ಬೆಳೆಯುತ್ತಿರುವ ಮಕ್ಕಳೊಂದಿಗೆ ಲೈಂಗಿಕ ಶಿಕ್ಷಣದ ಕುರಿತು ಈ ಪಾಠ ಮಾಡಲೇಬೇಕು…
ನಾವು ಯಾವ ವಿಷ್ಯಗಳನ್ನ ಮಕ್ಕಳಿಂದ ಹೆಚ್ಚು ಮರೆಮಾಚುತ್ತೇವೆಯೋ, ಅದೇ ವಿಷ್ಯ ಮತ್ತೆ ಮಾರಕವಾಗೋದು ಗ್ಯಾರಂಟಿ. ಹಾಗಾಗಿ ನಿಮ್ಮ ಬೆಳೆಯುತ್ತಿರುವ ಮಗು ಇಂಟರ್ನೆಟ್ ಮತ್ತು ಸ್ನೇಹಿತರಿಂದ ಲೈಂಗಿಕತೆಯ ಬಗ್ಗೆ ಅರ್ಧ ಜ್ಞಾನವನ್ನು ಸಂಗ್ರಹಿಸುವ ಮೊದಲು, ಈ ಪ್ರಮುಖ ವಿಷಯಗಳನ್ನು ಅವರೊಂದಿಗೆ ಚರ್ಚಿಸಿ.
ನಮ್ಮ ದೇಹದ ಸೂಕ್ಷ್ಮ ಭಾಗಗಳು, ಲೈಂಗಿಕ ಸಂಬಂಧಗಳು (Sexual relationship) ಮತ್ತು ಲೈಂಗಿಕ ಸಮಸ್ಯೆಗಳ ಬಗ್ಗೆ ನಮ್ಮ ಸಮಾಜದಲ್ಲಿ ಇನ್ನೂ ಬಹಿರಂಗವಾಗಿ ಮಾತನಾಡೋದೆ ಇಲ್ಲ. ಶಾಲೆಗಳಲ್ಲಿಯೂ ಸಹ, ಆ ಎರಡು ಅಧ್ಯಾಯಗಳ ಬಗ್ಗೆ ಹೇಳೋದೆ ಇಲ್ಲ ಅಥವಾ ಅರ್ಧಂಬರ್ಧ ಹೇಳಿ ಮುಗಿಸ್ತಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮತ್ತು ಯುವ ಜನತೆ ಇಂಟರ್ನೆಟ್ ನಲ್ಲಿ ಸಾಕಷ್ಟು ದಾರಿತಪ್ಪಿಸುವ ಮಾಹಿತಿಗೆ ಬಲಿಯಾಗಲು ಅರೆ ಬರೆ ಜ್ಞಾನವೇ ಕಾರಣ. ಮಕ್ಕಳು ಯಾವುದೇ ರೀತಿಯ ತಪ್ಪು ಸಹವಾಸ ಅಥವಾ ತಪ್ಪು ಕೃತ್ಯಕ್ಕೆ ಬಲಿಯಾಗಬಾರದು ಅನ್ನೋದಾದ್ರೆ ಮಕ್ಕಳಿಗೆ ಈಗಲೇ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು.
