- Home
- Entertainment
- Sandalwood
- ಈ ಚಿತ್ರಗಳಿಗೆ ಕತೆಯೇ ಹೀರೋ, ಪ್ರೇಕ್ಷಕನೇ ಅನ್ನದಾದ; 2023ರ ಕಂಟೆಂಟ್ ಆಧಾರಿತ ಸಿನಿಮಾಗಳಿವು
ಈ ಚಿತ್ರಗಳಿಗೆ ಕತೆಯೇ ಹೀರೋ, ಪ್ರೇಕ್ಷಕನೇ ಅನ್ನದಾದ; 2023ರ ಕಂಟೆಂಟ್ ಆಧಾರಿತ ಸಿನಿಮಾಗಳಿವು
ಅಭಿಮಾನಿಗಳು, ಸ್ಟಾರ್‌ಡಮ್, ಮೇಕಿಂಗ್, ಜನಪ್ರಿಯತೆಯ ಅಲೆಯಲ್ಲಿ ಗೆಲ್ಲುವ ಚಿತ್ರಗಳು ಒಂದು ಕಡೆಯಾದರೆ ಕತೆಯೇ ಹೀರೋ ಆಗಿಸಿಕೊಂಡು ಪ್ರೇಕ್ಷಕರ ಮನಸ್ಸಿಗೆ ನಾಟುವ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ಅಂಥ ಚಿತ್ರಗಳ ಕಡೆ ನೋಡಿದಾಗ ಕಂಡಿದ್ದು ಹಲವು.

ಆರ್ಕೆಸ್ಟ್ರಾ ಮೈಸೂರು: ಆರ್ಕೆಸ್ಟ್ರಾದಲ್ಲಿ ಹಾಡುವವರು ಸ್ಟಾರ್‌ಗಳಾಗಿ ಮರೆಯುತ್ತಿದ್ದ ದಿನಗಳಲ್ಲಿ ಮೈಸೂರಿನ ಹುಡುಗನೊಬ್ಬ ಗಾಯಕನಾಗಲು ಹೊರಡುವ ಕತೆ. ಈಗಾಗಲೇ ಹಾಡು ಮತ್ತು ಟ್ರೇಲರ್ ಮೂಲಕ ಭರವಸೆ ಮೂಡಿಸಿರುವ ಈ ಚಿತ್ರದಲ್ಲಿ ಪೂರ್ಣಚಂದ್ರ ನಾಯಕ, ರಾಜಲಕ್ಷ್ಮೀ ನಾಯಕಿ. ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘುಧೀಕ್ಷಿತ್ ನಿರ್ಮಾಣ, ಸುನೀಲ್ ಮೈಸೂರು ನಿರ್ದೇಶನದ ಚಿತ್ರ. ಕೆಆರ್‌ಜಿ ಸ್ಟುಡಿಯೋ ಹಾಗೂ ಡಾಲಿ ಪಿಕ್ಚೇರ್ ಜತೆ ಸೇರಿ ಈ ಚಿತ್ರವನ್ನು ಇದೇ ಜ.12ಕ್ಕೆ ಬಿಡುಗಡೆ ಮಾಡುತ್ತಿವೆ.
ಸೋಮು ಸೌಂಡ್ ಇಂಜಿನಿಯರ್: ಸಲಗ ಹಾಗೂ ಟಗರು ಚಿತ್ರಗಳ ತಂತ್ರಜ್ಞರೇ ಸೇರಿ ಮಾಡುತ್ತಿರುವ, ಗ್ರಾಮೀಣ ಕತೆಯ ಚಿತ್ರವಿದು. ಈ ಚಿತ್ರದ ಟೀಸರ್ ಇತ್ತೀಚೆಗಷ್ಟೆಬಿಡುಗಡೆ ಆಗಿದ್ದು, ಕನ್ನಡದ ಸೊಗಡಿನ ಸಿನಿಮಾ ಎನ್ನುವ ಕಾರಣಕ್ಕೆ ಹೆಸರಿಗೆ ತಕ್ಕಂತೆ ಸೋಮು ಸೌಂಡ್ ಮಾಡುವ ಜತೆಗೆ ಭರವಸೆ ಮೂಡಿಸಿರುವ ಸಿನಿಮಾ. ಅಭಿ ನಿರ್ದೇಶಿಸಿ, ಕೆಂಡ ಅಲಿಯಾಸ್ ಶ್ರೇಷ್ಠ ನಾಯಕನಾಗಿ, ಶ್ರುತಿ ಪಾಟೀಲ್ ನಾಯಕಿಯಾಗಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ, ಕ್ರಿಸ್ಟೋಫರ್ ಕಿಣಿ ನಿರ್ಮಾಣವಿದೆ.
19.20.21: ಇದು ಮಂಸೋರೆ ನಿರ್ದೇಶನದ ಚಿತ್ರ. ಈಗಾಗಲೇ ‘ಆಕ್ಟ್ 1978’ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ನಿರ್ದೇಶಕನ ಸಿನಿಮಾ. ಈ ಕಾರಣಕ್ಕೆ ಅವರ 19.20.21 ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಕತೆಯನ್ನೇ ನಂಬಿ ಸಿನಿಮಾ ಮಾಡುವ ನಿರ್ದೇಶಕರ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ಮಂಸೋರೆ.
