- Home
- Entertainment
- Sandalwood
- Puneeth Rajkumar; ಸಿಡ್ನಿ ಅಭಿಮಾನಿಗಳಿಂದ ವಿಶೇಷ ಗೌರವ, ಅಪ್ಪು ಸ್ಮರಣಾರ್ಥ ಫಲಕ ಅನಾವರಣ
Puneeth Rajkumar; ಸಿಡ್ನಿ ಅಭಿಮಾನಿಗಳಿಂದ ವಿಶೇಷ ಗೌರವ, ಅಪ್ಪು ಸ್ಮರಣಾರ್ಥ ಫಲಕ ಅನಾವರಣ
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಪ್ಪುಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಫಲಕವನ್ನು ಅನಾವರಣ ಮಾಡಲಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲದೆ ಒಂದು ವರ್ಷ ಕಳೆದು ಹೋಯಿತು. ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನ ಅಲಂಕರಿಸಿರುವ ಅಪ್ಪು ಇಹಲೋಕ ತ್ಯಜಿಸಿ ಭರ್ತಿ ಒಂದು ವರ್ಷ. ಅಕ್ಟೋಬರ್ 28 ಕರ್ನಾಟಕದ ಪಾಲಿಗೆ, ಚಿತ್ರರಂಗಕ್ಕೆ ಕರಾಳ ದಿನ. ಆ ದಿನವನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಠಾತ್ ನಿಧನ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಆಗಿತ್ತು. ಅವರ ನೆನಪಲ್ಲೇ ಒಂದು ವರ್ಷ ಕಳೆದುಹೋಯ್ತು. ಅಭಿಮಾನಿಗಳು ನೆಚ್ಚಿನ ನಟನನ್ನು ವಿವಿಧ ರೀತಿ ಆರಾಧಿಸುತ್ತಿದ್ದಾರೆ. ಯಾವೆಲ್ಲ ರೀತಿ ಅಪ್ಪುಗೆ ಗೌರವ ಸಲ್ಲಿಸ ಬಹುದೋ ಹಾಗೆಲ್ಲ ಸಲ್ಲಿಸುತ್ತಿದ್ದಾರೆ.
ಅಭಿಮಾನಿಗಳ ಪ್ರೀತಿಯ ಅಪ್ಪು ಸಾಕ್ಷಾತ್ ದೇವರಾಗಿದ್ದಾರೆ. ಅಪ್ಪುಗೆ ಕೇವಲ ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯ ಹಾಗೂ ದೇಶಗಳಲ್ಲೂ ಆಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪ್ರಪಂಚದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಆರಾಧ್ಯದೈವನಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಪ್ಪುಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಫಲಕವನ್ನು ಅನಾವರಣ ಮಾಡಲಾಗಿದೆ. ಸಿಡ್ನಿಯ ಪಾರ್ಕ್ ಒಂದಕ್ಕೆ ಅಪ್ಪು ಹೆಸರಿಟ್ಟು ಅಪ್ಪು ನೆನಪಿಗೆ ಫಲಕ ನಿರ್ಮಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆ ದಿನ ಅನಾವರಣ ಮಾಡಿ ಗೌರವ ಸಲ್ಲಿಸಿದ್ದಾರೆ.
ಫಲಕ ಅನಾವರಣದ ಫೋಟೋಗಳು ಸುವರ್ಣ ನ್ಯೂಸ್ ವೆಬ್‌ಗೆ ಲಭ್ಯವಾಗಿವೆ. ಸಂಪ್ರದಾಯಬದ್ದವಾಗಿ ಅಪ್ಪು ಫಲಕ ಅನಾವರಣ ಮಾಡಿದ ರೀತಿ ಕನ್ನಡಿಗರ ಗಮನ ಸೆಳೆಯುತ್ತಿದೆ. ಫಲಕಕ್ಕೆ ಬಾಳೆ ಗಿಡ ನಿಲ್ಲಿಸಿ ಪೂಜೆ ಮಾಡಿ ಅನಾವರಣ ಮಾಡಲಾಗಿದೆ. ಅಪ್ಪು ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅಸ್ಟ್ರೇಲಿಯಾ ಅಭಿಮಾನಿಗಳ ವಿಶೇಷ ಪ್ರೀತಿ ಕನ್ನಡಿಗ ಮನಸೋಲುವಂತೆ ಮಾಡಿದೆ.
ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕರ್ನಾಟಕದ ಅತ್ಯುನ್ನತ್ತ ಪ್ರಶಸ್ತಿಯನ್ನು ನವೆಂಬರ್ 1ರಂದು ಅಪ್ಪುಗೆ ನೀಡಿ ಗೌರವಿಸಲಾಗುತ್ತಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಈಗಾಗಲೇ ಮಾಹಿತಿ ನೀಡಿದ್ದಾರೆ.
ನವೆಂಬರ್ 1ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಅಪ್ಪುಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಜೂ ಎನ್ ಟಿ ಆರ್ ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ.
ಅಪ್ಪು ನಿಧನಹೊಂದಿ ಒಂದು ವರ್ಷಕ್ಕೆ ಅವರ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ರಿಲೀಸ್ ಮಾಡಲಾಗಿದೆ. ಕರ್ನಾಟಕದ ಬಗ್ಗೆ ಇರುವ ಗಂಧದ ಗುಡಿಯನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಅಪ್ಪು ಅವರನ್ನು ಮತ್ತೊಮ್ಮೆ ತೆರೆ ಮೇಲೆ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.