ಸು ಫ್ರಮ್ ಸೋ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಸಿನಿಮಾ ನೋಡೋಕೆ ಫ್ಯಾನ್ಸ್ ಮುಗಿ ಬಿದ್ದಿದ್ದಾರೆ. ನಾಲ್ಕೇ ದಿನದಲ್ಲಿ ಸಖತ್ ಸದ್ದು ಮಾಡಿರುವ ಸಿನಿಮಾ ಯಶಸ್ಸನ್ನು ಅನುಶ್ರೀ, ಸ್ನೇಹಿತರ ಜೊತೆ ಸಂಭ್ರಮಿಸಿದ್ದಾರೆ. 

ತುಂಬಾ ದಿನದ ನಂತ್ರ ಇಷ್ಟೊಂದು ನಕ್ಕಿದ್ದು.. ಸು ಫ್ರಮ್ ಸೋ ಸಿನಿಮಾ ನೋಡಿದ ಪ್ರತಿಯೊಬ್ಬರ ಬಾಯಲ್ಲಿ ಬರ್ತಿರುವ ಮಾತಿದು. ರಾಜ್ ಬಿ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಹೌಸ್ ಫುಲ್ ಆಗಿ ಓಡ್ತಿದೆ. ಗಂಟೆಗೆ ಐದರಿಂದ ಆರು ಸಾವಿರ ಟಿಕೆಟ್ ಬುಕ್ ಆಗ್ತಿದೆ. ನಾಲ್ಕೈದು ದಿನಗಳಲ್ಲಿಯೇ 8 -9 ಕೋಟಿ ಬಾಚಿಕೊಂಡಿರುವ ಸು ಫ್ರಮ್ ಸೋ ಸಿನಿಮಾ ಸಕ್ಸಸ್ಸನ್ನು ಕನ್ನಡದ ನಿರೂಪಕಿ ಅನುಶ್ರೀ ಸಂಭ್ರಮಿಸಿದ್ದಾರೆ. ನಟ ಹಾಗೂ ನಿರ್ಮಾಪಕ ರಾಜ್ ಬಿ ಶೆಟ್ಟಿ ಜೊತೆ ಸಕ್ಸಸ್ ಪಾರ್ಟಿ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಅನುಶ್ರೀ ನಟಿಸಿಲ್ಲ. ಆದ್ರೆ ಇದು ಅನುಶ್ರೀ ಸ್ನೇಹಿತರ ಸಿನಿಮಾ. ಹಾಗಾಗಿ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಅನುಶ್ರೀ ಇಲ್ಲ ಅಂದ್ರೆ ಹೇಗೆ? ಅನುಶ್ರೀ ಹಾಗೂ ರಾಜ್ ಬಿ ಶೆಟ್ಟಿ ಜೊತೆ ಇನ್ನೊಂದಿಷ್ಟು ಮಂದಿ, ಸಿಂಪಲ್ ಆಗಿ, ಮನೆಯಲ್ಲೇ ಕೇಕ್ ಕತ್ತರಿಸಿ ಪಾರ್ಟಿ ಮಾಡಿದ್ದಾರೆ. ಅನುಶ್ರೀ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದ್ರ ವಿಡಿಯೋ, ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸು ಫ್ರಮ್ ಸೋ ಸಿನಿಮಾ ಬಗ್ಗೆ ಉದ್ದದ ಶೀರ್ಷಿಕೆ ಹಾಕಿದ್ದಾರೆ.

