ಸಚಿವ ಸಂಪುಟ ರಚನೆ, ಡಿಸಿಎಂ ಹುದ್ದೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಂತಹ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಸಿದ್ದರಾಮಯ್ಯ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ಈ ಹೈವೋಲ್ಟೇಜ್ ಸಭೆಯಲ್ಲಿ ಹೈಕಮಾಂಡ್ ಜೊತೆ ಕೆಪಿಸಿಸಿ, ಡಿಸಿಎಂ ಆಯ್ಕೆ ಬಗ್ಗೆ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ.
ಬೆಂಗಳೂರು (ಮೇ.31): ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಸಿಎಲ್‌ಪಿ ನಾಯಕನ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ(Siddaramamaiah) ಹಾಗೂ ಡಿಕೆ ಶಿವಕುಮಾರ್(DK Shivakumar) ಮತ್ತೆ ದೆಹಲಿ(Delhi) ಯಾತ್ರೆ ಕೈಗೊಳ್ಳಲಿದ್ದಾರೆ. ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್(Congress highcommand) ನಾಯಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲು ಉಭಯ ನಾಯಕರು ಇಂದು ಸಂಜೆ ಅಥವಾ ನಾಳೆ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟ ಕಸರತ್ತು: ಹಳಬರು ವರ್ಸಸ್ ಹೊಸಬರು?
ಮುಖ್ಯವಾಗಿ ರಾಜ್ಯದ ನೂತನ ಸಚಿವ ಸಂಪುಟ ರಚನೆ ಸಂಬಂಧ ಹೈಕಮಾಂಡ್ ಜೊತೆ ಚರ್ಚಿಸಲು ದೆಹಲಿಗೆ ತೆರಳುತ್ತಿರುವುದರ ಉದ್ದೇಶ ಎನ್ನಲಾಗಿದೆ. ಹೊಸ ಸಂಪುಟದ ಸ್ವರೂಪ ಹೇಗಿರಬೇಕು, ಯಾರ್ಯಾರಿಗೆ ಸಚಿವ ಸ್ಥಾನ ನೀಡಬೇಕು ಈ ಹಿಂದೆ ಸಂಪುಟದಲ್ಲಿದ್ದ ಹಳಬರನ್ನು ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ದೆಹಲಿಯಲ್ಲಿ ಹೈವೋಲ್ಟೇಜ್ ಚರ್ಚೆ ನಡೆಯಲಿದೆ. ಮುಖ್ಯವಾಗಿ ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಸಂಪುಟ ಫೈನಲ್ ಮಾಡಲು ಹೈಕಮಾಂಡ್ ಮುಖಂಡರೊಂದಿಗೆ ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ.
ಡಿಕೆಶಿ ಪಟ್ಟಿಯಲ್ಲಿ ಹೊಸ ಮುಖಗಳಿಗೆ ಮಣೆ, ಸಿದ್ದರಾಮಯ್ಯ ಸಾಥ್
ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ತಮ್ಮ ತಮ್ಮ ಬೆಂಬಲಿಗರ ಪಟ್ಟಿಯನ್ನು ಹೈಕಮಾಂಡ್ ಕೈಗಿಟ್ಟಿದ್ದಾರೆ. ಈ ಬಾರಿ ಡಿಕೆ ಶಿವಕುಮಾರ್ ಸೂಚಿಸುವ ಹೆಚ್ಚಿನ ಮಂದಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗುವ ಸಾಧ್ಯತೆ ದಟ್ಟವಾಗಿದೆ. ಡಿಕೆಶಿ ಅವರು ತಮ್ಮ ಪಟ್ಟಿಯಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜೊತೆಗೆ ಈ ಹಿಂದೆ ತಮ್ಮ ಸಂಪುಟದಲ್ಲಿದ್ದ ಹಲವರ ಹೆಸರುಗಳನ್ನೂ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
ಎಷ್ಟು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಅನ್ನೋದೇ ಸಸ್ಪೆನ್ಸ್
