ಕನ್ನಡಕ್ಕೆ ಬಂದ ಕನ್ನಡತಿ; ಚೆನ್ನೈನಲ್ಲಿದ್ದರೂ ಮನೆಯಲ್ಲಿ ಕನ್ನಡನೇ ಮಾತಾಡೋದು ಎಂದ ನಟಿ ಸ್ವಾತಿಷ್ಟಾ ಕೃಷ್ಣನ್
ಸೂಪರ್ ಹಿಟ್ ತಮಿಳು ಸಿನಿಮಾಗಳಲ್ಲಿ ಮಿಂಚಿ ಈಗ ಕನ್ನಡಕ್ಕೆ ಬಂದ ಸ್ವಾತಿಷ್ಟಾ. ಫೆಬ್ರವರಿ 8ರಂದು ಒಂದು ಸರಳ ಪ್ರೇಮಕತೆ ಸಿನಿಮಾ ರಿಲೀಸ್.
ಕಮಲ್ ಹಾಸನ್ ನಟನೆಯ ‘ವಿಕ್ರಮ್’, ಜೀವಾ ಅಭಿನಯದ ‘ಕೀ’ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಸ್ವಾತಿಷ್ಟಾ ಕೃಷ್ಣನ್ ಅವರ ಮೊದಲ ಕನ್ನಡ ಸಿನಿಮಾ ‘ಒಂದು ಸರಳ ಪ್ರೇಮಕತೆ’ ಫೆ.8ರಂದು ಬಿಡುಗಡೆಯಾಗುತ್ತಿದೆ.
ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಮೂಲತಃ ಕನ್ನಡತಿಯಾಗಿರುವ ಸ್ವಾತಿಷ್ಟಾ ತಮ್ಮ ಮೊದಲ ಕನ್ನಡ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತು ಸ್ವಾತಿಷ್ಟಾ, ‘ನನ್ನ ತಂದೆ ಕೆಲಸದ ನಿಮಿತ್ತ ಚೆನ್ನೈಗೆ ಬಂದವರು. ನಾನು ಹುಟ್ಟಿದ್ದು, ಬೆಳೆದಿದ್ದು ಚೆನ್ನೈನಲ್ಲಿ. ಮನೆಯಲ್ಲಿ ಕನ್ನಡ ಮಾತನಾಡುತ್ತೇವೆ. ಕನ್ನಡ ಪ್ರೀತಿ ಜಾಸ್ತಿಯೇ ಇದೆ.
ಕನ್ನಡದಲ್ಲಿ ನಟಿಸಬೇಕು ಅಂತ ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದೆ. ಆ ಹೊತ್ತಲ್ಲಿ ಸಿಂಪಲ್ ಸುನಿ ನಿರ್ದೇಶನದಲ್ಲಿ, ವಿನಯ್ ರಾಜ್‌ಕುಮಾರ್ ನಟನೆಯ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.
ಅತ್ಯುತ್ತಮ ಬರಹಗಾರರೆಂದೇ ಖ್ಯಾತಿ ಪಡೆದಿರುವ ಸಿಂಪಲ್ ಸುನಿ ಸಿನಿಮಾ ಮೂಲಕ ಕನ್ನಡ ಪ್ರವೇಶಿಸುತ್ತಿರುವುದು ಸಂತೋಷ ಕೊಟ್ಟಿದೆ’ ಎನ್ನುತ್ತಾರೆ. ತನ್ನ ಪಾತ್ರದ ಬಗ್ಗೆ, ‘ನನ್ನದು ಈ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರ.
ನನ್ನ ಬದುಕಿಗೆ ತುಂಬಾ ಹೋಲುವ ಪಾತ್ರ. ಯಾಕೆಂದರೆ ನಾನು ಜರ್ನಲಿಸಂ ವಿದ್ಯಾರ್ಥಿನಿ. ಅಲ್ಲದೇ ತುಂಬಾ ಬೋಲ್ಡ್ ಮತ್ತು ನೇರವಾಗಿ ಮಾತನಾಡುವ ಸ್ವಭಾವ ನನ್ನದು.
ಇಲ್ಲಿ ಕಡಿಮೆ ಮೇಕಪ್, ಸರಳ ಕಾಸ್ಟ್ಯೂಮ್‌ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತೇನೆ. ನನಗೆ ರೊಮ್ಯಾಂಟಿಕ್ ಕಾಮಿಡಿ, ಫ್ಯಾಮಿಲಿ ಎಂಟರ್‌ಟೇನರ್ ಸಿನಿಮಾಗಳು ಇಷ್ಟ. ನನ್ನಿಷ್ಟದ ಸಿನಿಮಾ ಮೂಲಕ ಕನ್ನಡಕ್ಕೆ ಬರುತ್ತಿದ್ದೇನೆ’ ಎಂದು ಹೇಳುತ್ತಾರೆ.