Upadhyaksha Movie: ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಚಿತ್ರಕ್ಕೆ ಅದ್ದೂರಿ ಮುಹೂರ್ತ
ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ಹಾಸ್ಯ ನಟರಾಗಿ ಗುರುತಿಸಿಕೊಂಡಿರುವ ಚಿಕ್ಕಣ್ಣ 'ಉಪಾಧ್ಯಕ್ಷ' ಸಿನಿಮಾದಿಂದ ಹೀರೋ ಆಗಲಿದ್ದಾರೆ. ಸದ್ಯ ಈ ಸಿನಿಮಾಗೆ ಸರಳವಾಗಿ ಮುಹೂರ್ತ ನೆರವೇರಿದೆ.
ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗಲಿದ್ದಾರೆ ಎಂಬುದು ಬಹು ಪುರಾತನ ಸದ್ದಿ. ಯಾಕೆಂದರೆ ಇವರ ಹೆಸರಿನಲ್ಲಿ ಒಂದೆರಡು ಚಿತ್ರಗಳು ಘೋಷಣೆ ಆದವು. ಕೆಲವರು ಇವರನ್ನು ಹೀರೋ ಮಾಡುವುದಾಗಿ ಹೇಳಿಕೊಂಡು ಕತೆ ಮಾಡಿಕೊಂಡಿದ್ದರು. ಈಗ ಅದು ಅಧಿಕೃತವಾಗಿ ಚಾಲ್ತಿಗೆ ಬಂದಿದೆ.
ಈಗ ಚಿಕ್ಕಣ್ಣ ಅವರನ್ನು ಹೀರೋ ಮಾಡುತ್ತಿರುವುದು ನಿರ್ದೇಶಕ ಅನಿಲ್. ಇವರು ಹೀರೋ ಆಗಿ ನಟಿಸುತ್ತಿರುವ ಮೊದಲ ಚಿತ್ರದ ಹೆಸರು ‘ಉಪಾಧ್ಯಕ್ಷ’. ಜೂ.15ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ನಡೆಯಿತು.
ನಿರ್ಮಾಪಕ ಡಿ ಉಮಾಪತಿ ಅವರ ಪತ್ನಿ ಸ್ಮಿತಾ ಉಮಾಪತಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಮಲೈಕ ವಸುಪಾಲ್ ನಾಯಕಿ. ಅರ್ಜುನ್ ಜನ್ಯ ಸಂಗೀತ, ಶೇಖರ್ ಚಂದ್ರು ಛಾಯಾಗ್ರಹಣ ಮಾಡಲಿದ್ದಾರೆ.
‘ಅಧ್ಯಕ್ಷ ಚಿತ್ರದಲ್ಲಿ ಶರಣ್ ಅವರಿಗೆ ಮದುವೆ ಆಗುತ್ತದೆ. ಆ ನಂತರ ಉಪಾಧ್ಯಕ್ಷನ ಕತೆ ಏನು ಎಂಬುದೇ ಈ ಉಪಾಧ್ಯಕ್ಷ ಚಿತ್ರದ ಸ್ಟೋರಿ. ಇದೂ ಕೂಡ ಹಾಸ್ಯದ ನೆರಳಿನಲ್ಲಿ ಸಾಗುತ್ತದೆ. ಮನರಂಜನೆಯೇ ಚಿತ್ರದ ಪ್ರಧಾನ ಉದ್ದೇಶ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ನಿರ್ದೇಶಕ ಅನಿಲ್.
‘ಚಿಕ್ಕಣ್ಣ ಹೀರೋ ಎಂದ ಕೂಡಲೇ ರೆಗ್ಯೂಲರ್ ಹೀರೋ ಎಂದುಕೊಳ್ಳಬೇಡಿ. ಕತೆಗೆ ಸೂಕ್ತ ಎನಿಸುವ ರೀತಿಯಲ್ಲಿ ಅವರನ್ನು ಹೀರೋ ಆಗಿ ತೋರಿಸುತ್ತಿದ್ದೇವೆ. ತುಂಬಾ ಚೆನ್ನಾಗಿರುವ ಕತೆ ಇಲ್ಲಿದೆ’ ಎಂದರು ಉಮಾಪತಿ.
ಚಿಕ್ಕಣ್ಣ ಮಾತನಾಡಿ, ‘ಇದು ಅಧ್ಯಕ್ಷ ಚಿತ್ರದ ಮುಂದುವರಿದ ಭಾಗ. ಕೌಟುಂಬಿಕ ಮನರಂಜನೆಯ ಸಿನಿಮಾ ಇದು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎಂಬುದು ನನಗೂ ಮತ್ತು ಶರಣ್ ಅವರಿಗೂ ಇರುವ ಬ್ರಾಂಡ್. ಅದು ಮುಂದುವರಿಯುತ್ತಿದೆ ಎಂಬುದು ಖುಷಿ’ ಎಂದರು.