- Home
- Life
- Relationship
- ಹಿಂದೂ ಯುವಕ ಬಲವಂತದ ಮತಾಂತರ; ಮುಸ್ಲಿಂ ಹುಡುಗಿ ಪ್ರೀತಿಸುವಾಗ ವಿಶಾಲ್ ಕುಮಾರ್ ಮದುವೆ ನಂತರ ವಿರಾಜ್ ಸಾಬ್!
ಹಿಂದೂ ಯುವಕ ಬಲವಂತದ ಮತಾಂತರ; ಮುಸ್ಲಿಂ ಹುಡುಗಿ ಪ್ರೀತಿಸುವಾಗ ವಿಶಾಲ್ ಕುಮಾರ್ ಮದುವೆ ನಂತರ ವಿರಾಜ್ ಸಾಬ್!
ಹಿಂದೂ ಯುವಕನೊಬ್ಬ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾದ ಬಳಿಕ ಬಲವಂತದ ಮತಾಂತರಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ. ನಿಖಾ ನೆಪದಲ್ಲಿ ವಿಶಾಲ್ ಕುಮಾರನ ಹೆಸರು ಬದಲಾಯಿಸಿ ವಿರಾಜ್ ಸಾಬ್ ಎಂದು ಬದಲಿಸಿ, ಇಸ್ಲಾಂ ಧರ್ಮ ಪಾಲಿಸುವಂತೆ ಒತ್ತಡ ಹೇರಲಾಗಿದೆ.

ಗದಗ (ಜು.17): ಮದುವೆಯಾದ ನಂತರ ಹುಡುಗಿಯ ಹೆಸರು ಸಾಮಾನ್ಯವಾಗಿ ಬದಲಾಗುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಹಿಂದೂ ಯುವಕ ವಿಶಾಲ್ ಕುಮಾರ್ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಬಳಿಕ ವಿರಾಜ್ ಸಾಬ್ ಆಗಿ ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾನೆ.
ಹಿಂದೂ ಯುವತಿಯರನ್ನ ಟಾರ್ಗೆಟ್ ಮಾಡಿ ಲವ್ ಜಿಹಾದ್ ಪ್ರಕರಣಗಳು ನಡೀತಿವೆ ಅಂತಾ ಹಿಂದೂ ಸಂಘಟನೆ ಆರೋಪಿಸುತ್ತಲೇ ಬಂದಿವೆ. ಹಿಂದೂ ಯುವತಿಯರು ಅನ್ಯ ಧರ್ಮದ ಯುವಕರನ್ನ ಮದ್ವೆಯಾದಾಗ ಲವ್ ಜಿಹಾದ್ ಪ್ರಕರಣ ಅಂತಾ ಹಿಂದೂ ಸಂಘಟನೆಗಳು ಹೇಳೋದಕ್ಕೆ ಕೇಳಿರುತ್ತೇವೆ.
ಆದರೆ, ಗದಗ ಜಿಲ್ಲೆಯಲ್ಲಿ ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿಯನ್ನು ನಿಖಾ ಮಾಡಿಸೋ ನೆಪದಲ್ಲಿ ಹಿಂದೂ ಯುವಕನ ಧರ್ಮವನ್ನೇ ಮತಾಂತರ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಮದ್ವೆಯಾದ ಯುವತಿಯ ವಿರುದ್ಧವೇ ಬಲವಂತದ ಮತಾಂತರ ಮಾಡಿಸಿರೋ ಆರೋಪ ಮಾಡಿರೋ ಯುವಕ, ಕಾನೂನು ಕ್ರಮ ತೆಗೆದುಕೊಳ್ಳಿ ಅಂತಾ ಬೇಡಿಕೊಳ್ಳುತ್ತಿದ್ದಾನೆ.