ಇಂಟರ್ನೆಟ್ ಜಗತ್ತು ಮತ್ತು ಸೆಕ್ಸ್ ಬಗ್ಗೆ ಅರೆ ಬರೆ ಜ್ಞಾನ
ಇಂದಿಗೂ, ಸೆಕ್ಸ್ ಗೆ ಸಂಬಂಧಿಸಿದ ವಿಷಯಗಳನ್ನು ಮಾತನಾಡೋದೆ ತಪ್ಪು ಎನ್ನುತ್ತಾರೆ ಜನರು, ಯಾಕಂದ್ರೆ ಯಾರು ಅದರ ಬಗ್ಗೆ ಓಪನ್ ಆಗಿ ಮಾತನಾಡಲ್ಲ. ಆದರೆ ಇಂಟರ್ನೆಟ್ ಬಂದ ಮೇಲೆ ಎಲ್ಲವೂ ಬದಲಾಗಿದೆ, ಇಂಟರ್ನೆಟ್ ನಲ್ಲಿ ಎಲ್ಲಾ ವಿಷ್ಯಗಳು ಸುಲಭವಾಗಿ ಲಭ್ಯವಿರೋದ್ರಿಂದ ಚಿಕ್ಕ ಮಕ್ಕಳು, ಯುವಕರು ಅಂತರ್ಜಾಲದ ಒಳಹೊಕ್ಕು ಏನೇನೋ ನೋಡ್ತಾರೆ. ಇನ್ನು ಸೆಕ್ಸ್ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ವಿಷಯವು ಕಾಣಿಸಿಕೊಳ್ಳುತ್ತೆ, ಅವು ವಾಸ್ತವದಿಂದ ದೂರವಿದೆ, ಆದರೆ ಜನರು ಅದನ್ನೆ ನಿಜಾ ಅಂತ ನಂಬ್ತಾರೆ. ಈ ಕಾರಣದಿಂದಾಗಿ, ಲೈಂಗಿಕ ಸಂಬಂಧಗಳು, ಲೈಂಗಿಕ ಸಮಸ್ಯೆಗಳು (sexual problems) ಮತ್ತು ತಮ್ಮ ಸ್ವಂತ ದೇಹದ ಬಗ್ಗೆ ತಿಳಿದುಕೊಳ್ಳುವ ಬದಲು, ಬೆಳೆಯುತ್ತಿರುವ ಮಕ್ಕಳು, ಹದಿಹರೆಯದವರು ಮತ್ತು ಯುವಕರು ಇನ್ಯಾವುದೋ ವಿಷಯಗಳಿಗೆ ಆಕರ್ಷಿತರಾಗ್ತಾರೆ.
ಲೈಂಗಿಕತೆ ಬಗೆಗಿನ ಮೌನವನ್ನು ಮುರಿಯೋದು ಸದ್ಯದ ಪರಿಸ್ಥಿತಿಯಲ್ಲಿ ತುಂಬಾನೆ ಮುಖ್ಯ. ಇತ್ತೀಚಿನ ದಿನಗಳಲ್ಲಿ, ಗರ್ಭಧಾರಣೆ, ಎಸ್ಟಿಐನಂತಹ ಇತರ ಲೈಂಗಿಕ ಆರೋಗ್ಯ ಸಂಬಂಧಿತ ಪ್ರಕರಣಗಳು ಬಹಳ ಚಿಕ್ಕ ವಯಸ್ಸಿನಲ್ಲಿ ಕಂಡುಬರುತ್ತವೆ. ಇದನ್ನ ತಪ್ಪಿಸಬೇಕು ಅಂದ್ರೆ ಒಂದು ನಿರ್ದಿಷ್ಟ ವಯಸ್ಸಿನ ನಂತರ, ಪೋಷಕರು ತಮ್ಮ ಮಕ್ಕಳೊಂದಿಗೆ ಲೈಂಗಿಕ ಆರೋಗ್ಯದ ಬಗ್ಗೆ ಮಾತನಾಡಲೇಬೇಕು. ಹಾಗಿದ್ರೆ ಮಕ್ಕಳಿಗೆ ನಾವು ಏನನ್ನು ತಿಳಿಸಬೇಕು?
ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಏಕೆ ಮುಖ್ಯ?
