AI ಕ್ರಾಂತಿಯಿಂದ ಐಬಿಎಂನಲ್ಲಿ ಬರೋಬ್ಬರಿ 8 ಸಾವಿರ ಉದ್ಯೋಗ ಕಡಿತ! HR ವಿಭಾಗಲ್ಲೇ ಹೆಚ್ಚು!
ತಂತ್ರಜ್ಞಾನ ಕ್ಷೇತ್ರದಲ್ಲಿ AI ಬಳಕೆ ಹೆಚ್ಚುತ್ತಿರುವುದರಿಂದ ಉದ್ಯೋಗ ಕಡಿತ ಉಂಟಾಗುತ್ತಿದೆ. ಐಬಿಎಂ ನಂತಹ ದೊಡ್ಡ ಕಂಪನಿಗಳು AI ಮೂಲಕ ಉತ್ಪಾದಕತೆ ಹೆಚ್ಚಿಸಿಕೊಂಡು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಆದರೆ, ಈ ಬದಲಾವಣೆಯಿಂದ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.

ಕೊರೊನಾ ಮಹಾಮಾರಿಗೆ ವಿಶ್ವದ ಎಲ್ಲ ಕ್ಷೇತ್ರಗಳಂತೆ ತಂತ್ರಜ್ಞಾನ ಜಗತ್ತು ಕೂಡ ದೊಡ್ಡ ಹೊಡೆತವನ್ನು ಅನುಭವಿಸಿತು. ಲಾಕ್‌ಡೌನ್, ಖರ್ಚು ಹೆಚ್ಚಳ ಮತ್ತು ಬದಲಾದ ಉದ್ಯೋಗ ಪರಿಸರಗಳ ಪರಿಣಾಮದಿಂದಾಗಿ, ಹಲವು ಕಂಪನಿಗಳು ವೆಚ್ಚ ಕಡಿತಗೊಳಿಸುವ ಕ್ರಮಗಳತ್ತ ಮುಖಮಾಡಿವೆ. ಇದರ ಮುಖ್ಯ ಭಾಗವೆಂದರೆ – ಉದ್ಯೋಗ ಕಡಿತ. ಇತ್ತೀಚೆಗೆ, ತಂತ್ರಜ್ಞಾನ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವುದು ಆತಂಕದ ವಿಷಯವಾಗಿದೆ. ಹಲವರ ಕನಸಿನ ಉದ್ಯೋಗಗಳು ಕ್ಷಣಮಾತ್ರದಲ್ಲಿ ಕಳೆದುಹೋಗುತ್ತಿದೆ. ಕೃತಕ ಬುದ್ಧಿಮತ್ತೆ (AI) ಎಂಬ ನೂತನ ತಂತ್ರಜ್ಞಾನ ಅದ್ಭುತ ವೇಗದಲ್ಲಿ ಉದ್ಯಮಗಳನ್ನು ಬದಲಾಯಿಸುತ್ತಿದೆ. ಡೇಟಾ ನಿರ್ವಹಣೆ, ಗ್ರಾಹಕ ಸೇವೆ, ಪುನರಾವರ್ತಿತ ಕಾರ್ಯಗಳು ಇವೆಲ್ಲವನ್ನೂ ಈಗ ತಂತ್ರಜ್ಞಾನ ತಾನೇ ಮಾಡಬಲ್ಲಷ್ಟು ಬಲಿಷ್ಠವಾಗಿದೆ. ಇದರ ಪರಿಣಾಮವಾಗಿ, ಮಾನವ ಶ್ರಮದ ಅಗತ್ಯ ಕಡಿಮೆಯಾಗುತ್ತಿದೆ. ಹೆಚ್ಚು ಕಂಪನಿಗಳು ಈಗ ತಮ್ಮ ದಿನನಿತ್ಯದ ಕಾರ್ಯಗಳನ್ನು automation ಮೂಲಕ ನಡೆಸಲು ಪ್ರಾರಂಭಿಸಿವೆ. ಇದರ ಪರಿಣಾಮವೇ ಲೇ ಆಫ್ ಆಗುತ್ತಿದೆ.
