ಶ್ರೀರಾಮಸೇನೆಯ ಲವ್ ಜಿಹಾದ್ ಸಹಾಯವಾಣಿಯ ವಾರ್ಷಿಕೋತ್ಸವದಲ್ಲಿ ಪ್ರಮೋದ್ ಮುತಾಲಿಕ್ ಲವ್ ಜಿಹಾದ್ ವಿರುದ್ಧ ಹೋರಾಡಲು ಕರೆ ನೀಡಿದರು ಮತ್ತು ಮಠಗಳಿಗೆ ಹಣ ನೀಡುವ ಬದಲು ಹಿಂದೂ ಪರ ಕೆಲಸ ಮಾಡುವವರಿಗೆ ಸಹಾಯ ಮಾಡುವಂತೆ ಹೇಳಿದರು.
ಹುಬ್ಬಳ್ಳಿ (ಜೂ.1): ಶ್ರೀರಾಮಸೇನೆಯ ಲವ್ ಜಿಹಾದ್ ಸಹಾಯವಾಣಿಯ ಮೊದಲ ವಾರ್ಷಿಕೋತ್ಸವವನ್ನು ಇಂದು ಹುಬ್ಬಳ್ಳಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ವಿರುದ್ಧ ಹಿಂದೂ ಸಮುದಾಯವು ಸಂಘಟಿತವಾಗಿ ಹೋರಾಡಬೇಕೆಂದು ಕರೆ ನೀಡಿದರು.
ಮುಸ್ಲಿಮರು ವ್ಯವಸ್ಥಿತ ತರಬೇತಿ ಪಡೆದು ಲವ್ ಜಿಹಾದ್ ಮಾಡುತ್ತಿದ್ದಾರೆ. ಈ ದೇಶವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವುದು ಅವರ ಉದ್ದೇಶವಾಗಿದೆ ಎಂದು ಮುತಾಲಿಕ್ ಆರೋಪಿಸಿದರು.

ಮಠಗಳಿಗೆ ಹಣ ನೀಡುವುದು ನಿಲ್ಲಿಸಿ:
ಇಂದು ಮಠಾದೀಶರು ಲಕ್ಷಗಟ್ಟಲೆ ಗಳಿಸುತ್ತಿದ್ದಾರೆ. ಹೀಗಾಗಿ ಮಠ-ದೇವಾಲಯಗಳಿಗೆ ಹಣ ನೀಡುವುದನ್ನು ಬಿಟ್ಟು, ಹಿಂದೂ ಪರ ಕೆಲಸ ಮಾಡುವವರಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಕರೆ ನೀಡಿದರು.
ನಾವು ಪ್ರೀತಿಗೆ ವಿರೋಧಿಗಳಲ್ಲ; ಲವ್ ಜಿಹಾದ್ ಸಹಿಸೋಲ್ಲ:
ನಾವು ಪ್ರೀತಿಗೆ ವಿರೋಧಿಗಳಲ್ಲ, ಆದರೆ ಲವ್ ಜಿಹಾದ್‌ನ ಹಿಂದಿನ ಕಪಟತನವನ್ನು ಮಟ್ಟಹಾಕಬೇಕು. ಲವ್ ಜಿಹಾದ್ ತಡೆಯುವವರನ್ನು ಮತ್ತು ಗೋವುಗಳನ್ನು ರಕ್ಷಿಸುವವರನ್ನು ಕೊಲೆ ಮಾಡಲಾಗುತ್ತಿದೆ. ಕೇರಳದಲ್ಲಿ 500ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಕೇರಳದ ಉಗ್ರವಾದಿಗಳು ಇಲ್ಲಿಗೆ ಬಂದು ಕೊಲೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮುತಾಲಿಕ್ ಅವರು, ಎಸ್‌ಡಿಪಿಐ ಪಕ್ಷವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಲವ್ ಜಿಹಾದ್ ಸಹಾಯವಾಣಿ:
ಸಹಾಯವಾಣಿಯ ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿದ ಮುತಾಲಿಕ್, ಕಳೆದ ಒಂದು ವರ್ಷದಲ್ಲಿ ಸಾವಿರಾರು ಕರೆಗಳು ಬಂದಿವೆ. ನಮ್ಮ ಕಾರ್ಯಕರ್ತರು ಎಲ್ಲ ಕರೆಗಳಿಗೂ ಸ್ಪಂದಿಸಿ, ಮಹಿಳೆಯರಿಗೆ ಧೈರ್ಯ ತುಂಬಿದ್ದಾರೆ. ಶ್ರೀರಾಮಸೇನೆಯ ತ್ರಿಶೂಲ ದೀಕ್ಷೆಯಿಂದ ಮಹಿಳೆಯರಿಗೆ ಸಮಾಜಘಾತಕರ ವಿರುದ್ಧ ಹೋರಾಡುವ ಧೈರ್ಯ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಮತ್ತು ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