ಪೋಷಕರು ತಮ್ಮ ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಪ್ರತಿಯೊಂದು ಅಂಶವನ್ನು ಹೇಳಬೇಕು. ಲೈಂಗಿಕತೆಗೆ ಸಂಬಂಧಿಸಿದ ದೈಹಿಕ ಮಾಹಿತಿಯ ಜೊತೆಗೆ, ಭಾವನಾತ್ಮಕ ಮತ್ತು ಸಾಮಾಜಿಕ ಜ್ಞಾನವೂ ಮುಖ್ಯ. ಲೈಂಗಿಕತೆಗೆ ಸಂಬಂಧಿಸಿದ ಎಲ್ಲಾ ಕಾನೂನುಗಳ ಬಗ್ಗೆ ಅವರು ತಿಳಿದಿರಬೇಕು. ಇದಲ್ಲದೆ, ಕೆಟ್ಟ ಸ್ಪರ್ಶ ಮತ್ತು ಉತ್ತಮ ಸ್ಪರ್ಶದ ತಿಳುವಳಿಕೆ ಮಕ್ಕಳಲ್ಲಿ ಬಹಳ ಮುಖ್ಯ. ಸೆಕ್ಸ್ ಮಾಡಲು ಇತರ ವ್ಯಕ್ತಿಯ ಒಪ್ಪಿಗೆಯೂ ಮುಖ್ಯವಾಗಿದೆ, ಯಾರೊಂದಿಗಾದರೂ ಸೆಕ್ಸ್ ಮಾಡಲು ಒತ್ತಾಯಿಸುವುದನ್ನು ಅತ್ಯಾಚಾರ (Rape) ಎನ್ನುತ್ತಾರೆ ಅನ್ನೋದನ್ನು ಅವರಿಗೆ ತಿಳಿಸಿ. ಜೊತೆಗೆ ಸೆಕ್ಸ್ ಮಾಡಲು ಆರಂಭಿಸೋದಕ್ಕೆ ಸರಿಯಾದ ವಯಸ್ಸು, ದೇಹ, ಮನಸ್ಸು ಸಹ ತುಂಬಾನೆ ಮುಖ್ಯ ಅನ್ನೋದನ್ನು ಅವರಿಗೆ ತಿಳಿಸಿ.
ಲೈಂಗಿಕವಾಗಿ ಸಕ್ರಿಯವಾಗಿರಲು ಸರಿಯಾದ ವಯಸ್ಸು ಯಾವುದು?
ಲೈಂಗಿಕತೆಗೆ ದೈಹಿಕ ಮಾತ್ರವಲ್ಲದೆ ಮಾನಸಿಕ ಮತ್ತು ಭಾವನಾತ್ಮಕ ತಿಳುವಳಿಕೆಯೂ ಅಗತ್ಯ. ತಜ್ಞರು ಸೆಕ್ಸ್ ಮಾಡಲು ಸಂತಾನೋತ್ಪತ್ತಿ ವಯಸ್ಸು ಮುಖ್ಯ ಎನ್ನಬಹುದು. ಆದರೆ ಒಬ್ಬ ವ್ಯಕ್ತಿಯು ಸೆಕ್ಸುವಲ್ ರಿಲೇಶನ್ ಶಿಪ್ ನಲ್ಲಿ (sexual relationship) ಆಕ್ಟೀವ್ ಆಗಿರಬೇಕು ಅಂದ್ರೆ, ಅದು ಸಂಪೂರ್ಣವಾಗಿ ಅವನ ಸ್ವಂತ ಬಯಕೆಯನ್ನು ಅವಲಂಬಿಸಿರುತ್ತದೆ. ಮಕ್ಕಳನ್ನು ಪಡೆಯಲು, ಮದುವೆಯಾಗಲು, ಸೆಕ್ಸ್ ಮಾಡಲು ಯಾವತ್ತೂ ಯಾರನ್ನೂ ಒತ್ತಾಯಿಸಬಾರದು ಅನ್ನೋದನ್ನ ಮಕ್ಕಳಿಗೆ ಮನದಟ್ಟು ಮಾಡಿ. ಇನ್ನು ವೈಜ್ಞಾನಿಕ, ಸಾಮಾಜಿಕ ಮತ್ತು ಭೌತಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪ್ರೌಢಾವಸ್ಥೆಯ ವಯಸ್ಸನ್ನು ಸರ್ಕಾರ 18 ವರ್ಷಗಳಿಗೆ ನಿಗದಿಪಡಿಸಿದೆ. ಇದಕ್ಕೂ ಮೊದಲು ಮಾಡಿದ ಲೈಂಗಿಕ ಸಂಬಂಧಗಳನ್ನು ಮಕ್ಕಳ ಲೈಂಗಿಕ ದೌರ್ಜನ್ಯದ ವರ್ಗದಲ್ಲಿ ಇಡಲಾಗುತ್ತದೆ. ಇದು ಶಿಕ್ಷಾರ್ಹ ಅಪರಾಧವೂ ಆಗಿದೆ ಅನ್ನೋದನ್ನ ಮಕ್ಕಳಿಗೆ ತಿಳಿಸಿ.