2023ರಿಂದ ಐಬಿಎಂ (IBM) ಎಂಬ ವಿಶ್ವದ ದೊಡ್ಡ ತಂತ್ರಜ್ಞಾನ ಕಂಪನಿಯು ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಉದ್ಯೋಗ ನಷ್ಟವು ಬಹುಪಾಲು ಮಾನವ ಸಂಪನ್ಮೂಲ (HR) ವಿಭಾಗದ ಕೆಲಸಗಾರರ ಮೇಲೇ ಬಿದ್ದಿದೆ. ಐಬಿಎಂ, ತನ್ನ HR ವಿಭಾಗದ 200ಕ್ಕೂ ಹೆಚ್ಚು ಕೆಲಸಗಳ ನಿರ್ವಹಣೆಗೆ AskHR ಎಂಬ AI ವ್ಯವಸ್ಥೆಯನ್ನು ಬಳಸಲು ಆರಂಭಿಸಿದೆ. ಇದರಿಂದಾಗಿ, ಇತರ ಕೆಲಸಗಳ ಅಗತ್ಯವೂ ನಿಧಾನವಾಗಿ ಕಡಿಮೆಯಾಗುತ್ತಿದೆ. ಅಂದರೆ, ಹಿಂದೆ 10 ಜನ ಕೆಲಸ ಮಾಡುತ್ತಿದ್ದರೆ, ಈಗ ಒಂದೇ AI ವ್ಯವಸ್ಥೆ ಆ ಕೆಲಸವನ್ನು ಕ್ಷಿಪ್ರವಾಗಿ ನಿಭಾಯಿಸುತ್ತಿದೆ. AskHR ಎಂಬ AI ವ್ಯವಸ್ಥೆ ಬಳಿಕ $3.5 ಬಿಲಿಯನ್ ಉತ್ಪಾದಕತೆ ಹೆಚ್ಚಳವಾಗಿದೆ ಎಂದು ಕಂಪನಿ ವರದಿ ಕೂಡ ನೀಡಿದೆ. AskHR 2024ರಲ್ಲಿ 11.5 ಮಿಲಿಯನ್‌ಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರ ನೀಡಿದೆ, ಹಾಗೂ ಗ್ರಾಹಕರ ತೃಪ್ತಿ ಮಟ್ಟವೂ (-35 NPS ರಿಂದ +74 ಕ್ಕೆ) ಗಮನಾರ್ಹವಾಗಿ ಹೆಚ್ಚಾಗಿದೆ.
ಐಬಿಎಂ ಮಾತ್ರವಲ್ಲ – Google, Amazon, Meta, Microsoft, Spotify ಮುಂತಾದ ದೊಡ್ಡ ಟೆಕ್ ಕಂಪನಿಗಳೂ ಸಹ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಂಡಿವೆ. ಇತ್ತೀಚಿನ ವರದಿಗಳ ಪ್ರಕಾರ, ಈ ವರ್ಷದಲ್ಲಿ ಮಾತ್ರವೇ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಒಟ್ಟಾರೆ 27,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರೆಂಬ ಮಾಹಿತಿ ಇದೆ. ಇದು ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ, AI ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಆಯ್ಕೆಯಾಗಿ ಏರುತ್ತಿದೆ. ಕಂಪನಿಗಳಿಗೆ ಇದು ವೇಗ, ಶ್ರದ್ಧಾ ಮತ್ತು ವೆಚ್ಚಕಡಿತ ಎಂಬ ಮೂರೂ ಲಾಭಗಳನ್ನು ಒದಗಿಸುತ್ತಿದೆ. ಸಣ್ಣ ಕಂಪನಿಗಳು ಕೂಡ ಇತ್ತೀಚೆಗೆ ಯಾವುದೇ ಕಾರಣವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ. Layoffs.FY ವೆಬ್‌ಸೈಟ್ ಪ್ರಕಾರ, 2025 ರಲ್ಲಿ ಟೆಕ್ ವಲಯದ 100 ಕಂಪನಿಗಳು 27,762 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಕಳೆದ ವರ್ಷ, ಟೆಕ್ ವಲಯದ 549 ಕಂಪನಿಗಳು 1,52,472 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. 2023 ರಲ್ಲಿ, 1,193 ಕಂಪನಿಗಳು 2,64,220 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ.
