QR Code ಸ್ಕ್ಯಾನ್ ಮಾಡುವಾಗ ಓಲ್ಡ್ ಮಾಂಕ್ ಬಗ್ಗೆ ತಿಳಿಯುತ್ತದೆ; ಹೀಗಿದೆ ಡಿಫರೆಂಟ್ ಪ್ರಚಾರ!
ಫೆ.25ರಂದು ಬಿಡುಗಡೆಯಾಗುತ್ತಿರುವ ಶ್ರೀನಿ ನಿರ್ದೇಶನ ಮತ್ತು ನಟನೆಯ ‘ಓಲ್‌ಡ್ಮಾಂಕ್’ ಸಿನಿಮಾ ತಂಡ ವಿಭಿನ್ನವಾಗಿ ಚಿತ್ರದ ಪ್ರಚಾರ ಮಾಡುತ್ತಲೇ ಬರುತ್ತಿದ್ದು, ಈಗ ಅವರ ಮತ್ತೊಂದು ಐಡಿಯಾ ವೈರಲ್ ಆಗಿ ಜನರ ಮನ ಸೆಳೆದಿದೆ.
ಸಣ್ಣ ಪುಟ್ಟ ಅಂಗಡಿಗಳಲ್ಲಿ ಚಿತ್ರತಂಡ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳಲ್ಲಿ ಓಲ್‌ಡ್ಮಾಂಕ್ ಸಿನಿಮಾದ ಪೋಸ್ಟರ್ ಗಳನ್ನು ಅಂಟಿಸಿದೆ. ಅಂಗಡಿಗಳಿಗೆ ಬಂದ ಬಹುತೇಕರು ಸ್ಕ್ಯಾನರ್ ಬಳಸಿ ಹಣ ನೀಡುವುದರಿಂದ ಹೆಚ್ಚು ಮಂದಿಗೆ ಚಿತ್ರ ತಲುಪುವ ಭರವಸೆ ಚಿತ್ರತಂಡದ್ದು.
ಈ ವಿಭಿನ್ನ ಪ್ರಚಾರ ತಂತ್ರಕ್ಕೆ ಎಲ್ಲಾ ಕಡೆ ವ್ಯಾಪಕವಾದ ಪ್ರಶಂಸೆ ಸಿಕ್ಕಿದೆ. ಕರ್ನಾಟಕದ ಬಹುತೇಕ ಪ್ರಮುಖ ನಗರಗಳ ಅಂಗಡಿಗಳ ಸ್ಕ್ಯಾನರ್‌ಗಳ ಮೇಲೆ ಓಲ್‌ಡ್ ಮಾಂಕ್ ಪೋಸ್ಟರ್ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಗರಗಳ ಅಂಗಡಿಗಳಿಗೆ ತಲುಪುವ ಉದ್ದೇಶ ಚಿತ್ರತಂಡಕ್ಕೆ ಇದೆ.
ಈ ಐಡಿಯಾ ಹುಟ್ಟಿಕೊಂಡ ಸಂದರ್ಭದ ಕುರಿತು ಮಾತನಾಡುವ ಶ್ರೀನಿ, ‘ಆಟೋದ ಹಿಂದೆ, ಬಸ್ಸುಗಳ ಹಿಂದೆ ಸಿನಿಮಾ ಪೋಸ್ಟರ್ ಅಂಟಿಸುವ ಸಂಪ್ರದಾಯ ಮೊದಲಿನಿಂದಲೂ ಇದೆ.'
'ಅದಕ್ಕಿಂತ ಬೇರೆ ರೀತಿಯಲ್ಲಿ ಹೆಚ್ಚಿನ ಜನಗಳಿಗೆ ತಲುಪುವುದು ಹೇಗೆ ಎಂದು ಆಲೋಚನೆ ಮಾಡುತ್ತಲೇ ಇದ್ದೆವು. ಆ ಯೋಚನೆಯಲ್ಲೇ ಒಂದು ದಿನ ಶ್ರೀರಂಗಪಟ್ಟಣದ ಬಳಿ ಪುಟ್ಟ ಅಂಗಡಿಯಲ್ಲಿ ಸ್ಕ್ಯಾನ್ ಮಾಡುವ ವೇಳೆಯಲ್ಲಿ ನನಗೆ
ಈ ಐಡಿಯಾ ಹೊಳೆಯಿತು’ ಎನ್ನುತ್ತಾರೆ.
ಪ್ರಸ್ತುತ ಬಹುತೇಕರು ಆಟೋಗಳಲ್ಲಿ, ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ನೀಡುತ್ತಾರೆ. ಹಾಗೆ ಸ್ಕ್ಯಾನ್ ಮಾಡುವಾಗಲೆಲ್ಲಾ ಕ್ಯೂಆರ್ ಕೋಡ್ ಇರುವ ಬೋರ್ಡ್ ಅನ್ನು ದೃಷ್ಟಿಸುತ್ತಾರೆ. ಅಲ್ಲಿ ಚಿತ್ರದ ಪೋಸ್ಟರ್ ಇದ್ದರೆ ಹೆಚ್ಚು ಜನಕ್ಕೆ ತಲುಪುತ್ತದೆ ಅನ್ನುವುದು ತಂಡದ ಐಡಿಯಾ.
ಈ ಕುರಿತು ನಿರ್ದೇಶಕ ಶ್ರೀನಿ, ‘ಪ್ರತಿಯೊಬ್ಬರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಜಾಗರೂಕರಾಗಿ ಇರುತ್ತಾರೆ. ಆಗ ಅವರ ಕಣ್ಣಿಗೆ ಸಿನಿಮಾದ ಪೋಸ್ಟರ್ ಬಿದ್ದರೆ ಹೆಚ್ಚು ನೆನಪಿರುತ್ತದೆ. ಸಬ್‌ಕಾನ್ಷಿಯಸ್ ಲೆವೆಲ್‌ನಲ್ಲಿ ಸಿನಿಮಾದ ಮಾಹಿತಿ ಇರುತ್ತದೆ. ಈ ಐಡಿಯಾ ಕೆಲಸ ಮಾಡಿದ್ದು, ಅನೇಕರು ಪೋಸ್ಟರ್ ನೋಡಿಕೊಂಡು ಬಂದು ಟ್ರೇಲರ್, ಹಾಡು ನೋಡುತ್ತಿದ್ದಾರೆ ಮತ್ತು ಬೇರೆಯವರಿಗೂ ಹಂಚುತ್ತಿದ್ದಾರೆ’ ಎನ್ನುತ್ತಾರೆ.
ಒಟ್ಟಿನಲ್ಲಿ ಶ್ರೀನಿಯ ಐಡಿಯಾಗಳು ಕೆಲಸ ಮಾಡುತ್ತಿದ್ದು, ವಿಭಿನ್ನ ಪ್ರಚಾರ ತಂತ್ರವನ್ನು ಜನರು ಅಚ್ಚರಿಯಿಂದ ನೋಡುತ್ತಿದ್ದಾರೆ. ಓಲ್‌ಡ್ಮಾಂಕ್ ಚಿತ್ರದಲ್ಲಿ ಶ್ರೀನಿ ಮತ್ತು ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.