ಲವ್ ಮಾಡಿದ್ರೆ ಸಾಲ್ದು, ಬ್ರೇಕಪ್ ಆಗ್ಬಾರ್ದು ಅಂದ್ರೆ ಹೀಗೆಲ್ಲಾ ಮಾಡ್ಬೇಕು !
ಪ್ರೀತಿ ಮಾಡೋದು ತುಂಬಾ ಸುಲಭ. ಆದ್ರೆ ಆ ಪ್ರೀತಿಯನ್ನು ಜೀವನ ಪರ್ಯಂತ ಉಳಿಸೋದು ತುಂಬಾ ಕಷ್ಟ. ಹಾಗೆಂದು ಪ್ರೀತಿಯಲ್ಲಿ ಸಪರೇಟ್ ಆಗಲು ಯಾರೂ ಸಹ ಇಷ್ಟಪಡುವುದಿಲ್ಲ. ನೀವೂ ಪ್ರೀತಿ ಮಾಡ್ತಿದ್ರೆ, ಬ್ರೇಕಪ್ ಆಗ್ಬಾರ್ದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗುವುದು ಅದೃಷ್ಟ. ಪ್ರೀತಿಸದ ವ್ಯಕ್ತಿಗೆ ಬಾಳ ಸಂಗಾತಿಯಾದ್ರೆ ಸ್ವರ್ಗಕ್ಕೆ ಮೂರೇ ಗೇಣು. ಅವರ ಮೊದಲ ಭೇಟಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮೊದಲ ಭೇಟಿಯಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ರೆ ಅವರು ನಮ್ಮ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎಂಬುದನ್ನು ಸ್ವಲ್ಪ ಮಟ್ಟಿಗೆ ತಿಳಿಯಬಹುದು.
ಸಾಮಾಜಿಕ ಜಾಲತಾಣ ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳ ಈ ಯುಗದಲ್ಲಿ, ಪ್ರೀತಿ ಮತ್ತು ಸಂಗಾತಿಯ ವ್ಯಾಖ್ಯಾನ ಸಂಪೂರ್ಣವಾಗಿ ಬದಲಾಗಿದೆ. ಆದರೆ ಇದರ ಮಧ್ಯೆಯೂ ಅನೇಕರು ಸಂಗಾತಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ. ಆದ್ರೆ ಇನ್ನು ಕೆಲವೊಂದು ಪ್ರೀತಿಯಲ್ಲಿ ಆರಂಭ ಚೆನ್ನಾಗಿದ್ದರೂ ಮುಕ್ತಾಯ ವಿಷಾದನೀಯವಾಗಿರುತ್ತದೆ.
ಎಲ್ಲಾ ಪ್ರೀತಿಯೂ ಆರಂಭದಲ್ಲಿ ಚೆನ್ನಾಗಿರುತ್ತದೆ. ಆದರೆ ಕಾಲಪ್ರಮೇಣ ತನ್ನ ಚಾರ್ಮ್‌ನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಬ್ರೇಕಪ್ ಸಹ ಹೆಚ್ಚಾಗುತ್ತದೆ. ಯಾವುದೇ ಸಂಬಂಧ ಪರಿಪೂರ್ಣವಲ್ಲ. ಎಲ್ಲಾ ಸಂಬಂಧಗಳಲ್ಲಿಯೂ ಭಿನ್ನಾಭಿಪ್ರಾಯಗಳಿರುತ್ತವೆ. ಹಾಗೆಂದು ಮನಸ್ತಾಪ ಮೂಡಿದ ತಕ್ಷಣ ದೂರವಾಗುವುದು ಒಳ್ಳೆಯ ನಿರ್ಧಾರವಲ್ಲ. ಇಬ್ಬರೂ ಪರಸ್ಪರರ ನ್ಯೂನತೆಗಳನ್ನು ಸಹಿಸಿಕೊಳ್ಳಲು ಮತ್ತು ಸ್ವಇಚ್ಛೆಯಿಂದ ಒಟ್ಟಿಗೆ ಕೆಲಸ ಮಾಡಲು ಮಾತ್ರ ಕಲಿತರೆ, ನಂತರ ಪ್ರಣಯ ಸಂಬಂಧಗಳು ಉಳಿಯಬಹುದು.
ಯಾರೂ ಸಹ ತಮ್ಮ ಪ್ರೀತಿ ಬ್ರೇಕಪ್‌ನಲ್ಲಿ ಕೊನೆಗೊಳ್ಳಲಿ ಎಂದು ಅಂದುಕೊಳ್ಳುವುದಿಲ್ಲ. ಎಲ್ಲರೂ ಪ್ರೀತಿಯಲ್ಲಿ ಹಾಯಾಗಿರಬೇಕು ಎಂದೇ ಅಂದುಕೊಳ್ಳುತ್ತಾರೆ. ಆದರೂ ಕೆಲವೊಮ್ಮೆ ಪ್ರೀತಿಯಲ್ಲಿ ಬ್ರೇಕಪ್ ಆಗಿಬಿಡುತ್ತದೆ. ಹೀಗಾಗದಂತೆ ಏನು ಮಾಡಬಹುದು. ಪ್ರೀತಿಯ ಸಂಬಂಧ ಚೆನ್ನಾಗಿರಲು, ಅದನ್ನು ಉಳಿಸಿಕೊಳ್ಳಲು ಏನು ಮಾಡಬಹುದು ? ಇಲ್ಲಿದೆ ಕೆಲವೊಂದು ಸಿಂಪಲ್ ಟಿಪ್ಸ್.
