ಡೀಗ್ಲಾಮರ್ ಪಾತ್ರಗಳೇ ನನಗಿಷ್ಟ: ಅಮೂಲ್ಯ ಗೌಡ
ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಕಿರುತೆರೆ ನಟಿ ಅಮೂಲ್ಯ ಗೌಡ. ಪ್ರದೀಪ್ ವರ್ಮಾ ನಿರ್ದೇಶನ ಮಾಡುತ್ತಿರುವ ಕುರುಡು ಕಾಂಚಾಣ ಸಿನಿಮಾ...

ಕಿರುತೆರೆ ನಟಿ ಅಮೂಲ್ಯ ಗೌಡ ‘ಕುರುಡು ಕಾಂಚಾಣ’ ಸಿನಿಮಾದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಸಿನಿಮಾ ಪ್ರೀತಿ, ಆಯ್ಕೆ, ಆಸಕ್ತಿ ಬಗ್ಗೆ ಅಮೂಲ್ಯ ಗೌಡ ಮಾತು. ಪೀಕೆ ಸಂದರ್ಶನ ಮಾಡಿದ್ದಾರೆ.
ಮೊದಲ ಸಿನಿಮಾ ಹೇಗಿದೆ?
ನನ್ನರಸಿ ರಾಧೆ ಸೀರಿಯಲ್ ಮುಗಿದಿತ್ತು. ಆ ಹೊತ್ತಿಗೆ ಈ ಸಿನಿಮಾ ಆಫರ್ ಬಂತು. ಇದು ದುಡ್ಡಿಗಾಗಿ ಹಪಹಪಿಸೋರ ಕಥೆ. ಮನಿಮೈಂಡೆಡ್, ಡೇರಿಂಗ್, ಬಬ್ಲಿ ಕ್ರಿಶ್ಚಿಯನ್ ಹುಡುಗಿ ಪಾತ್ರ ನನ್ನದು.
ಹಣದ ಬಗ್ಗೆ ಅತ್ಯಾಸೆ ಇಲ್ಲ ಅನ್ನೋದು ಬಿಟ್ಟರೆ ಹೆಚ್ಚು ಕಡಿಮೆ ಪಾತ್ರದ ಮನಸ್ಥಿತಿ ನನ್ನ ಮನಸ್ಥಿತಿ ಒಂದೇ ಥರ ಇದೆ. ಶೂಟಿಂಗ್ ಮುಗಿದಿದೆ. ಕೇರಳದಲ್ಲಿ ಹಾಡಿನ ಶೂಟಿಂಗ್ ನಡೀಬೇಕಿದೆ.
ಸೀರಿಯಲ್‌ಗೆ (Kannada serial) ಇನ್ನು ಗುಡ್ ಬೈಯಾ?
ಲೀಡ್ ಪಾತ್ರ, ಮನಸ್ಸಿಗೆ ಹತ್ತಿರವಾಗೋ ಪಾತ್ರ ಸಿಕ್ಕರೆ ಮಾಡ್ತೀನಿ.
ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣ್ಬೇಕಾ, ಪರ್ಫಾಮೆನ್ಸ್‌ಗೆ ಚಾನ್ಸ್ ಇರಬೇಕಾ?
ನನಗೆ ಡಿ ಗ್ಲಾಮ್ ಪಾತ್ರಗಳಲ್ಲಿ ನಟಿಸೋಕೆ ಇಷ್ಟ. ಕಲಾತ್ಮಕ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೂ ಖುಷಿಯಿಂದ ನಟಿಸುತ್ತೇನೆ.
ಸೀರಿಯಲ್ ನಟನೆ ಕೆಲವರಿಗೆ ಪಾಸಿಟಿವ್, ಕೆಲವರಿಗೆ ನೆಗೆಟಿವ್. ನಿಮ್ಮ ಪಾಲಿಗೆ?
ನನಗೆ ನೆಗೆಟಿವ್ ಆಗಿಲ್ಲ. ಯಾಕೆಂದರೆ ನಾನು ನಾಯಕಿ ಪಾತ್ರಗಳಲ್ಲಿ ನಟಿಸಿಲ್ಲ. ಮಹತ್ವದ ಪಾತ್ರ ಮಾಡಿದ್ದೇನಷ್ಟೇ. ಬಹುಶಃ ನಾಯಕಿ ಆಗಿದ್ದವರಿಗೆ ಸಿನಿಮಾದಲ್ಲಿ ಸಕ್ಸಸ್ ಆಗೋದು ಚಾಲೆಂಜಿಂಗ್ ಏನೋ.