ಮದುವೆ ಮಾಡಿಸಿ ಹಿಂದೂ ಯುವಕನ ಹೆಸರು ಬದಲಾವಣೆ:
ಗದಗ ಬೆಟಗೇರಿಯ ಸೆಟಲ್ಮೆಂಟ್ ಏರಿಯಾದ ವಿಶಾಲಕುಮಾರ್ ವಿಚಿತ್ರ ಲವ್ ಜಿಹಾದ್ ಆರೋಪ ಮಾಡಿದ್ದಾನೆ. ನಗರದ ಕುರಟ್ಟಿಪೇಟೆಯ ತಹಸೀನ್ ಹೊಸಮನಿ ಕುಟುಂದ ವಿರುದ್ಧ ಬಲವಂತವಾಗಿ ಮತಾಂತರ ಮಾಡಿರೋ ಆರೋಪ ಮಾಡಿರೋ ವಿಶಾಲ್, ಮುಸ್ಲಿಂ ಸಂಪ್ರದಾಯ ಫಾಲೋ ಮಾಡದಿದ್ದಕ್ಕೆ ವಿಶಾಲ್‌ಗೆ ಡೈವರ್ಸ್ ನೀಡೋದಕ್ಕೆ ತಹಸೀನ್ ಮುಂದಾಗಿದ್ದಾಳೆ ಅಂತಾ ದೂರಿದ್ದಾರೆ. ಅಂದಹಾಗೆ ವಿಶಾಲ್ ಮತ್ತು ತಹಸೀನ್ ಕಳೆದ ಮೂರು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಾ, ಸುತ್ತಾಡಿದ್ದಾರೆ. ಪ್ರೀತಿ ಪ್ರೇಮಮದ ವಿಷಯವನ್ನ ಮನೆಯವರಿಂದ ಮುಚ್ಚಿಟ್ಟಿದ್ದ ಜೋಡಿ, ಇಬ್ಬರ ಮನೆಯವರಿಗೂ ಹೇಳದೇ 2024ರ ನವೆಂಬರ್ 26 ನೇ ತಾರೀಕು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು.
ಮುಸ್ಲಿಂ ಸಂಪ್ರದಾಯದಂತೆ ಮದುವೆಗೆ ದುಂಬಾಲು:
ಜಿಲ್ಲೆಯ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ಪ್ರಮಾಣಪತ್ರ ನೀಡುವುದಕ್ಕೂ ಮುಂಚಿತವಾಗಿ ನೊಟೀಸ್‌ಗೆ ಅಂಟಿಸಿ, ತಕರಾರು ಇದ್ದರೆ ಸ್ವೀಕಾರ ಮಾಡುತ್ತಾರೆ. ಸೂಚನಾ ಫಲಕದಲ್ಲಿದ್ದ ಸಂದೇಶವನ್ನು ನೋಡಿದ ಅದೇ ಊರಿನ ಗ್ರಾಮಸ್ಥರು ಯುವತಿ ಮನೆಯವರಿಗೆ ಹಿಂದೂ-ಮುಸ್ಲಿಂ ಆಗಿದ್ದರೂ ಧರ್ಮವನ್ನು ಮೀರಿ ಮದುವೆ ಮಾಡಿಕೊಂಡಿದ್ದ ವಿಚಾರವನ್ನು ಹುಡಗಿಯ ಮನೆಯವರಿಗೆ ತಿಳಿಸಿದ್ದಾರೆ. ಆಗ ಯುವತಿ ಮನೆಯವರು ಮುಸ್ಲಿಂ ಸಂಪ್ರದಾಯದಂತೆಯೇ ನಿಮ್ಮ ಹುಡುಗನಿಗೆ ಮಗಳನ್ನು ಮದುವೆ ಮಾಡಿಕೊಡುವುದಾಗಿ ಹಾಗೂ ನಂತರ ನಿಮ್ಮ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳಿ ಎಂದು ಹೇಳಿ ಮನವೊಲಿಕೆ ಮಾಡುತ್ತಾರೆ.
ಇದಕ್ಕೆ ಒಪ್ಪಿದ ವಿಶಾಲ್ ಹಾಗೂ ಆತನ ಮನೆಯವರು ತಹಸೀನ್ ಕುಟುಂಬದ ಮಾತಿಗೆ ಒಪ್ಪಿಕೊಳ್ಳುತ್ತದೆ. ತಹಸೀನ್, ಆಕೆಯ ತಾಯಿ ಬೇಗಂ ಬಾನು, ತಹಸೀನ್ ಸೋದರ ಮಾವ ಇಬ್ರಾಹಿಂ ಖಾನ್ ದಾವಲ್ ಸಾಬ್ ಮುಸ್ಲಿಂ ನಿಖಾಗೆ ಒತ್ತಾಯ ಮಾಡಿದ್ದರು. ಪ್ರೀತಿಸಿದ ಯುವತಿಗಾಗಿ ವಿಶಾಲ್ ಕುಮಾರ್ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾನೆ. ಮಾತುಕತೆಯಂತೆ ವಿಶಾಲ್ ಹಾಗೂ ತಹಸೀನ್‌ಗೆ 2025ರ ಏಪ್ರಿಲ್ 25 ನೇ ತಾರೀಕು ಮುಸ್ಲಿಂ ಸಂಪ್ರದಾಯದಂತೆ ನಿಖಾ ಮಾಡಲಾಗುತ್ತದೆ.
