ಡ್ರೆಸ್ ನಲ್ಲಿ ಮಿಂಚಿದ ಶ್ವೇತಾಗೆ ಪತಿ ಅಮಿತ್ ಶ್ರೀವಾತ್ಸವ್ ಸರ್ಪ್ರೈಸ್ ಕೇಕ್ (Surprise cake) ಅರೇಂಜ್ ಮೆಂಟ್ ಮಾಡಿದ್ದು, ಕೇಕ್ ಮೇಲೆ ಸೂಪರ್ ಸ್ಟಾರ್ ಎಂದು ಬರೆದಿದ್ದಾರೆ. ನಟಿ ಕೇಕ್ ಕತ್ತರಿಸಿ ಗಂಡ, ಮಗಳಿಗೆ ತಿನ್ನಿಸಿ ಸಂಭ್ರಮಿಸಿದ್ದಾರೆ.
ಸಿನಿಮಾ ವಿಷಯಕ್ಕೆ ಬಂದ ಶ್ವೇತಾ ಇದುವರೆಗೆ ನಟಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ, ಇವರು ಹೆಚ್ಚಾಗಿ ಫ್ಯಾಮಿಲಿ, ಮಗು ಎಂದು ಬ್ಯುಸಿಯಾಗಿರ್ತಾರೆ, ಆಗೊಮ್ಮೆ ಈಗೊಮ್ಮೆ ಸಿನಿಮಾದಲ್ಲಿ ಕಾಣಿಸಿಕೊಂಡರೂ ಇಂದಿಗೂ ತಮ್ಮ ಬೇಡಿಕೆಯ ನಟಿಯಾಗಿ ಉಳಿದುಕೊಂಡಿದ್ದಾರೆ.
ಆತ್ಮಸಾಕ್ಷಿ, ಫೇರ್ ಅಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು, ಹೋಪ್ ಚಿತ್ರಗಳಲ್ಲಿ ಇಲ್ಲಿವರೆಗೆ ನಟಿಸಿದ್ದಾರೆ. ಇವರ ನಟನೆಯ ರಾಘವೇಂದ್ರ ಸ್ಟೋರ್ಸ್ ಈ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಇವರು ಜಗ್ಗೇಶ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಇವರ ನಟನೆಯ ಚಿಕ್ಕಿಯ ಮೂಗುತ್ತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ವೇತಾ, ತಮ್ಮ ಫಿಟ್ನೆಸ್ ವಿಡಿಯೋ, ತಮಗಿಷ್ಟವಾದ ಡ್ಯಾನ್ಸ್ ವಿಡಿಯೋ, ಮುದ್ದಾದ ಮಗಳು ಅಶ್ಮಿತಾ ಜೊತೆಗಿನ ಫೋಟೋಗಳು, ದೇವಸ್ಥಾನ ಭೇಟಿ, ಟ್ರಾವೆಲ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಜನರೊಂದಿಗೆ ಹೆಚ್ಚಾಗಿ ಕನೆಕ್ಟ್ ಆಗುತ್ತಿರುತ್ತಾರೆ.