ಅಶೋಕ ಬ್ಲೇಡ್: ಕಿರುತೆರೆಯಲ್ಲಿ ಪಳಗಿದ ವ್ಯಕ್ತಿ ವಿನೋದ್ ವಿ ಧೊಂಡಾಳೆ ನಿರ್ದೇಶನ, ಸತೀಶ್ ನೀನಾಸಂ ನಾಯಕನಾಗಿ ನಟಿಸಿರುವ, ಟಿ ಕೆ ದಯಾನಂದ ಕತೆ ಬರೆದಿರುವ ಸಿನಿಮಾ ಇದು. ಹೆಸರು ಹಾಗೂ ಕಾಂಬಿನೇಶನ್ ಕಾರಣಕ್ಕೆ ವಿಭಿನ್ನತೆಯಿಂದ ಕೂಡಿರುವ ಕತೆಯ ಪ್ರಧಾನ ಸಿನಿಮಾ ಎನಿಸಿಕೊಂಡಿದೆ.
ಪೆಂಟಗಾನ್: ಕನ್ನಡದಲ್ಲಿ ಮೂಡಿ ಬರುತ್ತಿರುವ ಅತೀ ದೊಡ್ಡ ಅಂಥಾಲಜಿ ಸಿನಿಮಾ. ಐದು ಕತೆಗಳು, ಐದು ನಿರ್ದೇಶಕರಿಂದ ಮೂಡಿ ಬರುತ್ತಿರುವ ಈ ಚಿತ್ರದ ಟೀಸರ್ ಸಾಕಷ್ಟುಕುತೂಹಲ ಮೂಡಿಸಿದೆ. ದುನಿಯಾ ಕಿಶೋರ್, ಪೃಥ್ವಿ ಅಂಬರ್, ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿಸೇರಿದಂತೆ ದೊಡ್ಡ ತಾರಾಬಳಗವೇ ಈ ಅಂಥಾಲಜಿ ಚಿತ್ರವನ್ನು ಗುರು ದೇಶಪಾಂಡೆ ನಿರ್ಮಿಸಿದ್ದಾರೆ.
ಯುದ್ಧಕಾಂಡ: ಈ ಹಿಂದೆ ‘ಕಟಿಂಗ್ ಶಾಪ್’ ಹೆಸರಿನಲ್ಲಿ ಚಿತ್ರವನ್ನು ನಿರ್ದೇಶಿಸಿ, ಭರವಸೆ ಮೂಡಿಸಿದ್ದ ಪವನ್ ಭಟ್ ನಿರ್ದೇಶಿಸಿ, ಅಜಯ್ ರಾವ್ ನಾಯಕನಾಗಿ ನಟಿಸಿರುವ ಸಿನಿಮಾ ಇದು. ಈಗಷ್ಟೆಟೈಟಲ್ ಟೀಸರ್ ಬಿಡುಗಡೆ ಆಗಿದ್ದು, ಇದು ಅಜಯ್ ರಾವ್‌ಗೆ ಹೊಸ ರೀತಿಯ ಸಿನಿಮಾ ಅನಿಸಿದೆ ಎಂಬುದು ಕೇಳಿ ಬರುತ್ತಿರುವ ಮಾತುಗಳು.
ಡೇರ್ ಡೆವಿಲ್ ಮುಸ್ತಾಫಾ: ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ಸಿನಿಮಾ ಇದು. ಶಶಾಂಕ್ ಸೊಗಾಲ್ ನಿರ್ದೇಶನದ ಈ ಚಿತ್ರವು ಪೋಸ್ಟರ್, ಟೈಟಲ್ ಹಾಗೂ ಮೇಕಿಂಗ್ ಪ್ರೋಮೋಗಳ ಮೂಲಕ ಗಮನ ಸೆಳೆದಿದ್ದು, ಮೊದಲ ಬಾರಿಗೆ ಕತೆಗಾರನ ಓದುಗರರೇ ನಿರ್ಮಿಸುತ್ತಿರುವ ಸಿನಿಮಾ ಇದು. ಹೀಗಾಗಿ ಇದೊಂದು ರೀತಿಯಲ್ಲಿ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳ ಸಿನಿಮಾ ಕೂಡ ಹೌದು.
ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ: ಹೆಸರು ಮತ್ತು ಪ್ರಚಾರದಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದ ಹಾವಳಿ ಕೊಂಚ ಜೋರಾಗಿಯೇ ಇದೆ. ಈಗ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಅವರ ಪರಂವಃ ಸ್ಟುಡಿಯೋ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.
ಟಗರು ಪಲ್ಯ: ಡಾಲಿ ಅಡ್ಡದಿಂದ ಎದ್ದು ಬರುತ್ತಿರುವ ಚಿತ್ರವಿದು. ಅಂದರೆ ಡಾಲಿ ಧನಂಜಯ್ ಅವರ ನಿರ್ಮಾಣದ ಈ ಚಿತ್ರದಲ್ಲಿ ನಾಗಭೂಷಣ್ ಹಾಗೂ ಲವ್ಲಿಸ್ಟಾರ್ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಜೋಡಿಯಾಗಿ ನಟಿಸುತ್ತಿರುವ ಚಿತ್ರ. ಉಮೇಶ್ ಕೆ ಕೃಪ ಚಿತ್ರದ ನಿರ್ದೇಶಕರು. ಹೆಸರೇ ವಿಶೇಷವಾಗಿದೆ ಎಂಬುದು ಚಿತ್ರದ ಹೈಲೈಟ್.
ಕಾಲಾಪತ್ಥರ್: ಕೆಂಡಸಂಪಿಗೆ ಸಿನಿಮಾ ಮೂಲಕ ಹೀರೋ ಆದ ‘ಕಾಲೇಜು ಕುಮಾರ’ ವಿಕ್ಕಿ ವರುಣ್ ನಾಯಕನಾಗಿ ನಟಿಸಿರುವ ಮತ್ತೊಂದು ಭರವಸೆಯ ಸಿನಿಮಾ ‘ಕಾಲಾಪತ್ಥರ್’. ಧನ್ಯರಾಮ್ ಕುಮಾರ್ ಈ ಚಿತ್ರದ ನಾಯಕಿ.