ಉತ್ತರ ಭಾರತದಲ್ಲಿ ರಾತ್ರಿ, ದಕ್ಷಿಣದಲ್ಲಿ ಹಗಲಿನಲ್ಲಿ ಮದುವೆ ನಡೆಯೋದು ಯಾಕೆ?
North vs South Indian wedding: ಉತ್ತರ ಭಾರತದಲ್ಲಿ ಹೆಚ್ಚಾಗಿ ರಾತ್ರಿ ವೇಳೆ ಹಾಗೂ ದಕ್ಷಿಣ ಭಾರತದಲ್ಲಿ ಹಗಲಿನಲ್ಲಿ ಮದುವೆ ನಡೆಯುವುದನ್ನು ನೀವು ನೋಡಿರಬಹುದು. ಆದರೆ ಒಂದೇ ದೇಶದಲ್ಲಿ ಹೀಗೆ ಬೇರೆ ಬೇರೆ ಸಂಪ್ರದಾಯಗಳಲ್ಲಿ ಮದುವೆ ನಡೆಯೋದು ಯಾಕೆ? ಇದಕ್ಕೆ ಕಾರಣ ಏನು ತಿಳಿಯಿರಿ.

ಉತ್ತರ ಭಾರತದಲ್ಲಿ ರಾತ್ರಿ-ದಕ್ಷಿಣ ಭಾರತದಲ್ಲಿ ಹಗಲು ಮದುವೆ ನಡೆಯೋದು ಯಾಕೆ?
ಸಾಮಾನ್ಯವಾಗಿ ನಾವು ನೋಡಿದಂತೆ ಉತ್ತರ ಭಾರತದ ಸಂಪ್ರದಾಯದಲ್ಲಿ ಹೆಚ್ಚಾಗಿ ರಾತ್ರಿ ವೇಳೆ ಮದುವೆಯಾದರೆ, ದಕ್ಷಿಣ ಭಾರತದ ಸಂಪ್ರದಾಯದಂತೆ ಹಗಲಿನ ವೇಳೆ ಮದುವೆಯಾಗುತ್ತದೆ. ಇದಕ್ಕೆ ಕಾರಣ ಏನು ಎಂದು ನೀವು ಎಂದಾದರೂ ಯೋಚನೆ ಮಾಡಿದ್ದೀರಾ? ಇಲ್ಲ ಅಂದಾದ್ರೆ ಇವತ್ತೆ ಆ ರಹಸ್ಯದ ಬಗ್ಗೆ ತಿಳಿಯಿರಿ.
ದಕ್ಷಿಣ ಭಾರತದ ವೈದಿಕ ಸಂಪ್ರದಾಯ
ಹಿಂದೂ ಧರ್ಮದ ಪ್ರಾಚೀನ ಶಾಸ್ತ್ರಗಳು ಹಾಗೂ ವೈದಿಕ ನಿಯಮಗಳ ಪ್ರಕಾರ, ಮದುವೆ ಸಂಸ್ಕಾರವು ಹಗಲಿನಲ್ಲಿ ಸೂರ್ಯನ ಬೆಳಕಿನಲ್ಲೇ ನಡೆಯಬೇಕು. ಸಪ್ತಪದಿ ತುಳಿಯುವಾಗ ಅಗ್ನಿ ದೇವನ ಜೊತೆಗೆ ಸೂರ್ಯ ದೇವ ಹಾಗೂ ದೇವತೆಗಳ ಸಾಕ್ಷಿ ಇರಬೇಕು ಎಂಬುದು ನಂಬಿಕೆ. ಹಗಲಿನ ಸಮಯವನ್ನು ದೇವತೆಗಳ ಸಕ್ರಿಯ ಸಮಯ ಮತ್ತು ಸಾತ್ವಿಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಬೆಳಗ್ಗಿನ ಶುಭ ಮುಹೂರ್ತದಲ್ಲಿ ಮದುವೆ
ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಂದರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿ ವೈದಿಕ ಸಂಪ್ರದಾಯವನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಹಾಗಾಗಿ ಇಲ್ಲಿ ಹೆಚ್ಚಾಗಿ ಬೆಳಿಗ್ಗೆ ಅಥವಾ ಮಧ್ಯಾಹ್ನದ ಶುಭ ಮುಹೂರ್ತದಲ್ಲೇ ಮದುವೆ ನೆರವೇರಿಸಲಾಗುತ್ತದೆ. ರಾತ್ರಿ ಹೊತ್ತು ಮದುವೆ ನಡೆಯುವುದಿಲ್ಲ.
