- Home
- Entertainment
- Sandalwood
- ಕಣ್ಣೀರಿನಿಂದಲೇ ವೀಕ್ಷಕರನ್ನು ಕಾಡಿದ ‘ಸು ಫ್ರಮ್ ಸೋ’ ಚಿತ್ರದ ಭಾನು ಪಾತ್ರಧಾರಿ ಯಾರು?
ಕಣ್ಣೀರಿನಿಂದಲೇ ವೀಕ್ಷಕರನ್ನು ಕಾಡಿದ ‘ಸು ಫ್ರಮ್ ಸೋ’ ಚಿತ್ರದ ಭಾನು ಪಾತ್ರಧಾರಿ ಯಾರು?
ಸು ಫ್ರಮ್ ಸೋ ಸಿನಿಮಾದಲ್ಲಿ ತಮ್ಮ ಪ್ರಬುದ್ಧ ಅಭಿನಯದಿಂದ, ತಮ್ಮ ಕಣ್ಣೀರಿನಿಂದ ವೀಕ್ಷಕರನ್ನು ಕಾಡಿದ ಪಾತ್ರ ಭಾನು. ಈ ಪಾತ್ರಕ್ಕೆ ಜೀವ ತುಂಬಿದ ಆ ನಟಿ ಯಾರು? ಇಲ್ಲಿದೆ ಮಾಹಿತಿ.

ಸದ್ಯ ರಾಜ್ಯಾದ್ಯಂತ ಥಿಯೇಟರ್ ಗಳಲ್ಲಿ ಧೂಳೆಬ್ಬಿಸುತ್ತಿರುವ ಸಿನಿಮಾ ಸು ಫ್ರಮ್ ಸೋ (Su From So). ರಾಜ್ ಬಿ ಶೆಟ್ಟಿ ಮತ್ತು ತಂಡ ನಿರ್ಮಾಣ ಮಾಡಿರುವ, ಜೆಪಿ ತುಮಿನಾಡು ನಟಿಸಿ, ಕತೆ ಬರೆದು, ನಿರ್ದೇಶನ ಮಾಡಿರುವ ಚಿತ್ರ ತನ್ನ ಕಂಟೆಂಟ್ ಮೂಲಕವೇ ಗೆದ್ದಿದೆ. ಜೊತೆಗೆ ಪ್ರತಿಯೊಂದು ಪಾತ್ರಗಳು ಸಹ ನೆನಪಿನಲ್ಲಿ ಉಳಿಯುವಂತಿದೆ.
ಈ ಸಿನಿಮಾದಲ್ಲಿನ ಪ್ರತಿಯೊಂದು ಪಾತ್ರಗಳು ಸಹ ಚಿತ್ರಕ್ಕೆ ಜೀವ ತುಂಬಿವೆ. ಅದು ರವಿ ಅಣ್ಣ ಇರಬಹುದು, ಅಶೋಕ, ಭಾವ ಹೀಗೆ ಪ್ರತಿಯೊಬ್ಬರು ಅಚ್ಚುಕಟ್ಟಾಗಿ ನಟಿಸಿದ್ದಾರೆ. ಅದರಲ್ಲೂ ಭಾನು ಪಾತ್ರಧಾರಿ ಒಂದು ಕ್ಷಣ ಪ್ರೇಕ್ಷಕರ ಕಣ್ಣು ಒದ್ದೆಯಾಗುವಂತೆ ಮಾಡುತ್ತಾರೆ.
ಭಾನು ಪಾತ್ರಕ್ಕೆ ಜೀವ ತುಂಬಿ ತಮ್ಮ ಕಣ್ಣುಗಳಲ್ಲೇ ವೀಕ್ಷಕರನ್ನು ಕಾಡಿದ ಈ ನಟಿ ಯಾರು? ಅವರ ಹಿನ್ನೆಲೆ ಏನು? ಎಲ್ಲಾದಕ್ಕೂ ಉತ್ತರ ಇಲ್ಲಿದೆ. ಭಾನು ಪಾತ್ರದ ಮೂಲಕ ಜನರ ಮನಸ್ಸು ಗೆದ್ದ ನಟಿ ಸಂಧ್ಯಾ ಅರಕೆರೆ (Sandhya Arakere). ಇವರು ರಂಗಭೂಮಿ ಕಲಾವಿದರೂ ಹೌದು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅರಕೆರೆಯವರು ಸಂಧ್ಯಾ. ಓದು ಮಂಡ್ಯ, ಮೈಸೂರಿನಲ್ಲಾಯಿತು. ಬಳಿಕ ನೀನಾಸಂ ಸೇರಿ, ಅಲ್ಲಿ ನಟನೆಯನ್ನ ಕಲಿತರು. ಥಿಯೇಟರ್ ನಲ್ಲಿ ಎಂಎ ಮಾಡಲು ಬೆಂಗಳೂರಿಗೆ ಬಂದ ಸಂಧ್ಯಾಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕವು.
