- Home
- Entertainment
- Sandalwood
- ಸೈಕಾಗೋದೆ ಸೈಕಾದೆ ಎನ್ನುತ್ತಲೇ ಸಿನಿ ರಸಿಕರ ಹೃದಯ ಕದ್ದುಬಿಟ್ಟ ಭೀಮ ಚಿತ್ರದ ಸುಂದರಿ ಅಶ್ವಿನಿ
ಸೈಕಾಗೋದೆ ಸೈಕಾದೆ ಎನ್ನುತ್ತಲೇ ಸಿನಿ ರಸಿಕರ ಹೃದಯ ಕದ್ದುಬಿಟ್ಟ ಭೀಮ ಚಿತ್ರದ ಸುಂದರಿ ಅಶ್ವಿನಿ
ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಗೆ ನಾಯಕಿಯಾದ ನಟಿ ಅಶ್ವಿನಿ ಅಂಬ್ರೀಶ್ ಬಗ್ಗೆ ಜನ ಭಾರಿ ಮೆಚ್ಚುಗೆ ವ್ಯಕ್ತಿಪಡಿಸಿದ್ದು, ಆಕೆಯ ಅಂದಕ್ಕೆ, ನಟನೆಗೆ ಮನಸೋತಿದ್ದಾರೆ.

ಬಹಳಷ್ಟು ನೀರಿಕ್ಷೆಯನ್ನು ಹುಟ್ಟಿಸಿ ಬಿಡುಗಡೆಯಾದ ದುನಿಯಾ ವಿಜಯ್ (Duniya Vijay) ನಟಿಸಿ, ನಿರ್ದೇಶಿಸಿದ ಸಿನಿಮಾ ನಿರೀಕ್ಷೆಗೆ ತಕ್ಕಂತೆ ಯಶಸ್ಸು ಗಳಿಸಿದ್ದು, ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ವಿಜಯ್ ಗೆ ಜೋಡಿಯಾದ ಚೆಲುವೆ ಬಗ್ಗೆಯೂ ಇಂಟರ್ನೆಟ್ಟಲ್ಲಿ ಸುದ್ದಿ ಹರಡುತ್ತಿದೆ.
ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಗೆ ನಾಯಕಿಯಾದ ನಟಿ ಅಶ್ವಿನಿ (Ashwini Ambrish). ಸಿನಿಮಾದಲ್ಲಿನ ಈಕೆಯ ನಟನೆ, ಕೃಷ್ಣ ಸುಂದರಿಯ ಅಂದ, ಚೆಂದಕ್ಕೆ ವೀಕ್ಷಕರು ಮನಸೋತಿದ್ದು, ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲೆಲ್ಲಾ ಅಶ್ವಿನಿ ಸಖತ್ ಸೌಂಡ್ ಮಾಡ್ತಿದ್ದಾರೆ.
ಅಶ್ವಿನಿ ಅಂಬ್ರೀಶ್, ಇವರಿಗೆ ನಟನೆ ಹೊಸದೇನಲ್ಲ, ಆದರೆ ಇದು ಈಕೆಯ ಮೊದಲ ಸಿನಿಮಾ. ರಂಗಭೂಮಿ ಕಲಾವಿದೆಯಾಗಿರುವ ಅಶ್ವಿನಿಯನ್ನು ಹುಡುಕಿದ್ದು ಸ್ವತಃ ವಿಜಯ್. ಆ ಪಾತ್ರಕ್ಕೆ ಈಕೆಯೇ ಸರಿ ಎಂದು ಅಂದುಕೊಂಡು ಆಯ್ಕೆ ಮಾಡಿದ್ದು, ಇದೀಗ ವೀಕ್ಷಕರು ಸಹ ಅಶ್ವಿನಿ ಪಾತ್ರವನ್ನ ಇಷ್ಟಪಟ್ಟಿದ್ದಾರೆ.
ಎರಡು ವರ್ಷಗಳ ಹಿಂದೆ ಭೀಮ (Bheema) ಸಿನಿಮಾ ಸೆಟ್ಟೇರಿತ್ತು, ಆದ್ರೆ ಸಿನಿಮಾ ನಾಯಕಿ ಬಗ್ಗೆ ವಿಜಯ್ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಯಾಕಂದ್ರೆ ಅವರಿಗೆ ಸರಿಯಾದ ನಾಯಕಿಯೇ ಸಿಕ್ಕಿರಲಿಲ್ಲ. ನಾಯಕಿಯ ಹುಡುಕಾಟದಲ್ಲಿದ್ದ ವಿಜಯ್ ಕಣ್ಣಿಗೆ ಅಶ್ವಿನಿ ಬಿದ್ದದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ.