ಸೆಲೆಬ್ರೇಟಿಂಗ್ ಸು ಫ್ರಮ್ ಸೊ ಎಂದು ಬರೆದಿರುವ ಅನುಶ್ರೀ, ಮೊದಲನೇದಾಗಿ ಒಂದೊಳ್ಳೆ ಕನ್ನಡದ ಚಿತ್ರವನ್ನು ಗೆಲ್ಲಿಸಿದಕ್ಕೆ ಕನ್ನಡಿಗರಿಗೆ ಧನ್ಯವಾದಗಳು ಎಂದಿದ್ದಾರೆ. ನೋ ಗಿಮಿಕ್ ಓನ್ಲೀ ಫ್ಯೂರ್ ಮ್ಯಾಜಿಕ್ ಅಂತ ಸಿನಿಮಾವನ್ನು ಹೊಗಳಿರುವ ಅವರು, ಜೀವನ ಎಷ್ಟು ಸಿಂಪಲ್, ಎಲ್ಲರಿಗೂ ಕಡೆಗೆ ಬೇಕಾಗಿರೋದು ಒಂದು ಸಣ್ಣ ನಗು ಅಷ್ಟೇ. ಅದನ್ನು ಪೂರ್ಣವಾಗಿ ಈ ಚಿತ್ರ ನೀಡುತ್ತೆ. ಮನಸ್ಸಾರೆ ನಕ್ಕು ಎಷ್ಟು ದಿನಗಳಾಯ್ತು ಅಂತ ಸಿನಿಮಾ ನೋಡಿದ ಬಹುತೇಕರು ಹೇಳಿದ್ದಾರೆ. ರಾತ್ರಿ 1.15 ಕ್ಕೆ ಮಾಲ್ ಒಳಗೆ ಕಂಡ ಜನರೆಲ್ಲ ಒಂದು ಕನ್ನಡ ಚಿತ್ರವನ್ನು ನೋಡೋಕೆ ಬಂದಿದ್ದರು ಅನ್ನೋದೇ ಹೆಮ್ಮೆ ಎಂದು ಅನುಶ್ರೀ ಬರೆದಿದ್ದಾರೆ. ಅಷ್ಟೇ ಅಲ್ಲ, ರಾಜ್ ಬಿ. ಶೆಟ್ಟಿ ನಿಮಗೆ ನೀವೇ ಸಾಟಿ, ಬೇಡ ಇನ್ಯಾವ ಪಾರ್ಟಿ ಎಂದಿರುವ ಅನುಶ್ರೀ, ನಿರ್ದೇಶಕ ಹಾಗೂ ನಟ ಜೆ ಪಿ ತುಮಿನಾಡ್ ಅವರನ್ನು ಮಾಸ್ಟರ್ ಮೈಂಡ್ ಎಂದು ವರ್ಣಿಸಿದ್ದಾರೆ. ಅಲ್ಲದೆ ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಸಂಧ್ಯಾ ಸೇರಿದಂತೆ ಎಲ್ಲ ಕಲಾವಿದರು ಮ್ಯಾಜಿಲ್ ಮಾಡಿದ್ದಾರೆ ಅಂತ ಅನುಶ್ರೀ ಬರೆದುಕೊಂಡಿದ್ದಾರೆ. ಕೊನೆಯಲ್ಲಿ, ಒಂದು ಸಿನೆಮಾದ ನಿಜವಾದ ಯಶಸ್ಸು,ಎಲ್ಲರ ಮುಖದಲ್ಲಿ ನಗು, ನಿರ್ಮಾಪಕರ ಜೇಬಲ್ಲಿ ನಗದು ಅಂತ ಬರೆದಿದ್ದಾರೆ.

ಅನುಶ್ರೀ ಒಟ್ಟೂ ಎರಡು ವಿಡಿಯೋ, ಮೂರು ಫೋಟೋ ಹಂಚಿಕೊಂಡಿದ್ದಾರೆ. ಒಂದು ವಿಡಿಯೋದಲ್ಲಿ ರಾಜ್ ಬಿ ಶೆಟ್ಟಿ ಕೇಕ್ ಕತ್ತರಿಸುತ್ತಿದ್ದಾರೆ. ಇನ್ನೊಂದರಲ್ಲಿ ರಾತ್ರಿ 1.15ಕ್ಕೆ ಮಾಲ್ ನಲ್ಲಿರುವ ಜನರ ವಿಡಿಯೋ ಇದೆ. ಉಳಿದ ಮೂರು ಫೋಟೋಗಳಲ್ಲಿ ಸ್ನೇಹಿತರು ಮತ್ತು ಕೇಕ್ ನೋಡ್ಬಹುದು.

ಅನುಶ್ರೀ ಪೋಸ್ಟ್ ಗೆ ಸಿಕ್ಕಾಪಟ್ಟೆ ಕಮೆಂಟ್ ಬಂದಿದೆ. ನಮ್ಮೂರಿನಲ್ಲಿ ಇನ್ನೂ ಸಿನಿಮಾ ಬಂದಿಲ್ಲ, ಹಾಕಿ ಎನ್ನುವ ಕೂಗು ಕೇಳಿ ಬಂದಿದೆ. ಸಿನಿಮಾ ನೋಡಿದೋರು, ಮನಸ್ಪೂರ್ವಕವಾಗಿ ಸಿನಿಮಾವನ್ನು ಹೊಗಳುತ್ತಿದ್ದಾರೆ. ಅನುಶ್ರೀ ವಿಡಿಯೋ ಜೊತೆ ಸಿನಿಮಾ ಹಾಡೊಂದನ್ನು ಹಾಕಿದ್ದಾರೆ. ಬಂದನೋ ಬಂದನೋ ಭಾವ ಬಂದನೋ ಅಂತ. ಸಿನಿಮಾದ ಸೂಪರ್ ಹಿಟ್ ಹಾಡು ಇದು. ಸಿನಿಮಾ ಮುಗಿದ ಮೇಲೆ ಎಲ್ಲರು ಗುನುಗುವ ಹಾಡು ಇದು ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಈ ಮಧ್ಯೆ ರಾಜ್ ಬಿ ಶೆಟ್ಟಿ ಜೊತೆ ಮತ್ತೆ ಅನುಶ್ರೀ ನೋಡಿದ ಜನರು, ಶೆಟ್ರ ಗೆಳತಿ ಅನುಶ್ರೀ ಅನ್ನಿಸ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

View post on Instagram