ದೆಹಲಿ ಭೇಟಿ ವೇಳೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ಸೃಷ್ಟಿ ಕುರಿತು ಗಂಭೀರ ಚರ್ಚೆಯಾಗಲಿದೆ. ಮುಂದಿನ ಎರಡು ವರ್ಷಗಳ ಅವಧಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಡಿಸಿಎಂ ಹುದ್ದೆ ಸೃಷ್ಟಿಸಬೇಕೋ ಬೇಡವೋ? ಒಂದು ವೇಳೆ ಸೃಷ್ಟಿಸಿದರೆ ಎಷ್ಟು ಸ್ಥಾನ ಬೇಕು? ಎರಡೋ ಅಥವಾ ನಾಲ್ಕೋ ಎಂಬ ಗೊಂದಲ ಮುಂದುವರಿದಿದೆ. ಈಗಾಗಲೇ ಒಕ್ಕಲಿಗ ಸಮುದಾಯಕ್ಕೆ ಸಿಎಂ ಸ್ಥಾನ ಕಲ್ಪಿಸಿರುವುದರಿಂದ, ಉಳಿದ ಪ್ರಮುಖ ಸಮುದಾಯಗಳನ್ನು ಪರಿಗಣಿಸಿ ಡಿಸಿಎಂ ಸ್ಥಾನ ನೀಡಬೇಕೇ ಅಥವಾ ಯಾವುದೇ ಗೊಂದಲ ಬೇಡವೆಂದು ಸಿಎಂ ಹೊರತುಪಡಿಸಿ ಬೇರೆ ಯಾರಿಗೂ ಡಿಸಿಎಂ ಹುದ್ದೆ ನೀಡಬಾರದೋ ಈ ಬಗ್ಗೆ ಚರ್ಚೆ ಕೂಡ ನಡೆಯಲಿದೆ. ಸದ್ಯಕ್ಕೆ ಯಾವುದೇ ಡಿಸಿಎಂ ಹುದ್ದೆ ಸೃಷ್ಟಿಸದಂತೆ ಡಿಕೆ ಶಿವಕುಮಾರ್ ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಜಾರಕಿಹೊಳಿ, ಪರಮೇಶ್ವರ್ ನಡುವೆ ತೀವ್ರ ಪೈಪೋಟಿ
ಜೂನ್ 3ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ತಮ್ಮ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಹೀಗಾಗಿ, ಮುಂದೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯವಿರುವ ನಾಯಕನಿಗೆ ಕೆಪಿಸಿಸಿ ಸಾರಥ್ಯ ನೀಡುವ ಬಗ್ಗೆ ಹೈಕಮಾಂಡ್ ಚರ್ಚಿಸಲಿದೆ. ಈಗಾಗಲೇ ಸಚಿವ ಸ್ಥಾನದ ಜೊತೆಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನೂ ಹೊರುವುದಾಗಿ ಸತೀಶ್ ಜಾರಕಿಹೊಳಿ ಕಸರತ್ತು ನಡೆಸಿದ್ದಾರೆ. ಇತ್ತ ಗೃಹ ಸಚಿವ ಪರಮೇಶ್ವರ್, ಬಿಕೆ ಹರಿಪ್ರಸಾದ್ ಹೆಸರುಗಳೂ ಮುಂಚೂಣಿಗೆ ಬಂದಿವೆ. ಒಟ್ಟಿನಲ್ಲಿ ತೀವ್ರ ಪೈಪೋಟಿಯಿಂದ ಕೂಡಿದೆ ಹೀಗಾಗಿ ಈ ಬಾರಿ ಕೆಪಿಸಿಸಿ ಪಟ್ಟ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಗಳು
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸಲು ಜಾತಿ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯವನ್ನು ಲೆಕ್ಕ ಹಾಕಿ, ನಾಲ್ಕರಿಂದ ಐದು ಮಂದಿ ಹೊಸ ಕಾರ್ಯಾಧ್ಯಕ್ಷರನ್ನು ನೇಮಿಸುವ ಕುರಿತೂ ಕೂಡ ದೆಹಲಿ ಮಟ್ಟದಲ್ಲಿ ಸೂತ್ರ ಸಿದ್ಧವಾಗುತ್ತಿದೆ.
ಸ್ಪೀಕರ್ ಸ್ಥಾನಕ್ಕೆ ಹಿರಿಯರ ಹುಡುಕಾಟ: ಸಚಿವರಾಗ್ತಾರಾ ಖಾದರ್?
ಪ್ರಸ್ತುತ ಸಭಾಧ್ಯಕ್ಷರಾಗಿರುವ ಯು.ಟಿ. ಖಾದರ್(UT Khader) ಅವರಿಗೆ ಈ ಹಿಂದೆ ಆಗಿರುವ ಒಪ್ಪಂದದಂತೆ ಈ ಬಾರಿ ಸಚಿವ ಸ್ಥಾನ ನೀಡುವ ಕುರಿತು ಮಾತುಕತೆ ನಡೆದಿದೆ. ಒಂದು ವೇಳೆ ಖಾದರ್ ಸಂಪುಟ ಸೇರಿದರೆ, ಸ್ಪೀಕರ್ ಪೀಠದಲ್ಲಿ ಯಾರನ್ನು ಕೂರಿಸಬೇಕೆಂಬ ಚರ್ಚೆ ಶುರುವಾಗಿದೆ. ಸದ್ಯಕ್ಕೆ ಹಿರಿಯ ನಾಯಕರಾದ ಹೆಚ್‌ಕೆ ಪಾಟೀಲ್, ಜಿ.ಪರಮೇಶ್ವರ್, ಆರ್‌ವಿ ದೇಶಪಾಂಡೆ ಹಾಗೂ ಟಿಬಿ ಜಯಚಂದ್ರ ಅವರ ಹೆಸರುಗಳು ಸ್ಪೀಕರ್ ರೇಸ್‌ನಲ್ಲಿ ಕೇಳಿಬರುತ್ತಿದ್ದು, ಉಭಯ ನಾಯಕರ ದೆಹಲಿ ಭೇಟಿಯ ಬಳಿಕ ಎಲ್ಲದಕ್ಕೂ ಅಧಿಕೃತ ತೆರೆ ಬೀಳಲಿದೆ.


