Madhagaja 3Day Collection: ಶ್ರೀಮುರಳಿ 'ಮದಗಜ' 20.23 ಕೋಟಿ ಕಲೆಕ್ಷನ್ ದಾಖಲೆ!
ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರ ಯಶಸ್ವಿಯಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಗಳಿಕೆಯಲ್ಲೂ ದಾಖಲೆ ಮಾಡುತ್ತಿದೆ.

ಮೂರು ದಿನಕ್ಕೆ ಬರೋಬ್ಬರಿ 20.23 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್‌ಸ್ ಅಫೀಸ್‌ನಲ್ಲೂ ರೇಕಾರ್ಡ್ ಮಾಡಿದೆ. ಎಸ್ ಮಹೇಶ್ ಕುಮಾರ್ ನಿರ್ದೇಶಿಸಿ, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿರುವ ಈ ಚಿತ್ರ ಸುಮಾರು 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಿದೆ.
ಬಿಡುಗಡೆ ಆಗಿರುವ ಎಲ್ಲ ಕಡೆ ನಿರೀಕ್ಷೆಯಂತೆ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ರಾಜ್ಯದ ಏಕಪರದೆಯ ಚಿತ್ರಮಂದಿರಗಳಲ್ಲಿ ಶೇ.90ರಷ್ಟು ಪ್ರೇಕ್ಷಕರ ಹಾಜರಾತಿ ಇದ್ದರೆ, ಮಲ್ಟಿಪ್ಲೆಕ್‌ಸ್ ಗಳಲ್ಲಿ ಶೇ.65ರಷ್ಟು ಪ್ರೇಕ್ಷಕರು ತುಂಬಿದ್ದಾರೆ.
ಮೂರು ದಿನದಲ್ಲಿ 7,400 ಶೋಗಳನ್ನು ಕಂಡಿದ್ದು, ಒಟ್ಟು ಮೂರು ದಿನದಲ್ಲಿ 20.23 ಕೋಟಿ ಗಳಿಸುವ ಮೂಲಕ ಶ್ರೀಮುರಳಿ ‘ಮದಗಜ’ ಕಲೆಕ್ಷನ್‌ನಲ್ಲಿ ದಾಖಲೆ ಮಾಡಿದೆ. ಮೊದಲ ದಿನವೇ 7.82 ಕೋಟಿ ಗಳಿಸಿದ್ದು, ಎರಡನೇ ದಿನಕ್ಕೆ 5.64 ಕೋಟಿ ಕಲೆಕ್ಷನ್ ಮಾಡಿದೆ.
ರಾಜ್ಯಾದ್ಯಾಂತ ಎರಡು ದಿನದಲ್ಲಿ 13.46 ಕೋಟಿ ಗಳಿಕೆ ಮಾಡಿದ್ದು, ಮೂರನೇ ದಿನದ ಗಳಿಕೆ 6.77 ಕೋಟಿ ಆಗಿದೆ. ಒಟ್ಟು ಮೂರು ದಿನಕ್ಕೆ 20.23 ಕೋಟಿ ಗಳಿಸಿದೆ ಎಂಬುದು ಚಿತ್ರತಂಡ ನೀಡುವ ಮಾಹಿತಿ.
ಪ್ರದೇಶವಾರು ಕಲೆಕ್ಷನ್ ನೋಡಿದರೆ ಬೆಂಗಳೂರು, ಕೋಲಾರ, ತುಮಕೂರು (ಬಿಕೆಟಿ) 9 ಕೋಟಿ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ (ಎಂಎಂಸಿಎಚ್) 4 ಕೋಟಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಲ್ಲಿ 2.2 ಕೋಟಿ, ದಾವಣಗೆರೆ 1 ಕೋಟಿ, ಹೈದರಾಬಾದ್ ಕರ್ನಾಟಕದಲ್ಲಿ 4 ಕೋಟಿ ಗಳಿಸಿದೆ.
‘ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎನ್ನುವ ನಂಬಿಕೆ ಇತ್ತು. ಆದರೆ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಾರೆಯೇ ಎನ್ನುವ ಭಯ ಇತ್ತು. ಯಾಕೆಂದರೆ ಸದ್ಯದ ಪರಿಸ್ಥಿತಿ. ಹೀಗಾಗಿ ಆರಂಭದಲ್ಲಿ ಕೊಂಚ ಆತಂಕ ಇದ್ದಿದ್ದು ನಿಜ. ಈಗ ಆ ಭಯ ಇಲ್ಲ. ನಮ್ಮ ನಿರೀಕ್ಷೆಯಂತೆ ಜನ ಸಿನಿಮಾ ನೋಡುತ್ತಿದ್ದಾರೆ. ಕನ್ನಡಿಗರು ಮಾತ್ರವಲ್ಲ, ಬೇರೆ ಭಾಷೆಯವರು ಸಿನಿಮಾ ನೋಡುತ್ತಿದ್ದಾರೆ'.
'ಮಂಡ್ಯ, ಮೈಸೂರು, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಕೋಲಾರ ಹೀಗೆ ಮಾಸ್ ಪ್ರೇಕ್ಷಕರು ಇರುವ ಪ್ರದೇಶಗಳಲ್ಲಿ ಸಿನಿಮಾ ತುಂಬಾ ಚೆನ್ನಾಗಿ ಗಳಿಕೆ ಮಾಡುತ್ತಿದೆ. ಮೂರು ದಿನಕ್ಕೆ ನಮ್ಮ ಗುರಿ ಇದಿದ್ದು 20 ಕೋಟಿ. ಈಗ 20.23 ಕೋಟಿ ಕಲೆಕ್ಷನ್ ಆಗಿದೆ. ನಮ್ಮ ಸಿನಿಮಾ ಗೆದ್ದಿದೆ. ಒಳ್ಳೆಯ ಚಿತ್ರವನ್ನು ಪ್ರೇಕ್ಷಕರು ಕೈ ಬಿಡಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಆಗಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಅದ್ದೂರಿಯಾಗಿ ಸಿನಿಮಾ ಬಿಡುಗಡೆ ಮಾಡಿದ್ದಕ್ಕೂ ಸಾರ್ಥಕವಾಯಿತು. ಆ್ಯಕ್ಷನ್ ಹಾಗೂ ತಾಯಿ ಸೆಂಟಿಮೆಂಟ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಎಸ್ ಮಹೇಶ್ ಕುಮಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.