ಹರೀಶ್ ರಾಜ್ ಸಿನಿ ಪಯಣಕ್ಕೆ 25 ವರ್ಷ;ಪ್ರತಿಭಾವಂತ ನಟನಿಗೆ ಗಿರೀಶ್ ಕಾಸರವಳ್ಳಿ ಶುಭಾಶಯ!
ಪ್ರತಿಭಾವಂತ ನಟನಿಗೆ ಶುಭ ಹಾರೈಕೆ ಮಾಡಿದ ಗಿರೀಶ್ ಕಾಸರವಳ್ಳಿ. ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಇನ್ನೆಚ್ಚು ಹತ್ತಿರವಾದ ನಟ.....
ಯಾವುದೇ ಥರದ ಪಾತ್ರಗಳನ್ನು ಕೊಟ್ಟರೂ ಲೀಲಾಜಾಲವಾಗಿ ನಟಿಸಬಲ್ಲ ಪ್ರತಿಭಾವಂತ ನಟ ಹರೀಶ್ ರಾಜ್ ಸಿನಿಮಾದಲ್ಲಿ ನಟನೆ ಶುರು ಮಾಡಿ 25 ವರ್ಷ ಆಗಿದೆ.
ಈ ವರ್ಷ ಅವರೊಳಗಿನ ನಟನಿಗೆ ಬೆಳ್ಳಿಹಬ್ಬ ಸಂಭ್ರಮ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ದೋಣಿ ಸಾಗಲಿ’ ಚಿತ್ರದಲ್ಲಿ ಸೌಂದರ್ಯ ತಮ್ಮನ ಪಾತ್ರದಲ್ಲಿ ನಟಿಸಿದ್ದರಿಂದ ಆರಂಭಿಸಿ ಕನ್ನಡ, ತಮಿಳು, ಮಲಯಾಳಂ ಹೀಗೆ ಅನೇಕ ಭಾಷೆಯ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
19ಕ್ಕೂ ಹೆಚ್ಚು ಧಾರಾವಾಹಿಗಳ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಕೊನೆಯ ಕ್ಷಣದವರೆಗೂ ಇದ್ದು ರಂಜಿಸಿದ್ದು ಇವರ ಪ್ರತಿಭೆಗೆ ಸಿಕ್ಕ ಮನ್ನಣೆ.
ತಮ್ಮ ಸಿನಿಮಾ ಜರ್ನಿಯಲ್ಲಿ ಭಾಗಿಯಾದವರಿಗೆಲ್ಲಾ ಕೃತಜ್ಞತೆ ಸಲ್ಲಿಸಲು ಹರೀಶ್ ರಾಜ್ ಸಂತೋಷ ಕಾರ್ಯಕ್ರಮ ಆಯೋಜಿಸಿದ್ದರು.
ಈ ವೇಳೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ‘ಸಾಮಾನ್ಯವಾಗಿ ನಾನು ನನ್ನ ಸಿನಿಮಾದಲ್ಲಿ ಒಮ್ಮೆ ಒಬ್ಬರನ್ನು ನಟನಾಗಿ ಆಯ್ಕೆ ಮಾಡಿಕೊಂಡ ಮೇಲೆ ಇನ್ನೊಂದು ಚಿತ್ರಕ್ಕೆ ಆಯ್ಕೆ ಮಾಡುವುದಿಲ್ಲ.
ಒಬ್ಬರನ್ನು ಒಂದು ಪಾತ್ರದಲ್ಲಿ ಮಾತ್ರ ಊಹಿಸಬಲ್ಲೆ ನಾನು. ಇಬ್ಬರು ಅದಕ್ಕೆ ಹೊರತಾದವರು. ಒಬ್ಬರು ಉಮಾಶ್ರೀ. ಇನ್ನೊಬ್ಬರು ಹರೀಶ್ ರಾಜ್. ಹರೀಶ್ ನನ್ನ 3 ಸಿನಿಮಾದಲ್ಲಿ ನಟಿಸಿದ್ದಾರೆ.
ತಾಯಿ ಸಾಹೇಬ, ದ್ವೀಪ ಮತ್ತು ಕೂರ್ಮಾವತಾರ. ದ್ವೀಪ ಚಿತ್ರದ ಇವರ ನಟನೆ ರಾಷ್ಟ್ರಪ್ರಶಸ್ತಿಯ ಪ್ರಮುಖ ಸುತ್ತಿಗೆ ಹೋಗಿತ್ತು. ಅಶುತೋಶ್ ಗೋವಾರಿಕರ್ ಮೆಚ್ಚಿಕೊಂಡಿದ್ದರು. ಹರೀಶ್ ಒಬ್ಬ ಒಳ್ಳೆಯ ನಟ. ಅವರ ಹೆಸರು ಕೇಳಿದ ತಕ್ಷಣ ಲವಲವಿಕೆಯ ಹುಡುಗನ ಚಿತ್ರ ಮುಖದ ಮೇಲೆ ಬರುತ್ತದೆ’ ಎಂದರು.
ಹರೀಶ್ ರಾಜ್, ‘ರಂಗಭೂಮಿಯಲ್ಲಿದ್ದವ ಚಿತ್ರರಂಗಕ್ಕೆ ಬಂದೆ. ನಟನೆ ಶುರು ಮಾಡಿ 25 ವರ್ಷವೇ ಆಯಿತು. ಈ ಪಯಣದಲ್ಲಿ ಚಿತ್ರರಂಗದ ಹಲವಾರು ಬದಲಾವಣೆಗಳನ್ನು ಕಂಡಿದ್ದೇನೆ.
ಉತ್ತಮ ಅವಕಾಶಗಳು ದೊರೆತಿವೆ. ಬೇರೆ ಭಾಷೆಗಳಲ್ಲೂ ಕರೆದು ಕೆಲಸ ಕೊಟ್ಟಿದ್ದಾರೆ. ಇವತ್ತು ಮಲಯಾಳಂನಲ್ಲಿ ನನಗೆ ಗೌರವ ತೋರಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನನ್ನ ಬೇರು. ನನ್ನ ಕರ್ನಾಟಕ. ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ ಮಾ ಹರೀಶ್, ದೋಣಿ ಸಾಗಲಿ ಸಿನಿಮಾ ನಿರ್ಮಾಪಕ ಮಧುಸೂದನ್, ನಟ-ನಿರ್ಮಾಪಕ ಸುನೀಲ್ ರಾವ್ ಇದ್ದರು.