ಶಿವಣ್ಣ 125ನೇ ಸಿನಿಮಾ ಸಂಭ್ರಮ; ವೇದಾ ಚಿತ್ರದ ಪೋಸ್ಟರ್ ಬಿಡುಗಡೆ, ಗೀತಾ ಪಿಕ್ಚರ್ ಲೋಗೋ ಅನಾವರಣ
ಅದು ಮೂರು ಸಂಭ್ರಮಗಳ ವೇದಿಕೆ. ಯಾರೆಲ್ಲಾ ಬಂದಿದ್ದರು ನೋಡಿ......
ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಅವರ ಹುಟ್ಟು ಹಬ್ಬ, ಗೀತಾ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಲೋಗೋ ಅನಾವರಣ ಹಾಗೂ ಶಿವರಾಜ್‌ಕುಮಾರ್ ನಟನೆಯ, ಹರ್ಷ ನಿರ್ದೇಶನದ ‘ವೇದಾ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಗೆ. ಇದು ಶಿವಣ್ಣ ನಟನೆಯ 125ನೇ ಸಿನಿಮಾ.
ಈ ಸಂಭ್ರಮಕ್ಕೆ ಚಿತ್ರರಂಗದ ಗಣ್ಯರು, ನಟ, ನಟಿಯರು ಸೇರಿದಂತೆ ಹಲವರು ಸಾಕ್ಷಿ ಆದರು. ಡಾ ರಾಜ್‌ಕುಮಾರ್ ಕುಟುಂಬದ ನಾಲ್ಕೂ ಜನರೇಷನ್ ಹಾಜರಿದ್ದಿದ್ದು ಹೈಲೈಟ್.
ಈ ಸಂಭ್ರಮದ ನಡುವೆ ಮಾತಿಗೆ ನಿಂತರು ಗೀತಾ ಶಿವರಾಜ್‌ಕುಮಾರ್. ‘ಶಿವರಾಜ್ ಕುಮಾರ್ ಹಿಂದಿನ ಶಕ್ತಿ ನಾನು ಅಂತಾರೆ. ಅವರ ಹಿಂದಿನ ನಿಜವಾದ ಶಕ್ತಿಗಳು ಅಭಿಮಾನಿಗಳು.
ಜತೆಗೆ ರಾಘು, ಅಪ್ಪು, ಅಪ್ಪಾಜಿ ಹಾಗೂ ಅಮ್ಮ. ಹೀಗೆ ಇಡೀ ಕುಟುಂಬವೇ ಶಿವರಾಜ್ ಕುಮಾರ್ ಹಿಂದೆ ನಿಂತಿದೆ. ಹೀಗಾಗಿ ಅವರ ಯಶಸ್ಸಿನ ಹಿಂದಿನ ಶಕ್ತಿ ನಾನು ಒಬ್ಬಳೇ ಅಲ್ಲ.
ನಾನು ನಿರ್ಮಾಣ ಸಂಸ್ಥೆ ಮಾಡಬೇಕು ಎಂದುಕೊಂಡಾಗ ಸಾಕಷ್ಟುಕಲಿಯುವ ಪ್ರಯತ್ನ ಮಾಡಿದೆ. ಶೂಟಿಂಗ್ ಸೆಟ್‌ನಲ್ಲಿ ನಿರ್ದೇಶಕ ಹರ್ಷ ತುಂಬಾ ಹೇಳಿಕೊಡುತ್ತಿದ್ದರು. ಎಲ್ಲರಿಗೂ ಇಷ್ಟಆಗುವಂತಹ ಒಳ್ಳೆಯ ಸಿನಿಮಾಗಳು ಮಾಡಬೇಕು ಎಂಬುದು ಆಸೆ’ ಎಂದು ಗೀತಾ ಶಿವರಾಜ್‌ಕುಮಾರ್ ಹೇಳಿಕೊಂಡರು.
ಗೀತಾ ಪಿಕ್ಚರ್ಸ್ ಜತೆಗೆ ಜೀ ಸ್ಟುಡಿಯೋ ಕೂಡ ಜತೆಯಾಗಿದೆ. ಈ ಎರಡೂ ಸಂಸ್ಥೆಗಳ ಮೂಲಕ ಸಿನಿಮಾಗಳು ಬರಲಿವೆ. ‘ಅಭಿಮಾನಿಗಳಿಂದ ನಾನು ಇಲ್ಲಿ ನಿಂತಿದ್ದೇನೆ. ಜಗಳ ಆಡಬೇಕು, ಖುಷಿ ಪಡಬೇಕು, ಒಳ್ಳೆಯ ಸಿನಿಮಾ ಮಾಡಬೇಕು ಹೀಗೆ ಏನೇ ಅನಿಸಿದರೂ ಅದು ಅಭಿಮಾನಿಗಳಿಂದಲೇ.
ಅವರ ಪ್ರೀತಿಯಿಂದಲೇ ನಾನು 125ನೇ ಚಿತ್ರದವರೆಗೂ ಬಂದಿದ್ದೇನೆ’ ಎಂದರು ಶಿವರಾಜ್ ಕುಮಾರ್. ಹಿರಿಯ ನಟ ಅನಂತ್‌ನಾಗ್ ಗೀತಾ ಪಿಕ್ಚರ್ಸ್ ಲೋಗೋ ಬಿಡುಗಡೆ ಮಾಡಿದರು. ಅರ್ಜುನ್ ಜನ್ಯಾ ಸಂಗೀತ ಕಾರ್ಯಕ್ರಮ ನೀಡಿದರು.
ಚಿತ್ರದ ನಾಯಕಿ ಗಾನವಿ ಲಕ್ಷ್ಮಣ್, ಅನಿಲ್ ಕುಂಬ್ಳೆ, ದುನಿಯಾ ವಿಜಯ್, ಗುರು ಕಿರಣ್, ನಿರ್ದೇಶಕ ಹರ್ಷ, ಮಧು ಬಂಗಾರಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ‘ವೇದಾ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಯಿತು.