- Home
- News
- Politics
- ಪ್ರಿಯಾಂಕ್ ಖರ್ಗೆಗೆ ಡಿಸಿಎಂ ನೀಡುವಂತೆ ದೇಗುಲದಲ್ಲಿ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ!
ಪ್ರಿಯಾಂಕ್ ಖರ್ಗೆಗೆ ಡಿಸಿಎಂ ನೀಡುವಂತೆ ದೇಗುಲದಲ್ಲಿ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ!
ಪ್ರಿಯಾಂಕ್ ಖರ್ಗೆ ಅವರಿಗೆ ಹೊಸ ಸರ್ಕಾರ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡಲೇಬೇಕು ಎಂದು ಬೀದರ್‌ನಲ್ಲಿ ಅಭಿಮಾನಿಗಳು ದೇಗುಲಗಳಲ್ಲಿ 101 ತೆಂಗಿನಕಾಯಿಗಳನ್ನ ಹೊಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೈಕಮಾಂಡ್‌ಗೆ ಒತ್ತಾಯಿಸಿದರು.

ಈ ಬಾರಿ ಪ್ರಿಯಾಂಕ್ ಖರ್ಗೆ ಸಿಗುತ್ತಾ ಡಿಸಿಎಂ ಪಟ್ಟ?
ರಾಜ್ಯದಲ್ಲಿ ಸಿಎಲ್‌ಪಿ ನಾಯಕನ ಆಯ್ಕೆಯ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ, ಉಪಮುಖ್ಯಮಂತ್ರಿ (ಡಿಸಿಎಂ), ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಹುದ್ದೆಗಳಿಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. ವಿವಿಧ ಬಣಗಳ ನಾಯಕರು ತಮಗೆ ಬೇಕಾದ ಸ್ಥಾನಗಳಿಗಾಗಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಕೆಲ ಪ್ರಭಾವಿ ನಾಯಕರು ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸುತ್ತಿದ್ದರೆ, ಇನ್ನು ಹಲವರು ರಾಜ್ಯದ ಪ್ರಮುಖ ನಾಯಕರಾದ ಸಿದ್ದರಾಮಯ್ಯ(Siddaramaiah) ಮತ್ತು ಡಿ.ಕೆ. ಶಿವಕುಮಾರ್(DK Shivakumar) ಅವರಿಗೆ ದುಂಬಾಲು ಬಿದ್ದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಈ ಬಾರಿ ಪ್ರಿಯಾಂಕ್ ಖರ್ಗೆ(Priyank kharge) ಅವರಿಗೆ ಡಿಸಿಎಂ(DCM) ಹುದ್ದೆ ನೀಡಬೇಕು ಎಂಬ ತೀವ್ರ ಒತ್ತಾಯ ಕೇಳಿಬರುತ್ತಿದೆ.
ವೀರಭದ್ರೇಶ್ವರ ದೇವಸ್ಥಾನದಲ್ಲಿ 101 ಕಾಯಿ ಒಡೆದ ಅಭಿಮಾನಿಗಳು
ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಪಟ್ಟ ಹಾಗೂ ಎಂಎಲ್‌ಸಿ ಚಂದ್ರಶೇಖರ್ ಪಾಟೀಲ್(MLC Chandrashekhar patil) ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಬೀದರ್ ಜಿಲ್ಲೆಯಲ್ಲಿ ಅಭಿಮಾನಿಗಳು ಹಲವು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಗಳನ್ನು ಆರಂಭಿಸಿದ್ದಾರೆ. ಬೀದರ್‌ನ ಹುಮನಾಬಾದ್‌ನಲ್ಲಿರುವ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಬಳಿಕ ಪ್ರಿಯಾಂಕ್ ಖರ್ಗೆ ಡಿಸಿಎಂ ಸಿಗಲೆಂದು ಬರೋಬ್ಬರಿ 101 ತೆಂಗಿನಕಾಯಿಗಳನ್ನು ಒಡೆದು ಈಡೇರಿಕೆಗಾಗಿ ದೇವರಲ್ಲಿ ಮೊರೆ ಇಟ್ಟಿದ್ದಾರೆ.
ರಾಜರಾಜೇಶ್ವರಿ ಸನ್ನಿಧಿ ವಿಶೇಷ ಪೂಜೆ
ಹುಮನಾಬಾದ್‌ನ ಮತ್ತೊಂದು ಪುರಾತನ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲೂ ಅಭಿಮಾನಿಗಳು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ವಿಶೇಷ ಅರ್ಚನೆ ಮಾಡಿಸಿದರು. ಪ್ರಿಯಾಂಕ್ ಖರ್ಗೆ ಮತ್ತು ಚಂದ್ರಶೇಖರ್ ಪಾಟೀಲ್ ಅವರ ಭಾವಚಿತ್ರಗಳನ್ನು ಹಿಡಿದು ದೇವಸ್ಥಾನದ ಆವರಣದಲ್ಲಿ ಜಯಘೋಷಗಳನ್ನು ಕೂಗಲಾಯಿತು. ಇಬ್ಬರೂ ನಾಯಕರು ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಉನ್ನತ ಜವಾಬ್ದಾರಿಗಳನ್ನು ನಿಭಾಯಿಸಲು ಸಮರ್ಥರಾಗಿದ್ದು, ಅವರಿಗೆ ಸೂಕ್ತ ಸ್ಥಾನಮಾನ ಸಿಗಬೇಕೆಂದು ಒತ್ತಾಯಿಸಿದರು.
ಚಂದ್ರಶೇಖರ್ ಪಾಟೀಲ್‌ಗೆ ಸಿಗುತ್ತಾ ಸಚಿವ ಸ್ಥಾನ?
ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಸಹೋದರ ಹಾಗೂ ಪ್ರಸ್ತುತ ಎಂಎಲ್‌ಸಿ ಆಗಿರುವ ಚಂದ್ರಶೇಖರ್ ಪಾಟೀಲ್ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಕಡ್ಡಾಯವಾಗಿ ಸ್ಥಾನ ನೀಡಬೇಕು ಎಂಬ ಒತ್ತಾಯ ಜಿಲ್ಲೆಯಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಎಂಎಲ್‌ಸಿ ಚಂದ್ರಶೇಖರ್ ಪಾಟೀಲ್ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಯುವಕರ, ಪದವೀಧರರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದಿರುವ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಬೆಂಬಲಿಗರು ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ.
ಡಿಸಿಎಂ ಹುದ್ದೆಗೆ ಪ್ರಿಯಾಂಕ್ ಖರ್ಗೆ ಸಮರ್ಥರು
ಮತ್ತೊಂದೆಡೆ, ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ಧಿ ಆಧಾರಿತ ರಾಜಕಾರಣವನ್ನು ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕ್ಷೇತ್ರದಾದ್ಯಂತ ಮತ್ತು ರಾಜ್ಯ ಮಟ್ಟದಲ್ಲಿ ಅವರು ಮಾಡುತ್ತಿರುವ ಜನಪರ ಕೆಲಸಗಳನ್ನು ಗಮನಿಸಿ, ಅವರಿಗೆ ಈ ಬಾರಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯನ್ನು ನೀಡಲೇಬೇಕು ಎಂದು ಬೀದರ್ ನಾಯಕರು ಒತ್ತಾಯಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡುವುದರಿಂದ ಇಡೀ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ರಾಜಕೀಯ ಬಲ ಸಿಗಲಿದ್ದು, ಪಕ್ಷದ ಸಂಘಟನೆಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

