ಹೊಸದಾಗಿ ಮದುವೆಯಾದ ಜೋಡಿಗಳು ಹೇಗಿರಬೇಕು? ಸುಧಾಮೂರ್ತಿ ಈ ಸಲಹೆಗಳು ಪಾಲಿಸಿದರೆ ಜೀವನ ಸುಂದರ!
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆಗೆ ಬಹಳ ಪ್ರಾಮುಖ್ಯತೆ ಇದೆ. ಮುಂದಿನ ಪೀಳಿಗೆಗೆ ದಾರಿ ಮಾಡುವ ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಗಂಡ-ಹೆಂಡತಿ ಇಬ್ಬರೂ ಪ್ರೀತಿಯಿಂದ ಇರಬೇಕು. ಹಾಗಾದರೆ ವೈವಾಹಿಕ ಜೀವನ ಬಲವಾಗಿರಲು ಯಾವ ಸಲಹೆಗಳನ್ನು ಪಾಲಿಸಬೇಕು? ಈ ಬಗ್ಗೆ ಲೇಖಕಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಹಂಚಿಕೊಂಡಿರುವ ಕೆಲವು ಆಸಕ್ತಿಕರ ವಿಷಯಗಳು ನಿಮಗಾಗಿ..

ಸುಧಾ ಮೂರ್ತಿ ಈ ಹೆಸರನ್ನು ಪರಿಚಯಿಸುವ ಅಗತ್ಯವಿಲ್ಲ. ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಅವರ ಪತ್ನಿ, ಸಾವಿರಾರು ಕೋಟಿ ಒಡತಿ, ರಾಜ್ಯಸಭಾ ಸದಸ್ಯೆ, ಸಮಾಜ ಸೇವಕಿ. ಹೀಗೆ ಎಷ್ಟೇ ಸ್ಥಾನಗಳಿದ್ದರೂ ಸುಧಾ ಮೂರ್ತಿ ಸರಳವಾಗಿರುತ್ತಾರೆ. ಜೀವನದ ಬಗ್ಗೆ ಅವರಿಗಿರುವ ತಿಳುವಳಿಕೆ ಅಸಾಧಾರಣವಾದುದು. ಹಲವು ಸಂದರ್ಶನಗಳಲ್ಲಿ ಅವರು ಹೇಳಿರುವ ಮಾತುಗಳು ಯುವಕರಿಗೆ ಮಾದರಿಯಾಗಿವೆ. ಈ ಹಿನ್ನೆಲೆಯಲ್ಲಿ ವಿವಾಹ ವ್ಯವಸ್ಥೆಯ ಬಗ್ಗೆ ಅವರು ಈ ಹಿಂದೆ ಹಲವು ಆಸಕ್ತಿಕರ ವಿಷಯಗಳನ್ನು ತಿಳಿಸಿದ್ದಾರೆ. ಒಳ್ಳೆಯ ಗಂಡ-ಹೆಂಡತಿ ಹೇಗಿರಬೇಕೆಂದು ವಿವರಿಸಿದ್ದಾರೆ.
* ಗಂಡ-ಹೆಂಡತಿ ಅಂದಮೇಲೆ ಜಗಳಗಳು ಸಾಮಾನ್ಯ. ಇದನ್ನು ಒಪ್ಪಿಕೊಳ್ಳಲೇಬೇಕು. ನಿಮ್ಮ ನಡುವೆ ಎಂದಿಗೂ ಜಗಳಗಳೇ ಆಗಿಲ್ಲವೆಂದರೆ ನೀವು ನಿಜವಾದ ಗಂಡ-ಹೆಂಡತಿಯಲ್ಲ ಅಂತ ಅರ್ಥ ಮಾಡಿಕೊಳ್ಳಬೇಕು.