ಮದುವೆಗೂ ಮುಂಚೆ ವಿಶಾಲ್ ಕುಮಾರ್, ನಂತರ ವಿರಾಜ್ ಸಾಬ್:
ಗದಗ ನಗರದ ಮುಳಗುಂದ ನಾಕಾ ಬಳಿ ಇರುವ ಉಮರಬೀನ್ ಕತ್ತಾಬ ಮಸೀದಿಯಲ್ಲಿ ನಿಖಾವನ್ನು ಆಯೋಜನೆ ಮಾಡಲಾಗಿತ್ತು. ಆದರೆ, ಇದೇ ವೇಳೆ ಹಿಂದೂ ಯುವಕ ವಿಶಾಲ್‌ಗೆ ಅರಿವಿಲ್ಲದೇ ನಿಖಾ ನಾಮಾದಲ್ಲಿ ಆತನ ಹೆಸರನ್ನ ವಿರಾಜ್ ಸಾಬ್ ಅಂತಾ ದಾಲಿಸಲಾಗಿದೆಯಂತೆ. ನಿಖಾ ದಫ್ತರ್ ನಲ್ಲಿ ಅಂದರೆ ಇಸ್ಲಾಂ ಸಮುದಾಯದವರ ಮದುವೆ ನೋಂದಣಿ ಪುಸ್ತಕದಲ್ಲಿ (Islam Marriage register) ವಿಶಾಲ್ ಕುಮಾರನ ಹೆಸರನ್ನು ವಿರಾಜ್ ಸಾಬ್ ಎಂದು ಉರ್ದುವಿನಲ್ಲಿ ಬರೆಯಲಾಗಿದೆ.
ದಿನಕ್ಕೆ 5 ಬಾರಿ ನಮಾಜ್:
ಮದುವೆಗೂ ಮುಂಚೆನಿಂದಲೂ 5 ಬಾರಿ ನಮಾಜ್ ಮಾಡಬೇಕು ಜೊತೆಗೆ ಸಮಾಜದ ಜಮಾತ್‌ಗೆ ಹೋಗಲು ತಹಸೀನ್ ಕುಟುಂಬ ಪೀಡಿಸುತ್ತಿದ್ದರಂತೆ. ಈ ಮಧ್ಯೆ ಮದುವೆಯ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿಶಾಲ್ ಮನೆಯವರಿಗೆ ಮದುವೆ ಬಗ್ಗೆ ಮಾಹಿತಿ ಸಿಕ್ಕಿದೆ. ನಂತರ ವಿಶಾಲ್‌ನನ್ನ ಕರೆದು ವಿಚಾರಿಸಿದಾಗ ಮದ್ವೆಯಾಗಿರೋ ವಿಷಯ ಗೊತ್ತಾಗಿದೆ. ವಿಶಾಲ್ ಕುಟುಂಬದವರು ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳೋದಕ್ಕೆ ಮುಂದಾಗಿದ್ದರು. ತಹಸೀನ್ ಕುಟುಂಬವರಿಗೆ ತಿಳಿಸಿ ಜೂನ್ 05 ನೇ ತಾರೀಕು ಮದ್ವೆ ನಿಗದಿ ಮಾಡಿದ್ದರು.
ಇಸ್ಲಾಂ ಧರ್ಮದಂತೆ ಮದುವೆ ಮಾಡಿಕೊಳ್ಳುವ ಮುಂಚೆ ಹುಡಗನ ಮನೆಯವರಿಗೆ ಹಿಂದೂ ಧರ್ಮದಂತೆ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದ ಯುವತಿ ಕುಟುಂಬದವರು, ಹುಡಗನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ನಂತರ ಹಿಂದೂ ಸಂಪ್ರದಾಯದ ಮದುವೆಗೆ ಒಪ್ಪಿಕೊಳ್ಳದೇ ತಕರಾರು ಮಾಡಿದೆ. ಜೊತೆಗೆ, ವಿಶಾಲ್ ಗೆ ಮುಸ್ಲಿಂ ಧರ್ಮವನ್ನೇ ಪಾಲಿಸಿಕೊಂಡು ಹೋಗಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಮುಸ್ಲಿಂ ಮತಾಂತರಕ್ಕೆ ಒಪ್ಪಿದಿದ್ದಕ್ಕೆ, ಇದೀಗ ವಿಶಾಲ್‌ನಿಂದ ತಹಸೀನ್‌ಳನ್ನು ದೂರ ಮಾಡಿದ್ದಾರೆ ಎಂದು ಸ್ವತಃ ವಿಶಾಲ್ ಆರೋಪಿಸಿದ್ದಾರೆ.
ಪ್ರೀತಿ ಮಾಡಿದ ಯುವಕನನ್ನು ಬಲವಂತವಾಗಿ ಮತಾಂತರ ಮಾಡಿರುವ ಕುರಿತು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಬಲವಂತದ ಮತಾಂತರ ಮಾಡಿ, ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಅಂತಾ ಮನವಿ ಮಾಡಿಕೊಳ್ಳಲಾಗಿದೆ. ಬಲವಂತದ ಮತಾಂತರ ನಡೆದಿದೆಯಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.
ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್