Dear Sathya ಮಾ.10ಕ್ಕೆ ಡಿಯರ್ ಸತ್ಯ ಬಿಡುಗಡೆ!
ಆರ್ಯನ್ ಸಂತೋಷ್ ಹಾಗೂ ಅರ್ಚನಾ ಕೊಟ್ಟಿಗೆ ನಟನೆಯ ‘ಡಿಯರ್ ಸತ್ಯ’ ಚಿತ್ರ ಮಾ.10ಕ್ಕೆ ಬಿಡುಗಡೆಯಾಗಲಿದೆ.
‘ಡಿಯರ್ ಸತ್ಯ’ ಸಿನಿಮಾದ ಟ್ರೇಲರ್ ಪರ್ಪಲ್ ರಾಕ್ ಎಂಟರ್‌ಟೈನರ್ಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಚಿತ್ರತಂಡಕ್ಕೆ ಶ್ರೀಮುರಳಿ ಸಾಥ್ ಕೊಟ್ಟಿದ್ದಾರೆ.
ಸಿನಿಮಾಕ್ಕೆ ಶುಭ ಹಾರೈಸಿ ಮಾತನಾಡಿದ ನಟ ಶ್ರೀಮುರಳಿ, ‘ಇದೊಂದು ಭರವಸೆಯ ಚಿತ್ರ. ನನ್ನ ಫ್ರೆಂಡ್ ಸಂತೋಷ್ ದೊಡ್ಡ ಯುದ್ಧ ಮಾಡಿ ಈ ಸಿನಿಮಾ ಮಾಡ್ತಿದಾರೆ. ಇದರಲ್ಲಿ ಉಪೇಂದ್ರ ಹಾಡು ಸೊಗಸಾಗಿದೆ. ಚಿತ್ರ ಅಭಿಮಾನಿಗಳ ಹೃದಯ ತಟ್ಟಲಿ’ ಎಂದು ಹಾರೈಸಿದರು.
ಭಾವುಕವಾಗಿ ಮಾತನಾಡಿದ ನಾಯಕ ಆರ್ಯನ್ ಸಂತೋಷ್, ‘ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ. ಈ ಚಿತ್ರವನ್ನು ತಮಿಳಿನಲ್ಲಿ ಮಾಡುವ ಸಲುವಾಗಿ ಹೆಸರಾಂತ ನಿರ್ದೇಶಕ ವೆಟ್ರಿಮಾರನ್ ಬಳಿ ಹೋಗಿದ್ದೆ.'
'ಅವರು ಸಿನಿಮಾ ಮೆಚ್ಚಿಕೊಂಡರೂ ಆ ಲೆವೆಲ್‌ಗೆ ಬಜೆಟ್ ಹೊಂದಿಸೋದು ಸಾಧ್ಯವಾಗಿಲ್ಲ. ಕನ್ನಡದಲ್ಲಾದರೂ ತರೋಣ ಅಂದುಕೊಂಡು ಸಾಕಷ್ಟುಅಲೆದಾಡಿದ ಬಳಿಕ ನಿರ್ಮಾಪಕರು ಸಿಕ್ಕರು. ಕೊನೆಗೆ ಎಲ್ಲಾ ಒಳ್ಳೆಯದೇ ಆಯಿತು’ ಎಂದರು.
ನಾಯಕಿ ಅರ್ಚನಾ ಕೊಟ್ಟಿಗೆ, ‘ವರ್ಷಗಳ ಕೆಳಗೆ ಆಡಿಶನ್ ಕೊಟ್ಟಮೊದಲ ಸಿನಿಮಾ. ಅದಕ್ಕೆ ಆಯ್ಕೆ ಆಗಿದ್ದು ಖುಷಿಯಾಗಿತ್ತು’ ಎಂದರು. ನಿರ್ದೇಶಕ ಶಿವ ಗಣೇಶ್, ‘ನೇರ ಕತೆ ಇರುವ ಪರಿಣಾಮಕಾರಿ ಚಿತ್ರ ನಮ್ಮದು’ ಎಂದರು.
ನಿರ್ಮಾಪಕರಾದ ಗಣೇಶ್ ಪಾಪಣ್ಣ, ಯತೀಶ್, ಶ್ರೀನಿವಾಸ್ ಬಿಂಡಿಗನವಿಲೆ, ಛಾಯಾಗ್ರಾಹಕ ವಿನೋದ್ ಭಾರತಿ ಹಾಗೂ ಚಿತ್ರತಂಡದವರು ಹಾಜರಿದ್ದರು.