ಉತ್ತರಭಾರತದಲ್ಲಿ ರಾತ್ರಿ ಹೊತ್ತು ಮದುವೆಗೆ ಕಾರಣ ಆಕ್ರಮಣಕಾರರ ಭಯ
ಉತ್ತರ ಭಾರತದಲ್ಲಿ ರಾತ್ರಿ ಮದುವೆ ಮಾಡುವ ಪದ್ಧತಿಯು ವೈದಿಕ ಧರ್ಮಕ್ಕಿಂತ ಹೆಚ್ಚಾಗಿ ಆತ್ಮರಕ್ಷಣೆಮತ್ತು ಐತಿಹಾಸಿಕ ಕಾರಣಗಳಿಂದ ಆರಂಭವಾಯಿತು. ಮಧ್ಯಕಾಲೀನ ಭಾರತದಲ್ಲಿ ವಿದೇಶಿ ಆಕ್ರಮಣಕಾರರು ಮತ್ತು ಮೊಘಲರ ದಾಳಿಗಳ ಸಮಯದಲ್ಲಿ ಹಗಲಿನಲ್ಲಿ ಮದುವೆ ಮಾಡುವುದು ಅಪಾಯಕಾರಿಯಾಗಿತ್ತು. ಲೂಟಿ, ಅಪಹರಣ ಹಾಗೂ ಗಲಾಟೆಗಳನ್ನು ತಡೆಯಲು ಜನರು ರಾತ್ರಿಯ ಕತ್ತಲಲ್ಲಿ ಗೌಪ್ಯವಾಗಿ ಮದುವೆ ನಡೆಸುತ್ತಿದ್ದರು.
ವಧು ವರರ ರಕ್ಷಣೆಯ ಹಿನ್ನೆಲೆ
ಆ ಸಮಯದಲ್ಲಿ ವರನ ಜೊತೆ ಬರುವ 'ಬಾರಾತ್' ಕೇವಲ ಸಂಭ್ರಮಕ್ಕೆ ಮಾತ್ರವಾಗಿರದೆ, ಆಯುಧಗಳನ್ನು ಹಿಡಿದು ವಧು-ವರರನ್ನು ರಕ್ಷಿಸುವ ಯೋಧರ ಗುಂಪಾಗಿತ್ತು. ಕಾಲಕ್ರಮೇಣ ಈ ತುರ್ತು ವ್ಯವಸ್ಥೆಯೇ ಉತ್ತರ ಭಾರತದಲ್ಲಿ ಒಂದು ಸಂಪ್ರದಾಯವಾಗಿ ನೆಲೆನಿಂತಿತು.
ಧ್ರುವ ನಕ್ಷತ್ರ ಮತ್ತು ಚಂದ್ರ
ಉತ್ತರ ಭಾರತೀಯ ಜ್ಯೋತಿಷ್ಯ ಪದ್ಧತಿಯಲ್ಲಿ ರಾತ್ರಿಯ ಸಮಯದಲ್ಲಿ ಧ್ರುವ ನಕ್ಷತ್ರದ ದರ್ಶನ ಮತ್ತು ಚಂದ್ರನ ಸಾಕ್ಷಿಯೊಂದಿಗೆ ಮದುವೆ ಮಾಡುವುದು ಸ್ಥಿರತೆ ಹಾಗೂ ಸೌಮ್ಯತೆಯ ಸಂಕೇತವಾಗಿದೆ. ಇದಲ್ಲದೇ ಬಿಸಿಲಿನಿಂದ ರಕ್ಷಿಸಲು ಹಾಗೂ ತಂಪಾದ ವಾತಾವರಣದ ಹಿನ್ನೆಲೆಯಲ್ಲೂ ರಾತ್ರಿ ಹೊತ್ತು ಮದುವೆ ಮಾಡುವುದು ಅನುಕೂಲವಾಗಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

