ಹೆಚ್ಚಾಗ್ತಿದೆ ಬೇಬಿಮೂನ್ ಟ್ರೆಂಡ್ ! ಯಾವಾಗ , ಎಲ್ಲಿಗೆ ಹೋಗ್ಬೇಕು ತಿಳಿದ್ಕೊಂಡಿರಿ
ಮಕ್ಕಳಾದ್ಮೇಲೆ ಪಾಲಕರು ಸಿಕ್ಕಾಪಟ್ಟೆ ಬ್ಯುಸಿ. ಪ್ರೆಗ್ನೆನ್ಸಿ ಟೈಂನಲ್ಲಿ ಸಾಕಷ್ಟು ತಯಾರಿ ನಡಿತಿರುತ್ತೆ. ಈ ಮಧ್ಯೆ ಬಿಡುವು ಮಾಡ್ಕೊಂಡು ಈಗಿನ ಕಪಲ್ಸ್ ಟ್ರಿಪ್ ಹೋಗ್ತಿದ್ದಾರೆ. ಅದ್ಯಾಕೆ ಗೊತ್ತಾ?

ಬೇಬಿಮೂನ್ ಎಂದರೇನು?
ಮದುವೆ, ಮಕ್ಕಳೆಲ್ಲ ಜೀವನ ಬಹುದೊಡ್ಡ ಘಟ್ಟಗಳು. ಮಕ್ಕಳಾದ್ಮೇಲೆ ಜವಾಬ್ದಾರಿ ಹೆಚ್ಚಾಗುತ್ತೆ. ಇಲ್ಲಿ ಖುಷಿ ಜೊತೆ ಸವಾಲುಗಳು ಸಾಕಷ್ಟಿರುತ್ವೆ. ಮಕ್ಕಳಾದ್ಮೇಲೆ ಪಾಲಕರಿಗೆ ಒಟ್ಟಿಗೆ ಸಮಯ ಸಿಗೋದು ಕಷ್ಟ. ಅದಕ್ಕಾಗಿ ಹುಟ್ಟಿಕೊಂಡಿದ್ದು ಈ ಬೇಬಿಮೂನ್. ಬೇಬಿಮೂನ್ ಎಂದರೆ ನಿರೀಕ್ಷಿತ ಪೋಷಕರು ತಮ್ಮ ಮಗುವಿನ ಆಗಮನದ ಮೊದಲು ಸ್ಮರಣೀಯ ಕ್ಷಣಗಳನ್ನು ಒಟ್ಟಿಗೆ ಕಳೆಯಲು ತೆಗೆದುಕೊಳ್ಳುವ ಒಂದು ಸಣ್ಣ ಪ್ರವಾಸ. ಇದರ ಉದ್ದೇಶ ಪ್ರಯಾಣ ಮಾಡೋದು ಮಾತ್ರವಲ್ಲ ಮುಂದೆ ಬರುವ ಹೊಸ ಜವಾಬ್ದಾರಿಗಳಿಗೆ ಮಾನಸಿಕವಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳುವುದು, ಸಂಬಂಧವನ್ನು ಬಲಪಡಿಸುವುದು.
ಬೇಬಿಮೂನ್ ಗೆ ಯಾವಾಗ ಹೋಗ್ಬೇಕು?
ನೀವೂ ಪಾಲಕರಾಗ್ತಿದ್ದು, ಅದಕ್ಕೂ ಮುನ್ನ ಬೇಬಿ ಮೂನ್ ಪ್ಲಾನ್ ಮಾಡಿದ್ದರೆ ಸೂಕ್ತ ಸಮಯದ ಬಗ್ಗೆ ತಿಳಿದುಕೊಳ್ಳಿ. ಪ್ರೆಗ್ನೆನ್ಸಿಯ ಎರಡನೇ ತ್ರೈಮಾಸಿಕದಲ್ಲಿ, ಸರಿಸುಮಾರು 14 ಮತ್ತು 28 ನೇ ವಾರಗಳ ನಡುವೆ ಪ್ರಯಾಣವನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಆರಂಭಿಕ ತಿಂಗಳುಗಳ ಆಯಾಸ ಮತ್ತು ವಾಕರಿಕೆ ಕಡಿಮೆಯಾಗುತ್ತದೆ. ದೇಹವು ತುಲನಾತ್ಮಕವಾಗಿ ಆರೋಗ್ಯಕರವಾಗಿರುತ್ತದೆ. ಆದ್ರೆ ಯಾವುದೇ ಪ್ಲಾನ್ ಮಾಡುವ ಮೊದಲು ಡಾಕ್ಟರ್ ಸಲಹೆ ಪಡೆಯೋದು ಸೂಕ್ತ.