ನಿಮ್ಮ ಸಂಬಂಧವನ್ನು ಪವಿತ್ರವೆಂದು ಪರಿಗಣಿಸಿ. ಅತ್ಯಂತ ಕಾಳಜಿ ಮತ್ತು ಗೌರವದಿಂದ ನೋಡಿ. ಹೀಗೆ ಮಾಡಿದಾಗ ನೀವು ಆ ಸಂಬಂಧದಿಂದ ಹೊರ ಬರಲು ಇಷ್ಟಪಡುವುದಿಲ್ಲ. ಕೆಲವೊಬ್ಬರು ಒಂದೊಂದು ರೀತಿಯ ಷರತ್ತನ್ನೊಡ್ಡಿ ಪ್ರೀತಿಸುತ್ತಾರೆ. ಹಾಗೆ ಮಾಡದಿರಿ, ಯಾವುದೇ ಷರತ್ತುಗಳಿಲ್ಲದೆ ನಿಸ್ವಾರ್ಥವಾಗಿ ಪ್ರೀತಿಸಿ. ಯಾರೊಂದಿಗಾದರೂ ಪ್ರೀತಿಯನ್ನು ಕಂಡುಕೊಳ್ಳುವ ಮೊದಲು, ಸ್ವಯಂ-ಇಮೇಜ್ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕಲಿಯಿರಿ ಮತ್ತು ನೀವು ಏನೇ ಆಗಿದ್ದರೂ ನಿಮ್ಮನ್ನು ಒಪ್ಪಿಕೊಳ್ಳಿ
ನಿಮ್ಮ ಹಿಂದಿನ ಸಂಬಂಧದಿಂದ ನೀವು ಇನ್ನೂ ದುಃಖದಲ್ಲಿದ್ದರೆ ಹೊಸ ವ್ಯಕ್ತಿಯನ್ನು ಪ್ರೀತಿಸಲು ಬದ್ಧರಾಗಬೇಡಿ. ಇದರಿಂದ ನೀವು ಸಂಪೂರ್ಣವಾಗಿ ಸಂಬಂಧದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರೀತಿಯಲ್ಲಿ ಮಾತುಗಳು ತುಂಬಾ ಮುಖ್ಯವಾಗುತ್ತದೆ. ಹಾಗೆಂದು ಬನ್ಣ ಬಣ್ಣದ ಮಾತುಗಳನ್ನಾಡುವ ಅಗತ್ಯವಿಲ್ಲ. ಸಹಜವಾಗಿದ್ದು ಸಂಗಾತಿಯ ಮನಸ್ಸನ್ನು ಗೆಲ್ಲಿ. ವೃಥಾ ಭರವಸೆಯ ಮಾತುಗಳನ್ನಾಡಬೇಡಿ.
ತಪ್ಪು ತಿಳುವಳಿಕೆಯನ್ನು ಆಗಿಂದಾಗೆ ಬಗೆಹರಿಸಿಕೊಳ್ಳಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದುವೇ ಸಂಬಂಧಕ್ಕೆ ಮುಳ್ಳಾಗಿಬಿಡಬಹುದು.
ಸಂಬಂಧದಿಂದ ನೀವು ಏನನ್ನು ಪಡೆಯಬಹುದು ಎಂಬುದರ ಮೇಲೆ ಕೇಂದ್ರೀಕರಿಸಬೇಡಿ, ನಿಮ್ಮ ಸಂಗಾತಿಗೆ ನೀವು ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ಯೋಚಿಸಿ.
ಸಂಗಾತಿಯಲ್ಲಿ ಯಾವತ್ತೂ ಸುಳ್ಳು ಹೇಳಬೇಡಿ. ಒಂದು ಸುಳ್ಳು ಇನ್ನೊಂದಕ್ಕೆ ಕಾರಣವಾಗುತ್ತದೆ, ಸುಳ್ಳು ಬಯಲಾದಾಗ ನಂಬಿಕೆಯೇ ಮುರಿದು ಹೋಗುತ್ತದೆ. ನಿಮ್ಮ ಸಂಗಾತಿಯ ಕುಟುಂಬವನ್ನೂ ಗೆಲ್ಲುವ ಪ್ರಯತ್ನ ಮಾಡಿ. ಕ್ಷಮೆ ಕೇಳುವವರಲ್ಲಿ ಮೊದಲಿಗರಾಗಿರಿ. ಯಾರ ತಪ್ಪು ಇರಲಿ, ನಿಮ್ಮ ಸಂಬಂಧದಲ್ಲಿ ನಮ್ರತೆ ಹೆಚ್ಚಿರಲಿ. ತಪ್ಪಾದಾಗ ಕ್ಷಮೆ ಕೇಳಲು ಹಿಂಜರಿಯಬೇಡಿ.