* ಜಗಳವಾದಾಗ ಇಬ್ಬರಲ್ಲಿ ಒಬ್ಬರು ತಣ್ಣಗಾಗಬೇಕು. ಹಾಗಾಗದೆ ನೀನೆಷ್ಟು ಅಂದರೆ ನೀನೆಷ್ಟು ಅಂತ ಹೋದರೆ ಆ ಜಗಳಕ್ಕೆ ಕೊನೆಯೇ ಇರುವುದಿಲ್ಲ. ಅದಕ್ಕೆ ಕೆಲವು ಬಾರಿ ನಮ್ಮ ತಪ್ಪಿಲ್ಲದಿದ್ದರೂ ಸುಮ್ಮನಾಗಬೇಕು, ಅದರಲ್ಲಿ ತಪ್ಪೇನಿಲ್ಲ.
* ಪರಿಪೂರ್ಣ ಜೀವನ ಇರುತ್ತದೆಂದು ಅಂದುಕೊಳ್ಳಲೇಬಾರದು. ಏಕೆಂದರೆ ಅದು ಎಂದಿಗೂ ಇರುವುದಿಲ್ಲ. ಪರ್ಫೆಕ್ಟ್ ಜೋಡಿ ಅಂತ ಯಾವುದೂ ಇರುವುದಿಲ್ಲ. ಒಬ್ಬ ವ್ಯಕ್ತಿಯಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತವೆ. ಆದ್ದರಿಂದ ಒಬ್ಬರಿಗೊಬ್ಬರು ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಂಡು ಮುಂದೆ ಸಾಗಬೇಕು.
* ಗಂಡಸರು ಅಡುಗೆಮನೆಯಲ್ಲಿ ಹೆಂಡತಿಗೆ ಸಹಾಯ ಮಾಡಬೇಕು. ಅದು ಕೇವಲ ಹೆಂಗಸರ ಕೆಲಸವೆಂದು ಭಾವಿಸಬಾರದು. ಕನಿಷ್ಠ ಭಾನುವಾರವಾದರೂ ಹೆಂಡತಿಗೆ ಅಡುಗೆ ಮಾಡಲು ಸಹಾಯ ಮಾಡಿ, ಅದು ಅವರಿಗೆ ಸಂತೋಷ ನೀಡುತ್ತದೆ.
* ವೈವಾಹಿಕ ಜೀವನ ಸುಗಮವಾಗಿ ಸಾಗಬೇಕೆಂದರೆ ತಾಳ್ಮೆ ಇರಬೇಕು. ಕುಟುಂಬವನ್ನು ಒಟ್ಟಿಗೆ ಇಡಲು ಕೆಲವು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು, ಕೆಲವು ಸಂದರ್ಭಗಳಲ್ಲಿ ತಾಳ್ಮೆಯಿಂದಿರಬೇಕೆಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು.
* ಗಂಡ-ಹೆಂಡತಿ ಸ್ನೇಹಿತರಾಗಿದ್ದರೆ ಯಾವುದೇ ಸಮಸ್ಯೆ ಬರುವುದಿಲ್ಲ. ಮನೆಯಲ್ಲಿ ನನ್ನ ಮಾತೇ ವೇದ, ನಾನು ಹೇಳಿದ್ದೇ ಆಗಬೇಕೆಂಬ ಆಲೋಚನೆಗಳಿಂದ ಹೊರಬರಬೇಕು.
* ಸಂಬಂಧಗಳಲ್ಲಿ ಅಹಂ ವಿಷದಂತೆ. ಒಬ್ಬರನ್ನೊಬ್ಬರು ಸಮಾನವಾಗಿ ನೋಡಿಕೊಳ್ಳಬೇಕು. ಅಧಿಕಾರಕ್ಕಾಗಿ ಎಂದಿಗೂ ಪೈಪೋಟಿ ನಡೆಸಬಾರದು. ಯಾರ ಮಾತು ನಡೆಯುತ್ತದೆ ಎನ್ನುವುದಕ್ಕಿಂತ ಕುಟುಂಬ ಸಂತೋಷವಾಗಿರುತ್ತದೆಯೇ ಎಂಬುದಕ್ಕೆ ಪ್ರಾಮುಖ್ಯತೆ ನೀಡಬೇಕು.