ಲೈಂಗಿಕ ಶಿಕ್ಷಣವು ನಿಮ್ಮ ಮಗುವನ್ನು ಗೊಂದಲಕ್ಕೀಡುಮಾಡುವ ಎಲ್ಲಾ ತಪ್ಪು ಮಾಹಿತಿಯನ್ನು ತಪ್ಪಿಸಲು ಒಂದು ಮಾರ್ಗವಾಗಿದೆ. ಹಾಗಾಗಿ ಹದಿಹರೆಯದ ಮಕ್ಕಳಿಗೆ ಲೈಂಗಿಕ ಶಿಕ್ಷಣ ಏಕೆ ಮುಖ್ಯ ಅನ್ನೋದನ್ನು ತಿಳಿಯೋಣ.
ಭೌತಿಕ ಬದಲಾವಣೆಗಳನ್ನು ಸ್ವೀಕರಿಸುವುದು
ಮಕ್ಕಳು ದೊಡ್ಡವರಾದಾಗ, ವಿಶೇಷವಾಗಿ ಪ್ರೌಢಾವಸ್ಥೆಯಲ್ಲಿ ಅವರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಕೂದಲಿನ ಬೆಳವಣಿಗೆ, ವಿಶೇಷವಾಗಿ ಖಾಸಗಿ ಪ್ರದೇಶದಲ್ಲಿ ಬದಲಾವಣೆ, ಹುಡುಗಿಯರಲ್ಲಿ ಪಿರಿಯಡ್ಸ್ ಉಂಟಾಗುತ್ತೆ. ಹಾಗಾಗಿ ನೈರ್ಮಲ್ಯದ ಬಗ್ಗೆ ಹೆಚ್ಚು ಜಾಗೃತರಾಗಿರುವಂತೆ ಮಕ್ಕಳಿಗೆ ಪಾಠ ಮಾಡಿ. ಯೋನಿ ಮತ್ತು ಶಿಶ್ನವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಗುಹ್ಯ ಕೂದಲಿನ (pubic hair) ಮಹತ್ವವನ್ನು ಪೋಷಕರಿಗೆ ತಿಳಿಸಬೇಕು. ಜೊತೆಗೆ ಪಿರಿಯಡ್ಸ್ ಸಮಯದಲ್ಲಿ ನೈರ್ಮಲ್ಯ ಕಾಪಾಡುವ ಬಗ್ಗೆ ಕೂಡ ಅವರಿಗೆ ತಿಳಿಸಿಕೊಡಬೇಕು.
ಲೈಂಗಿಕ ದೌರ್ಜನ್ಯ ತಡೆ
ಸೆಕ್ಸ್ ಅನ್ನೋದು ಬಹಳ ಸೂಕ್ಷ್ಮ ವಿಷಯವಾಗಿದೆ. ಬೆಳೆಯುತ್ತಿರುವ ಮಕ್ಕಳಿಗೆ ನಿಜವಾಗಿಯೂ ಆ ವ್ಯಕ್ತಿಯನ್ನು ತಾನು ಲವ್ ಮಾಡ್ತಿದ್ದೇನೋ? ಅಥವಾ ಆ ವ್ಯಕ್ತಿಯ ಗುಣದಿಂದ ಅಟ್ರಾಕ್ಟ್ ಆಗಿದ್ದೇನೋ ಅನ್ನೋದನ್ನು ನಿರ್ಧರಿಸೋಕು ಸಾಧ್ಯವಾಗೋದಿಲ್ಲ. ಈ ವಯಸ್ಸಿನಲ್ಲಿ, ಹಾರ್ಮೋನುಗಳ ಒತ್ತಡವು ತುಂಬಾ ಹೆಚ್ಚಾಗಿರುತ್ತದೆ, ಮಕ್ಕಳಿಗೆ ದೈಹಿಕ ಆಕರ್ಷಣೆ ಹೆಚ್ಚಾಗುತ್ತೆ, ಅವರ ಸ್ನೇಹಿತರು, ಶಿಕ್ಷಕರು, ಟ್ರೈನರ್, ಪರಿಚಿತರು ಅಥವಾ ಸುತ್ತಮುತ್ತಲಿನ ಯಾರೇ ಆಗಿರಲಿ ಅವರ ಜೊತೆ ಸಲುಗೆ ಬೆಳೆಸಿಕೊಳ್ತಾರೆ. ಹಾಗಾಗಿ ಪೋಷಕರು ಮಕ್ಕಳೊಂದಿಗೆ ಫ್ರೆಂಡ್ಲಿಯಾಗಿದ್ದು, ಲೈಂಗಿಕತೆಯ ಅಪಾಯಗಳು ಮತ್ತು ಸುರಕ್ಷತೆಯ ಬಗ್ಗೆ ಮಕ್ಕಳೊಂದಿಗೆ ಮನಸ್ಸು ಬಿಚ್ಚಿ ಮಾತನಾಡೋದನ್ನು ರೂಢಿ ಮಾಡಿಕೊಳ್ಳಬೇಕು.