ವಿಜಯ್ ವೇದಿಕೆಯಿಂದ ಇಳಿದು ಬರುತ್ತಿದ್ದಾಗ, ಅಶ್ವಿನಿ ಎದುರಲ್ಲಿ ಕುಳಿತಿದ್ರಂತೆ, ಅವರನ್ನ ನೋಡಿ, ನಮ್ಮ ಸಿನಿಮಾಗೆ ತಕ್ಕಂತಹ ಲಕ್ಷಣವುಳ್ಳ ನಾಯಕಿ ಇವಳೇ ಅಂತ ಡಿಸೈಡ್ ಮಾಡಿದ್ರಂತೆ. ಅಶ್ವಿನಿಯನ್ನು ಕಾಂಟಾಕ್ಟ್ ಮಾಡಿ, ಸಿನಿಮಾ ಬಗ್ಗೆ ಹೇಳಿದ್ರೂ ಆಕೆಗೆ ನೀನೆ ನಾಯಕಿ ಅಂತ ಹೇಳಿಯೇ ಇಲ್ವಂತೆ ವಿಜಯ್. ನಾಯಕಿಯ ಫ್ರೆಂಡ್ ಪಾತ್ರ ಎಂದಿದ್ದರಂತೆ. ಕೊನೆಗೆ ಸಿನಿಮಾ ಶೂಟಿಂಗ್ ಗೆ (cinema shooting) ಇನ್ನೇನೂ ತಿಂಗಳೂ ಇರುವಷ್ಟರಲ್ಲಿ ನಾಯಕಿ ಪಾತ್ರದ ಬಗ್ಗೆ ಹೇಳಿದಾಗ ಅಶ್ವಿನಿ ಶಾಖ್ ಆಗಿದ್ರಂತೆ.
ತನ್ನ ಕಪ್ಪಾದ ಮೈ ಬಣ್ಣದಿಂದಾಗಿ ಈ ಹಿಂದೆ ಸಿನಿಮಾದಲ್ಲಿ ಆಡಿಶನ್ ಗೆ ಹೋಗಿ ರಿಜೆಕ್ಟ್ ಆಗಿದ್ದ ಅಶ್ವಿನಿಗೆ, ನಾಯಕಿಯ ಪಾತ್ರ ಸಿಕ್ಕಾಗ ಅಚ್ಚರಿಯಾಗಿತ್ತಂತೆ. ಇದೀಗ ತಮ್ಮ ಪಾತ್ರದ ಮೂಲಕವೇ ಮೋಡಿ ಮಾಡಿದ್ದು, ವೀಕ್ಷಕರು ಅಶ್ವಿನಿಯ ಅಂದ, ನಟನೆಗೆ ಮನಸೋತಿದ್ದಾರೆ.
ಅಶ್ವಿನಿ ಎಂಬಿಎ ಪದವೀಧರೆ, ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಂಗಭೂಮಿ ತತ್ಕಾಲ್ ಗುಂಪು ಮತ್ತು ಅಭಿನಯ ತರಂಗದ ಅಡಿಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತ ಬಂದಿರುವ ಅಶ್ವಿನಿಗೆ ಭೀಮ ಚಿತ್ರದಲ್ಲಿ ನಟಿಸೋದು ಕಷ್ಟವೇನು ಆಗಿಲ್ಲ. ಅಭಿನಯ ಹಾಗೂ ರಂಗಭೂಮಿಯಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳಬೇಕು ಅನ್ನೋ ಗುರಿ ಹೊಂದಿರೋ ಭೀಮನ ಬೆಡಗಿಗೆ ಮತ್ತಷ್ಟು ಅವಕಾಶಗಳು ಸಿಗಲಿ.
ದುನಿಯಾ ವಿಜಯ್ ಕಥೆ ಬರೆದು ನಿರ್ದೇಶಿಸಿರುವ ಭೀಮ ಸಿನಿಮಾ, ವಿಜಯ್ ನಟನೆಯ 28ನೇ ಸಿನಿಮಾ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸದ್ಯ ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗಲ್ಲಾಪೆಟ್ಟಿಗೆ ತುಂಬುತ್ತಿದೆ. ಹಾಡುಗಳು ಸಹ ಸಖತ್ ಸೌಂಡ್ ಮಾಡ್ತಿವೆ.