ಕನ್ನಡದ ಸ್ಟಾರ್ ನಟನಾಗಿ ಮಿಂಚಿದ ಬಹುಮುಖ ಪ್ರತಿಭೆಯ ದಕ್ಷ ಐಎಎಸ್ ಅಧಿಕಾರಿ!
ಅವರೊಬ್ಬ ಕರ್ನಾಟಕದ ಪ್ರತಿಭಾವಂತ ವ್ಯಕ್ತಿ, ರಾಜಕೀಯ, ಸಿನೆಮಾ ಮತ್ತು ಜನ ಸೇವೆಯಲ್ಲಿ ಅತ್ಯುತ್ತಮ ಕೆಲಸ ಮಾಡಿರುವ ಈ ವ್ಯಕ್ತಿ ಬಡತನದಿಂದ ಮೇಲೆ ಬಂದು ಸಾಧನೆ ಮಾಡಿ. ಇತರರಿಗೆ ಸ್ಪೂರ್ತಿಯಾದ ವ್ಯಕ್ತಿ. ತನ್ನ ಸಿನಿ ಜೀವನದಲ್ಲಿ ವಿರಳ ಚಿತ್ರಗಳಲ್ಲಿ ನಟಿಸಿದ್ದರು ಇಂದಿಗೂ ಜನರ ಮನಸ್ಸಿನಲ್ಲಿದ್ದಾರೆ.
ಬಹುಮುಖ ಪ್ರತಿಭೆಯ ವ್ಯಕ್ತಿ, ಕೆ ಶಿವರಾಮ್ ಅವರು ಕನ್ನಡ ಭಾಷೆಯಲ್ಲಿ ಪ್ರತಿಷ್ಠಿತ ಭಾರತೀಯ ಆಡಳಿತ ಸೇವೆಗಳ (IAS) ಪರೀಕ್ಷೆಯನ್ನು ತೇರ್ಗಡೆಗೊಳಿಸಿದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಪ್ರಿಲ್ 6, 1953 ರಂದು ಉರಗ ಹಳ್ಳಿಯಲ್ಲಿ ಜನಿಸಿದ ಮಾಜಿ ಐಎಎಸ್ ಅಧಿಕಾರಿ ಮತ್ತು ಕನ್ನಡದ ನಟ ಮಾತ್ರವಲ್ಲ ಕಷ್ಟದಿಂದ ಮೇಲೆ ಬಂದವರು.
ಇವರ ತಂದೆ ಪ್ರತಿಭಾವಂತ ನಾಟಕ ಮಾಸ್ಟರ್. ಎಸ್. ಕೆಂಪಯ್ಯ ಮತ್ತು ತಾಯಿ ಚಿಕ್ಕಬೋರಮ್ಮ. ಕರ್ನಾಟಕದ ರಾಮನಗರ ಜಿಲ್ಲೆಯ ಉರಗ ಹಳ್ಳಿಯಲ್ಲಿ ಶಿಕ್ಷಣ ಪಡೆದ ಶಿವರಾಮ್ ಅವರು ಸರ್ಕಾರಿ ಉದ್ಯೋಗ ಪಡೆಯಲು ಟೈಪಿಂಗ್ ಮತ್ತು ಶಾರ್ಟ್‌ಹ್ಯಾಂಡ್ ಕಲಿತರು. ಅವರು 1973 ರಲ್ಲಿ ಗುಪ್ತಚರ ಘಟಕದಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ಸೇರಿದರು.
1985ರಲ್ಲಿ ಕೆ.ಎ.ಎಸ್. ಪರೀಕ್ಷೆ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಯ್ಕೆಯಾದರು. 1986 ರಲ್ಲಿ, ಅವರು ಕರ್ನಾಟಕ ಆಡಳಿತ ಸೇವಾ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದಲ್ಲಿ 1 ನೇ ರ್ಯಾಂಕ್ ಗಳಿಸಿದರು ಮತ್ತು ಸಹಾಯಕ ಪೊಲೀಸ್ ಕಮಿಷನರ್ ಆಗಿ ಆಯ್ಕೆಯಾದರು. ಆದರೆ, ಐಎಎಸ್ ಅಧಿಕಾರಿಯಾಗಬೇಕೆಂಬುದು ಅವರ ಕನಸಾಗಿತ್ತು. ಅದಕ್ಕಾಗಿ ಶತ ಪ್ರಯತ್ನಗಳನ್ನು ಮಾಡಿ 1986ರಲ್ಲಿ ತಮ್ಮ ಐಎಎಸ್ ಅಧಿಕಾರಿಯಾಗುವ ಕನಸು ಈಡೇರಿಸಿಕೊಂಡರು.
ಸುದೀರ್ಘ ಐಎಎಸ್ ವೃತ್ತಿಜೀವನದಲ್ಲಿ ಬಿಜಾಪುರ, ಬೆಂಗಳೂರು, ಮೈಸೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಸಮೂಹ ಶಿಕ್ಷಣ ಆಯುಕ್ತರಾಗಿ, ಆಹಾರ ಆಯುಕ್ತರಾಗಿ ಮತ್ತು MSIL ನ MD ಆಗಿ ಸೇವೆ ಸಲ್ಲಿಸಿದ್ದಾರೆ.
1993 ರಲ್ಲಿ ಕನ್ನಡ ಚಲನಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿ, ಬಾ ನಲ್ಲೆ ಮಧುಚಂದ್ರಕೆ ಎಂದ ಚಿತ್ರದ ಮೂಲಕ ತಮ್ಮ ಚೊಚ್ಚಲ ಸಿನಿ ಪಯಣ ಆರಂಭಿಸಿದರು. ವಸಂತ ಕಾವ್ಯ, ಪ್ರತಿಭಟನೆ, ಕಾಳನಾಯಕ, ಯಾರಿಗೆ ಬೇಡ ದುಡ್ಡು, ಪ್ರೀತಿಗಾಗಿ ಆಟ, ನಾಗ, ಮೂಡಲ ಸೀಮೆಯಲಿ, ಸುಭಾಷ್, ಜೈ, ಟೈಗರ್ ಸೇರಿದಂತೆ ಚಿತ್ರಗಳಲ್ಲಿ ನಟರಾಗಿದ್ದಾರೆ. ತಮ್ಮ ಸಿನಿ ಜೀವನದಲ್ಲಿ 2017ರವರೆಗೆ 10 ಸಿನೆಮಾದಲ್ಲಿ ನಟಿಸಿದ್ದಾರೆ.
IAS ಅಧಿಕಾರಿಯಾಗಿ ನಿವೃತ್ತರಾದ ನಂತರ, 2013 ರಲ್ಲಿ ಶಿವರಾಂ ರಾಜಕೀಯಕ್ಕೆ ಕಾಲಿಟ್ಟರು. ಮೊದಲಿಗೆ ಕಾಂಗ್ರೆಸ್‌ನಲ್ಲಿದ್ದರು. ಬಳಿಕ ಜೆಡಿಎಸ್ ಸೇರ್ಪಡೆಯಾದರು. 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಬಿಜಾಪುರ ಕ್ಷೇತ್ರದಲ್ಲಿ ರಮೇಶ್ ಜಿಗಜಿಣಗಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಅದೇ ವರ್ಷ ಶಿವರಾಮ್ ಮತ್ತೆ ಕಾಂಗ್ರೆಸ್ ಸೇರಿದರು ಆದರೆ ಅಂತಿಮವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ಕರ್ನಾಟಕದಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.