ಎಸ್ಟಿಐಗಳು ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳು
ಮಕ್ಕಳಿಗೆ ಸೆಕ್ಸ್ ಎಜುಕೇಶನ್ ನೀಡೋದಕ್ಕೆ ಮುಖ್ಯ ಕಾರಣ ಅಂದ್ರೆ ಎಸ್ಟಿಐಗಳು (STI). ಇತ್ತೀಚಿನ ದಿನಗಳಲ್ಲಿ ಎಸ್ಟಿಐಗಳು ಸಾಮಾನ್ಯವಾಗಿದೆ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಜನರ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಲೈಂಗಿಕವಾಗಿ ಹರಡುವ ರೋಗಗಳನ್ನು ತಪ್ಪಿಸಲು ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.ಪ್ರೌಢಾವಸ್ಥೆಯ ನಂತರ ನಿಮ್ಮ ಮಕ್ಕಳಿಗೆ ಎಸ್ಟಿಐಗಳ ಬಗ್ಗೆ ಅರಿವು ಮೂಡಿಸಿ. ಅದರ ಬಗ್ಗೆ ಅವರಿಗೆ ತಿಳಿಸಿ ಮತ್ತು ಹೀಗೆ ಯಾಕಾಗುತ್ತೆ ಅನ್ನೋದನ್ನು ಅವರಿಗೆ ತಿಳಿಸಿ. ಮಕ್ಕಳಲ್ಲಿ ಮಾಹಿತಿಯ ಕೊರತೆಯಿಂದಾಗಿ, ಅವರು ಅಸುರಕ್ಷಿತ ಸೆಕ್ಸ್ ಮಾಡಬಹುದು. ಇದರಿಂದಾಗಿ ಅವರು ಲೈಂಗಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ.
ಇಮೋಷನಲ್ ಬ್ಲ್ಯಾಕ್ಮೇಲ್ ಗೆ ಬಲಿಯಾಗದಿರುವಂತೆ ನೋಡ್ಕೊಳಿ
ಇತ್ತೀಚಿನ ದಿನಗಳಲ್ಲಿ ಮಕ್ಕಳು ಬಹಳ ಸಣ್ಣ ವಯಸ್ಸಿನಲ್ಲಿಯೇ ಮೇಕ್ ಔಟ್, ಬ್ಲೋ ಜಾಬ್ ಮೊದಲಾದ ಕ್ರಿಯೆಗಳಲ್ಲಿ ತೊಡಗುತ್ತಾರೆ. ಇದೀಗ ಸಾಮಾನ್ಯವಾಗಿದೆ ನಿಜ. ಆದರೆ ಈ ಕ್ರಿಯೆ ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ. ಹಾಗಾಗಿ ಮಕ್ಕಳಿಗೆ ಮುಂಚಿತವಾಗಿಯೇ ಈ ಬಗ್ಗೆ ಮಾಹಿತಿ ನೀಡಿ, ಹಾಗೂ ಇಮೋಷನಲ್ ಬ್ಲ್ಯಾಕ್ ಮೇಲ್ ಗೆ (emotional blackmail) ಬಲಿಯಾಗದಂತೆ ನೋಡಿಕೊಳ್ಳೋದು ಮುಖ್ಯ.