ಸ್ಥಳದ ಆಯ್ಕೆ
ಪ್ರೆಗ್ನೆನ್ಸಿ ಟೈಂನಲ್ಲಿ ರಿಸ್ಕ್ ತೆಗೆದುಕೊಳ್ಳೋದು ಅಪಾಯಕಾರಿ. ಪ್ರವಾಸದ ಸ್ಥಳ ಆಯ್ಕೆ ಬಗ್ಗೆಯೂ ನೀವು ವಿಶೇಷ ಗಮನ ಹರಿಸಬೇಕು. ದೀರ್ಘ ಪ್ರಯಾಣ, ನಿರಂತರ ನಡಿಗೆ ಅಥವಾ ವಿಶ್ರಾಂತಿ ಇಲ್ಲದೆ ಪ್ರಯಾಣ ಸೂಕ್ತವಲ್ಲ. ಬೆಟ್ಟ ಹತ್ತುವುದು, ಫಾಲ್ಸ್ ನಲ್ಲಿ ಇಳಿಯುವುದು ಸೇರಿದಂತೆ ಅಪಾಯಕಾರಿ, ಮೋಜಿನ ಆಟಗಳಿಂದ ದೂರ ಇರಬೇಕು. ಶಾಂತಿಯುತ ವಾತಾವರಣ, ನೈಸರ್ಗಿಕ ಸೌಂದರ್ಯ ಮತ್ತು ಅಗತ್ಯವಿದ್ದರೆ ಆಸ್ಪತ್ರೆಗಳು ಅಥವಾ ವೈದ್ಯಕೀಯ ಸೌಲಭ್ಯಗಳಿಗೆ ಸುಲಭವಾಗಿ ಸಿಗಬಹುದಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ದಿನವಿಡಿ ಪ್ರವಾಸದಲ್ಲಿರುವ ಬದಲು ಒಂದು ಎರಡು ಚಟುವಟಿಕೆಯಲ್ಲಿ ಮಾತ್ರ ಪಾಲ್ಗೊಳ್ಳಿ. ಬೆಳಿಗ್ಗೆ ನಿಧಾನವಾಗಿ ಎದ್ದೇಳಿ. ತೆರೆದ ಗಾಳಿಯಲ್ಲಿ ನಡೆಯಿರಿ, ಸುಂದರವಾದ ಸ್ಥಳದಲ್ಲಿ ಕುಳಿತು ಸಮಯ ಕಳೆಯಿರಿ ಅಥವಾ ನಿಮ್ಮ ಸಂಗಾತಿಯೊಂದಿಗೆ ನಿಧಾನವಾಗಿ ಸಂಭಾಷಣೆ ನಡೆಸಿ. ಈ ಸಣ್ಣ ಕ್ಷಣಗಳು ಪ್ರವಾಸವನ್ನು ವಿಶೇಷಗೊಳಿಸುವುದಲ್ಲದೆ ಪರಸ್ಪರ ಇನ್ನಷ್ಟು ಅರ್ಥಮಾಡಿಕೊಂಡು ಹತ್ತಿರವಾಗಲು ಸಹಾಯವಾಗುತ್ತದೆ.
ಇದ್ರ ಬಗ್ಗೆ ಗಮನ ಇರಲಿ
ನೀವು ಹನಿಮೂನ್ ಗೆ ಹೋಗ್ತಿಲ್ಲ. ಪ್ರೆಗ್ನೆನ್ಸಿ ಟೈಂನಲ್ಲಿ ಸೂಕ್ತವಾಗಿರುವ, ಆರಾಮದಾಯಕ ಬಟ್ಟೆ, ಚಪ್ಪಲಿ ಪ್ಯಾಕ್ ಮಾಡಿ. ವೈದ್ಯರು ನೀಡಿರುವ ಔಷಧಿಯನ್ನು ತಪ್ಪದೆ ತೆಗೆದುಕೊಳ್ಳಿ. ಆಗಾಗ ನೀರು ಸೇವನೆ ಮಾಡ್ತಿರಿ. ಜೀವಸತ್ವ, ಪೋಷಕಾಂಶ ಇರುವ ಆಹಾರ ಸೇವಿಸಿ. ಸೋಂಕು ಹರಡುವ, ಸೊಳ್ಳೆ ಹೆಚ್ಚಿರುವ ಪ್ರದೇಶಕ್ಕೆ ಹೋಗ್ಬೇಡಿ. ಆಫೀಸ್ ಕೆಲ್ಸ, ಫೋನ್ ನಿಂದ ದೂರವಿದ್ದು, ಇಬ್ಬರೂ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯಲು ಪ್ರಯತ್ನಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