ಸಂಧ್ಯಾ ‘ಸುಳಿ’ ಸಿನಿಮಾ ಮೂಲಕ ಚಂದನವನಕ್ಕೆ (Sandalwood)ಎಂಟ್ರಿ ಕೊಟ್ಟರು. ಬಳಿಕ. ಪ್ರಕಾಶ್ ರೈ ಪ್ರೆಸೆಂಟ್ ಮಾಡಿದ್ದ ‘ಫೋಟೋ’, ಸಿನಿಮಾದಲ್ಲಿ ಅಭಿನಯಿಸಿ, ತಮ್ಮ ಅಭಿನಯದ ಮೂಲಕ ಅದ್ಭುತ ನಟಿ ಎನಿಸಿಕೊಂಡರು. ಬಳಿಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮ ಸೇನ ನಳ ಮಹರಾಜ’, ‘ಒಂದಲ್ಲ ಎರಡಲ್ಲ’, ‘ಬೈ ಟು ಲವ್’ ಮೊದಲಾದ ಚಿತ್ರಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಸು ಪ್ರಮ್ ಸೋ ಸಿನಿಮಾದಲ್ಲಿ ಪೂರ್ತಿಯಾಗಿ ಮಂಗಳೂರಿಗರೇ ಇದ್ದಾರೆ. ಅಂತದುರಲ್ಲಿ ಈ ಚಿತ್ರದಲ್ಲಿ ಸಂಧ್ಯಾ ಅರಕೆರೆಗೆ ಅವಕಾಶ ಕೊಟ್ಟಿದ್ದು, ನಿರ್ಮಾಣದಲ್ಲಿ ಕೈ ಜೋಡಿಸಿದ ರಾಜ್ ಬಿ ಶೆಟ್ಟಿ (Raj B Shetty). ಯಾಕಂದ್ರೆ ರಾಜ್ ಜೊತೆ ಸಂಧ್ಯಾ ಈ ಹಿಂದೆ ಎರಡು ಸಿನಿಮಾನಲ್ಲಿ ನಟಿಸಿದ್ದರು.
ರಾಜ್ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್ ನಟಿಸಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ಸಂಧ್ಯಾ ನಟಿಸಿದ್ದರು. ಈ ಸಿನಿಮಾದಲ್ಲಿ ಸಂಧ್ಯಾ ಅವರ ನಟನೆ ನೋಡಿದ್ದ, ರಾಜ್ ಬಿ ಶೆಟ್ಟಿ ನಂತರ ಟೋಬಿ (Toby) ಸಿನಿಮಾದಲ್ಲಿ ಅವಕಾಶ ಕೊಟ್ಟರು.
ಹಾಗಾಗಿ ಸು ಫ್ರಮ್ ಸೋ ಸಿನಿಮಾ ಕಥೆಯಲ್ಲಿ ಈ ಭಾನು ಪಾತ್ರಕ್ಕೆ ಸಂಧ್ಯಾ ಅರಕೆರೆ ಸರಿಯಾದ ನಟಿ ಎಂದು ಆಯ್ಕೆ ಮಾಡಿದ್ದು ಕೂಡ ರಾಜ್ ಬಿ ಶೆಟ್ಟಿ. ಅವರ ಅನಿಸಿಕೆ ಖಂಡಿತಾ ಸುಳ್ಳಾಗಲಿಲ್ಲ. ಸಿನಿಮಾದಲ್ಲಿ ಪ್ರತಿಯೊಂದು ನಗಿಸುವ ಪಾತ್ರಗಳ ಮಧ್ಯೆ, ಸಂಧ್ಯಾ ಅವರ ಮನೋಜ್ಞ ಅಭಿನಯ ವೀಕ್ಷಕರನ್ನು ಕಾಡಿದ್ದು ನಿಜಾ.