- Home
- News
- Politics
- ಸಿದ್ದರಾಮಯ್ಯ ಕುರ್ಚಿ ಕಿತ್ತುಕೊಳ್ಳದಂತೆ ಗಾಳಿ ಆಂಜನೇಯಗೆ ಉರುಳು ಸೇವೆ: ಸಿಎಂ ಬದಲಾದರೆ ಅಹಿಂದ ಉಗ್ರ ಹೋರಾಟ!
ಸಿದ್ದರಾಮಯ್ಯ ಕುರ್ಚಿ ಕಿತ್ತುಕೊಳ್ಳದಂತೆ ಗಾಳಿ ಆಂಜನೇಯಗೆ ಉರುಳು ಸೇವೆ: ಸಿಎಂ ಬದಲಾದರೆ ಅಹಿಂದ ಉಗ್ರ ಹೋರಾಟ!
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ, ಅಹಿಂದ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಬೀದಿಗಿಳಿದಿವೆ. ಬೆಂಗಳೂರಿನಲ್ಲಿ ಉರುಳು ಸೇವೆ ನಡೆಸುವ ಮೂಲಕ, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಬೇಕು, ನಾಯಕತ್ವ ಬದಲಾದರೆ ಹೋರಾಟ ನಡೆಸುವುದಾಗಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿವೆ.

ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತು ಗೊಂದಲಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ, ಅಹಿಂದ ಸಮುದಾಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ಬೀದಿಗಿಳಿದಿದೆ. ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿ, ಬೆಂಗಳೂರಿನಲ್ಲಿ ಪ್ರತಿಭಟನೆಯ ವಿಭಿನ್ನ ರೂಪವಾಗಿ ಉರುಳು ಸೇವೆ ನಡೆಸುವ ಮೂಲಕ ಅಹಿಂದ ಸಂಘಟನೆಗಳು ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶ ರವಾನಿಸಿವೆ.
ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರಗಳನ್ನು ಹಿಡಿದು, ಅಹಿಂದ ಸಂಘಟನೆಯ ಕಾರ್ಯಕರ್ತರು ದೇವಸ್ಥಾನದ ಸುತ್ತ ಉರುಳು ಸೇವೆ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಹೈಕಮಾಂಡ್‌ಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಸ್ವಾಮಿ ಅವರು, ಸಿದ್ದರಾಮಯ್ಯ ಅವರ ಆಡಳಿತವನ್ನು ಶ್ಲಾಘಿಸಿದರು. ಸಿದ್ದರಾಮಯ್ಯ ಅವರು ಈ ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿ. ಅವರು ಜನಸಾಮಾನ್ಯರ ಪರವಾಗಿ, ಅಹಿಂದ ಸಮುದಾಯದ ಪರವಾಗಿ ಆಡಳಿತ ನಡೆಸಿದವರು ಎಂದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ, ಸಿಎಂ ಪಟ್ಟವನ್ನು ಕಳ್ಳರಿಗೆ, ಕಾಕರಿಗೆ, ದರೋಡೆಕೋರರಿಗೆ ನೀಡುವುದು ಸರಿಯಲ್ಲ' ಎಂದು ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ಹಂಚಿಕೆ ಸೂತ್ರದ ಕುರಿತು ಸ್ಪಷ್ಟನೆ ನೀಡಿದ ಸ್ವಾಮಿ, ಸಿದ್ದರಾಮಯ್ಯ ಅವರು ಮಾತು ಕೊಟ್ಟಿದ್ದರೆ ಇಷ್ಟರಲ್ಲೇ ಖುದ್ದಾಗಿ ಹೇಳಿ ಕುರ್ಚಿ ಬಿಟ್ಟುಕೊಡುತ್ತಿದ್ದರು. ಅವರು ಏನು ಹೇಳುತ್ತಿಲ್ಲವೆಂದರೆ, 'ಸಿದ್ದರಾಮಯ್ಯ ಅವರು ಯಾರಿಗೂ ಮಾತು ಕೊಟ್ಟಿಲ್ಲ ಅಂತಲೇ ಅರ್ಥ' ಎಂದು ಸಮರ್ಥಿಸಿಕೊಂಡರು.
ಅಧಿಕಾರ ಹಂಚಿಕೆಯ ಗೊಂದಲಗಳನ್ನು ಬದಿಗಿಟ್ಟು, ರಾಜ್ಯದ ಹಿತಕ್ಕಾಗಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ರಾಜ್ಯದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಆಗೀದಂತೂ ಸತ್ಯ. ಒಂದು ವೇಳೆ ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡಿದರೆ, ನಾವು ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸುತ್ತೇವೆ' ಎಂದು ಅಹಿಂದ ಸಂಘಟನೆಯ ರಾಜ್ಯಾದ್ಯಾಕ್ಷ ಸ್ವಾಮಿ ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