ನೌಕರರ ವಜಾ ಆದ್ರೂ ಕಂಪನಿಯ ಒಟ್ಟು ಉದ್ಯೋಗ ಪ್ರಮಾಣ ಏರಿಕೆಯತ್ತ!
ಉದ್ಯೋಗ ಕಡಿತದಿಂದಾಗಿ ಕಂಪನಿಯ ಒಟ್ಟು ಕೆಲಸದ ಬಲ ಕುಗ್ಗುತ್ತದೆ ಎನ್ನುವುದು ಎಲ್ಲರೂ ಹೇಳುವ ಮಾತು. ಆದರೆ, ಐಬಿಎಂನ ಉದ್ಯೋಗಿ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಇದು ಬೆಳವಣಿಗೆಕರ ಸಂಗತಿ. ಸಿಇಒ ಅರವಿಂದ್ ಕೃಷ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿ, AI ಬಳಸುವುದರಿಂದ ನಮ್ಮ ಕೆಲಸದ ಬಲ ಇತರ ಕ್ಷೇತ್ರಗಳಲ್ಲಿ ಹೂಡಿಕೆಗೆ ಸಾಧ್ಯವಾಯಿತು . ಯಾಂತ್ರೀಕರಣದಿಂದ ಉಳಿತಾಯವನ್ನು ಸಾಫ್ಟ್‌ವೇರ್ ಅಭಿವೃದ್ಧಿ, ಮಾರ್ಕೆಟಿಂಗ್ ಮತ್ತು ಮಾರಾಟದಂತಹ ವ್ಯವಹಾರದ ಇತರ ಭಾಗಗಳಲ್ಲಿ ಹೂಡಿಕೆ ಮಾಡಲಾಗುತ್ತಿರುವುದರಿಂದ ಐಬಿಎಂನಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು.
ಭವಿಷ್ಯದ ಉದ್ಯೋಗಗಳಲ್ಲಿ ತಂತ್ರಜ್ಞಾನ ಒಂದು ಅಡಿಪಾಯವಾಗಲಿದೆ. ಆದರೆ, ಇದರೊಂದಿಗೆ ಉದ್ಯೋಗಿಗಳ ಮರುಕೌಶಲ್ಯ (re-skilling) ಮತ್ತು ಹೊಸ ತರಬೇತಿ ಅವಶ್ಯಕವಾಗುತ್ತದೆ. ಕಂಪನಿಗಳು automation ಬದ್ಧತೆಯೊಂದಿಗೆ ಮಾನವ ಸಂಪನ್ಮೂಲ ವಿಕಾಸಕ್ಕೂ ಗಮನ ಹರಿಸಬೇಕಿದೆ. ಐಬಿಎಂನ ಅನುಭವವು ನಮಗೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ – AI ಎಂದರೆ ಉದ್ಯೋಗ ಕಳೆದುಕೊಳ್ಳುವುದು ಮಾತ್ರವಲ್ಲ, ಅದರಿಂದ ಹೊಸ ಅವಕಾಶಗಳೂ ಹುಟ್ಟುತ್ತವೆ. ಆದರೆ ಅದು ಸಮತೋಲನದೊಂದಿಗೆ, ಮಾನವ ಮತ್ತು ಯಂತ್ರಗಳ ಜ್ಞಾನವನ್ನು ಒಟ್ಟಾಗಿ ಬಳಸುವ ಶಕ್ತಿಯೊಂದಿಗೆ ಸಾಧ್ಯ.