120 ಕೋಟಿ ಕಡೆಗೆ ‘ಸು ಫ್ರಂ ಸೋ’: 5.5 ಕೋಟಿಗೆ ಸ್ಯಾಟಲೈಟ್, ಡಿಜಿಟಲ್ ಹಕ್ಕು ಮಾರಾಟ
‘ಕೂಲಿ’, ‘ವಾರ್ 2’ನಂಥಾ ಸ್ಟಾರ್ ಸಿನಿಮಾಗಳ ಅಬ್ಬರದಲ್ಲೂ ಯಶಸ್ಸಿನ ಓಟ ಮುಂದುವರಿಸಿದೆ. ಸದ್ಯ 120 ಕೋಟಿ ಕಲೆಕ್ಷನ್‌ನತ್ತ ಹೆಜ್ಜೆ ಹಾಕಿದೆ. ಈ ಮಧ್ಯೆ ನಿರ್ಮಾಪಕ ಎನ್.ಎಸ್. ರಾಜ್‌ಕುಮಾರ್ ಚಿತ್ರದ ತಮಿಳು ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ದಾಖಲೆಯ ಪ್ರದರ್ಶನ ಕಂಡ ‘ಸು ಫ್ರಂ ಸೋ’ ಸಿನಿಮಾ ಇದೀಗ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟದಲ್ಲಿಯೂ ದಾಖಲೆ ಬರೆದಿದೆ.
‘ಸು ಫ್ರಂ ಸೋ’ ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಪ್ರಸಾರ ಹಕ್ಕನ್ನು ಕಲರ್ಸ್ ಮತ್ತು ಹಾಟ್‌ಸ್ಟಾರ್ ಸಂಸ್ಥೆಗಳು ಬರೋಬ್ಬರಿ ಐದೂವರೆ ಕೋಟಿ ರೂಪಾಯಿ ಮತ್ತು ಜಿಎಸ್‌ಟಿ ಕೊಟ್ಟು ಖರೀದಿ ಮಾಡಿವೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಭಾರತದ ಎಲ್ಲಾ ಭಾಷೆಯ ಹಕ್ಕುಗಳನ್ನೂ ಖರೀದಿ ಮಾಡಲಾಗಿದೆ. ಕಲರ್ಸ್ ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರವಾಗಲಿದ್ದು, ಕೆಲವೇ ದಿನಗಳಲ್ಲಿ ಹಾಟ್‌ಸ್ಟಾರ್ ಓಟಿಟಿಯಲ್ಲಿ ಈ ಸಿನಿಮಾ ನೋಡಬಹುದು ಎನ್ನಲಾಗಿದೆ.
‘ಸು ಫ್ರಂ ಸೋ’ ಚಿತ್ರತಂಡ ರಿಲೀಸ್‌ಗೂ ಮೊದಲೇ ಮತ್ತೊಂದು ಟಿವಿ ವಾಹಿನಿಯವರಿಗೆ ಈ ಸಿನಿಮಾ ತೋರಿಸಿದ್ದು, ಅವರು ಸಿನಿಮಾ ರಿಲೀಸ್ ಆದ ಮೇಲೆ ನೋಡೋಣ ಎಂದಿದ್ದರಿಂದ ಈಗ ಮತ್ತೊಂದು ವಾಹಿನಿಯವರಿಗೆ ಸಿನಿಮಾ ಪ್ರಸಾರ ಹಕ್ಕುಗಳು ಮಾರಾಟವಾಗಿದೆ.
ಬಹಳಷ್ಟು ಸಮಯದಿಂದ ಸಿನಿಮಾಗಳಿಗೆ ಸೂಕ್ತವಾದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟ ಹಣವೂ ದೊರೆಯುತ್ತಿರಲಿಲ್ಲ. ಕೆಲವೇ ಸಿನಿಮಾಗಳಿಗೆ ಆ ಭಾಗ್ಯ ದೊರೆಯುತ್ತಿತ್ತು. ಆದರೆ ‘ಸು ಫ್ರಂ ಸೋ’ ದೊಡ್ಡ ಮಟ್ಟದಲ್ಲಿ ಗೆದ್ದಿದ್ದರಿಂದ ಅಲ್ಲಿಯೂ ಗೆಲುವು ಸಾಧಿಸಿದೆ.
ಜೆಪಿ ತುಮಿನಾಡು ನಿರ್ದೇಶನದ, ಶನೀಲ್ ಗೌತಮ್, ರಾಜ್ ಬಿ ಶೆಟ್ಟಿ ನಟನೆಯ ಈ ಸಿನಿಮಾ 25 ದಿನಗಳ ಪ್ರದರ್ಶನ ಕಂಡಿದ್ದು, ‘ಕೂಲಿ’, ‘ವಾರ್ 2’ನಂಥಾ ಸ್ಟಾರ್ ಸಿನಿಮಾಗಳ ಅಬ್ಬರದಲ್ಲೂ ಯಶಸ್ಸಿನ ಓಟ ಮುಂದುವರಿಸಿದೆ. ಸದ್ಯ 120 ಕೋಟಿ ಕಲೆಕ್ಷನ್‌ನತ್ತ ಹೆಜ್ಜೆ ಹಾಕಿದೆ. ಈ ಮಧ್ಯೆ ನಿರ್ಮಾಪಕ ಎನ್.ಎಸ್. ರಾಜ್‌ಕುಮಾರ್ ಚಿತ್ರದ ತಮಿಳು ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದಾರೆ.
ಜೆಪಿ ತುಮಿನಾಡ್ ಭೇಟಿ ಮಾಡಿದ ಕಿಚ್ಚ ಸುದೀಪ್: ನಿರ್ದೇಶಕ ಜೆಪಿ ತುಮಿನಾಡು ಅವರನ್ನು ಕಿಚ್ಚ ಸುದೀಪ್ ಭೇಟಿಯಾಗಿ ಸಿನಿಮಾ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ನಟ ಅಜಯ್ ದೇವಗನ್ ಚಿತ್ರತಂಡವನ್ನು ಕರೆಸಿ ಅಭಿನಂದನೆ ಸಲ್ಲಿಸಿದ್ದರು.