ಹೆಣ್ಣು ಮದುವೆಯ ಬಳಿಕ ನಾಯಕಿಯಾಗಬಾರದೇಕೇ: ನಟಿ ಶ್ವೇತಾ ಶ್ರೀವಾತ್ಸವ್ ಪ್ರಶ್ನೆ!
ಹೆಣ್ಣು ಸ್ವಾವಲಂಬಿ ಅಲ್ಲವೇ? ಏನಾದರೂ ಸಾಧಿಸಬೇಕು ಎಂದರೆ ಆಕೆ ಗಂಡ ಅಥವಾ ತಂದೆಯ ಹೆಸರಿನ ಜೊತೆಗೆ ಗುರುತಿಸಿಕೊಳ್ಳಬೇಕೆ? ಎಂದು ನಟಿ ಶ್ವೇತಾ ಶ್ರೀವಾತ್ಸವ್ ಪ್ರಶ್ನಿಸಿದ್ದಾರೆ.
ಮದುವೆ ಆದ ಹುಡುಗಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರೆ ಜನ ಸ್ವೀಕರಿಸೋದಿಲ್ಲ ಎಂಬ ಪೂರ್ವಾಗ್ರಹ ಎರಡು ದಶಕಗಳ ಹಿಂದೆ ನಾನು ನಟಿಸಲು ಆರಂಭಿಸಿದಾಗಲೂ ಇತ್ತು. ಈಗಲೂ ಇದೆ.
ಅದಕ್ಕೆ ಕಾರಣ ಏನು? ಹೆಣ್ಣು ಸ್ವಾವಲಂಬಿ ಅಲ್ಲವೇ? ಏನಾದರೂ ಸಾಧಿಸಬೇಕು ಎಂದರೆ ಆಕೆ ಗಂಡ ಅಥವಾ ತಂದೆಯ ಹೆಸರಿನ ಜೊತೆಗೆ ಗುರುತಿಸಿಕೊಳ್ಳಬೇಕೆ? ಎಂದು ನಟಿ ಶ್ವೇತಾ ಶ್ರೀವಾತ್ಸವ್ ಪ್ರಶ್ನಿಸಿದ್ದಾರೆ.
ಶ್ವೇತಾ ತನ್ನ ಸಿನಿಮಾರಂಗದ 20 ವರ್ಷಗಳ ಅನುಭವ ಕಥನ ‘ರೆಕ್ಕೆ ಇದ್ದರೆ ಸಾಕೆ’ ಕೃತಿಯ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಪ್ಪತ್ತು ವರ್ಷಗಳ ನನ್ನ ಸಿನಿಬದುಕನ್ನು ಸಾಧನೆ ಅಂತ ನಾನು ಕರೆದುಕೊಳ್ಳುತ್ತೇನೆ.
ಈ ಸಮಯದಲ್ಲಿ ನಾನು ಎದುರಿಸಿದ ಸವಾಲುಗಳು, ಸನ್ನಿವೇಶಗಳು ಹಾಗೂ ಸಂತೋಷದ ವಿಚಾರಗಳು ಎಲ್ಲವನ್ನೂ ಈ ಪುಸ್ತಕದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಭಾರತ ಸೇರಿದಂತೆ ಹದಿನೈದು ದೇಶಗಳಲ್ಲಿ ಈ ಕೃತಿ ದೊರೆಯಲಿದೆ ಎಂದರು.
ನಾನು ಈ ಪುಸ್ತಕವನ್ನು ಮೊದಲು ಇಂಗ್ಲಿಷ್ನಲ್ಲಿ ಬರೆದಿದ್ದೆ. ತಾಯಿ ಭಾಷೆಯ ಬಗ್ಗೆ ನನಗೆ ಅಪಾರ ಪ್ರೀತಿ ಹಾಗೂ ಸೆಂಟಿಮೆಂಟ್. ಹೀಗಾಗಿ ಆನಂತರ ಕನ್ನಡದಲ್ಲೂ ಬರೆಯೋಣ ಅನಿಸಿತು. ಪ್ರಕಾಶಕರ ಬಳಿ ಹೇಳಿದೆ ಅವರು ಒಪ್ಪಿಕೊಂಡರು.
2006ರಲ್ಲಿ ಮುಖಾ ಮುಖಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಶ್ವೇತಾ ಶ್ರೀವಾತ್ಸವ್, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಕಿರಗೂರಿನ ಗಯ್ಯಾಳಿಗಳು, ರಾಘವೇಂದ್ರ ಸ್ಟೋರ್ಸ್, ಹೋಪ್ ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದರು.