ಟಾಕ್ಸಿಕ್ ಸಿನಿಮಾ ಸೆಟ್‌ನಲ್ಲಿ ಯಶ್ ಭೇಟಿಯಾಗಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ ಡಾಲಿ
ಡಾಲಿ ಧನಂಜಯ ಮದುವೆಗೆ ಇನ್ನು ಕೆಲ ದಿನಗಳು ಮಾತ್ರ. ಸಿನಿಮಾ ನಟ ನಟಿಯರು, ಹಲವು ಗಣ್ಯರನ್ನು ಆಮಂತ್ರಿಸುತ್ತಿರುವ ಡಾಲಿ ಧನಂಜಯ್ ಇದೀಗ ರಾಕಿಂಗ್ ಸ್ಟಾರ್ ಯಶ್ ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ನಟ ಡಾಲಿ ಧನಂಜಯ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಫೆಬ್ರವರಿ 16ರಂದು ಡಾಲಿ ಬಹುಕಾಲದ ಗೆಳತಿ ಧನ್ಯತಾರನ್ನು ವರಿಸಲಿದ್ದಾರೆ. ಮೈಸೂರಿನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಮದುವೆಗೆ ಇನ್ನು ಕೆಲ ದಿನ ಮಾತ್ರ ಬಾಕಿ. ಇತ್ತ ಡಾಲಿ ಧನಂಜಯ ತಮ್ಮ ಆಪ್ತರು, ಸಿನಿಮಾ ನಟ ನಟಿಯರು, ಗಣ್ಯರನ್ನು ಮದುವೆ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದಾರೆ.
ಇದೀಗ ಡಾಲಿ ಧನಂಜಯ ರಾಕಿಂಗ್ ಸ್ಟಾರ್ ಯಶ್ ಭೇಟಿಯಾಗಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ವಿಶೇಷ ಅಂದರೆ ಡಾಲಿ ಧನಂಜಯ್ ಆಮಂತ್ರಣ ಪತ್ರಿಕೆ ನೀಡಲು ಯಶ್ ಭೇಟಿಯಾಗಿದ್ದು ಮನೆಯಲ್ಲಿ ಅಲ್ಲ. ಬದಲಾಗಿ ಟಾಕ್ಸಿಕ್ ಸಿನಿಮಾ ಸೆಟ್‌ನಲ್ಲಿ. ಬೆಂಗಳೂರಿನಲ್ಲಿ ಯಶ್ ಟಾಕ್ಸಿಕ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.
ಸಿನಿಮಾದ ಅಂತಿಮ ಹಂತದ ಶೂಟಿಂಗ್‌ಗಳು ನಡೆಯುತ್ತಿದೆ. ಹೀಗಾಗಿ ಯಶ್ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಸಿನಿಮಾ ಸೆಟ್‌ಗೆ ತೆರಳಿದ ಡಾಲಿ ಧನಂಜಯ್ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಯಶ್ ಹಾಗೂ ಡಾಲಿ ಧನಂಜಯ ಭೇಟಿ ಫೋಟೋಗಳು ಇದೀಗ ಬಾರಿ ಸದ್ದು ಮಾಡುತ್ತಿದೆ.
ಡಾಲಿ ಧನಂಜಯ್ ಮದುವೆಯಾಗುತ್ತಿರುವ ಹುಡುಗಿ ಧನ್ಯತಾ, ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ.ಚಿತ್ರದುರ್ಗ ಮೂಲದ ಧನ್ಯತಾ ಹಾಗೂ ಜಾಲಿ ಧನಂಜಯ್ ಹಲವು ವರ್ಷಗಳಿಂದ ಪರಿಚಯಸ್ಥರಾಗಿದ್ದಾರೆ. ಧನಂಜಯ್ ಹಾಗೂ ಧನ್ಯತಾ ಇಬ್ಬರು ಓದಿದ್ದು ಮೈಸೂರಿನಲ್ಲಿ ಅನ್ನೋದು ಮತ್ತೊಂದು ವಿಶೇಷ.
ಮೈಸೂರಿನ ಅಂಬಾ ವಿಲಾಸ ಅರಮನೆ ಮುಂಭಾಗದಲ್ಲಿರುವ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ಹಾಗೂ ಧನ್ಯತಾ ಮದುವೆ ನಡೆಯಲಿದೆ. ಫೆಬ್ರವರಿ 15 ರಂದು ಆರತಕ್ಷತೆ ನಡೆಯಲಿದೆ. ಶನಿವಾರ ಸಂಜೆ 6 ಗಂಟೆಯಿಂದ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇನ್ನು ಭಾನುವಾರ ಬೆಳಗ್ಗೆ ಅಂದರೆ ಫೆ.16ರಂದು ಬೆಳಗ್ಗೆ 8.20 ರಿಂದ 10 ಗಂಟೆ ಒದಗುವ ಮೀನ ಲಗ್ನದಲ್ಲಿ ಡಾಲಿ ಧನಂಜಯ್, ಧನ್ಯತಾರನ್ನು ವರಿಸಲಿದ್ದಾರೆ.
ಡಾಲಿ ಧನಂಜಯ್ ಮದುವೆ ಆಮಂತ್ರಣ ಪತ್ರಿಕೆ ಕೂಡ ಭಾರಿ ಗಮನಸೆಳೆದಿತ್ತು. ಅತ್ಯಂತ ಸುಂದರ ಹಾಗೂ ಸರಳ ಮದುವೆ ಆಮಂತ್ರಣ ಪತ್ರಿಕೆ ಅದರಲ್ಲಿ ಬರೆದಿರುವ ಸಾಲುಗಳು ಎಲ್ಲರ ಗಮನಸೆಳೆದಿತ್ತು. ಪತ್ರದ ರೂಪದಲ್ಲಿ ಮದುವೆ ಕರೆಯೋಲೆ ವಿಶೇಷವಾಗಿದೆ. ಇದೀಗ ಮದುವೆ ಕುತೂಹಲ ಎಲ್ಲರಲ್ಲಿದೆ.