ರಾಜ್ಯ ರಾಜಕೀಯದಲ್ಲಿ ನಾಯಕತ್ವದ ಚರ್ಚೆ ತೀವ್ರಗೊಂಡಿದ್ದು, ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮಧ್ಯೆ, ಅಹಿಂದ ಸಚಿವರು ಸಿಎಂ ಜೊತೆ ದಿಢೀರ್ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟುಕೊಡಬಾರದು ಎಂದು ಸಲಹೆ ನೀಡಿದ್ದಾರೆ. 

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆರಂಭವಾಗಿರುವ ನಾಯಕತ್ವ ಚರ್ಚೆ ಮತ್ತೆ ತೀವ್ರಗೊಂಡಿರುವ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಮತ್ತು ಅಹಿಂದ ಸಚಿವರ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಕರೆದರೆ ಹೋಗ್ತೀನಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯ ಅನೇಕ ಬಾರಿ ಒಂದೇ ಉತ್ತರ ನೀಡಿ ಸ್ಪಷ್ಟಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಕರೆ ಮಾಡಿದ್ದಾರೆಯಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಸಿಎಂ ಸಿದ್ದರಾಮಯ್ಯ ಲೆಟ್ ಹಿಮ್ ಕಾಲ್… ಹೈಕಮಾಂಡ್ ಕರೆದರೆ ಹೋಗ್ತೀನಿ ಎಂದರು. ಪತ್ರಕರ್ತರು ಮತ್ತೆ ಖರ್ಗೆ ಕರೆದರೆ ಹೋಗ್ತೀರಾ ಅಂತ ಕೇಳಿದರೂ, ಸಿಎಂ ಅದೇ ಉತ್ತರ ನೀಡಿ “ಕರೆದರೆ ಹೋಗ್ತೀನಿ… ಕರೆದರೆ ಹೋಗ್ತೀನಿ… ಕರೆದರೆ ಹೋಗ್ತೀನಿ. “ನೀವ್ ಕೇಳಿದ್ದು, ಹೈಕಮಾಂಡ್ ಕರೆದರೆ ಹೋಗ್ತೀರಾ ಅಂತ. ನಾನು ಕರೆದರೆ ಹೋಗ್ತೀನಿ ಅಂತ ಹೇಳಿದ್ದೀನಿ. ಅದನ್ನೇ ಪದೇಪದೇ ಕೇಳಿದ್ರೆ ಹೇಗೆ? ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

ಅಹಿಂದ ಸಚಿವರ ದಿಢೀರ್ ಸಿಎಂ ಭೇಟಿ, ಸಭೆ!

ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಮಂಗಳವಾರ ಅಹಿಂದ ಸಚಿವರ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಹೆಚ್.ಸಿ. ಮಹದೇವಪ್ಪ, ಡಾ. ಜಿ. ಪರಮೇಶ್ವರ್, ಮಾಜಿ ಸಚಿವ ಕೆ.ಎನ್. ರಾಜಣ್ಣ, ಇವರ ಜೊತೆಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಹಲವಾರು ಶಾಸಕರೂ ಉಪಸ್ಥಿತರಿದ್ದರು. ನಿನ್ನೆ ಕೂಡ ಸಿಎಂ ಪರವಾಗಿ ನಿಲ್ಲುವ ಹೇಳಿಕೆ ನೀಡಿದ್ದ ಸತೀಶ್ ಜಾರಕಿಹೊಳಿ ಇಂದು ಕಾವೇರಿ ನಿವಾಸಕ್ಕೆ ಭೇಟಿ ನೀಡಿರುವುದು ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಹೈವೊಲ್ಟೇಜ್ ಸಭೆ

ಸಿಎಂ ನಿವಾಸದಲ್ಲಿ ನಡೆದ ಈ ಸಭೆ, ಮುಂದಿನ ದೆಹಲಿ ಭೇಟಿ ಮತ್ತು ಸಾಧ್ಯವಿರುವ ನಾಯಕತ್ವ ಚರ್ಚೆ ಹಿನ್ನೆಲೆಯಲ್ಲಿ ನಡೆದ ಮಹತ್ವದ ಮಾತುಕತೆ ಎಂದು ಪಕ್ಷದೊಳಗೆ ಚರ್ಚೆ ಆರಂಭವಾಗಿದೆ. ಸಭೆಯಲ್ಲಿ ಮುಖ್ಯವಾಗಿ, ಹಿಂದುಳಿದ ವರ್ಗದ ಸಚಿವರು, ದಲಿತ ಸಮುದಾಯದ ಸಚಿವರು, ಅಹಿಂದ ಗುಂಪಿನ ನಾಯಕರರೊಂದಿಗೆ ಸಿಎಂ ಚರ್ಚೆ ನಡೆಸಿದರು. ಸಭೆ ನಂತರ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾಗೆ ತೆರಳಿದರು. ಈ ಸಭೆಯಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗಿದೆ ಎನ್ನಲಾಗುತ್ತಿದೆ. ಅಧಿಕಾರ ಬಿಟ್ಟುಕೊಡಬೇಡಿ ಎಂದು ಸಿಎಂಗೆ ಸಚಿವರು ಸಲಹೆ ನೀಡಿದ್ದಾರೆನ್ನಲಾಗಿದೆ.

ಸಚಿವರಿಂದ ಸಿಎಂಗೆ “ಅಧಿಕಾರ ಬಿಟ್ಟುಕೊಡಬೇಡಿ” ಸಲಹೆ

ಸಭೆಯಲ್ಲಿ ಸಚಿವರು ಸಿಎಂಗೆ ಹಲವು ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆಂದು ಮೂಲಗಳು ಹೇಳಿವೆ, ಸಚಿವರ ಈ ನೇರ ಮತ್ತು ಸ್ಪಷ್ಟ ಮಾತುಗಳು, ರಾಜ್ಯ ಕಾಂಗ್ರೆಸ್‌ನಲ್ಲಿ ಅಂತರಂಗದಲ್ಲಿ ತೀವ್ರ ಚಟುವಟಿಕೆ ನಡೆಯುತ್ತಿರುವುದಕ್ಕೆ ಸೂಚನೆ ನೀಡುತ್ತಿವೆ.

  • ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಹೈಕಮಾಂಡ್‌ಗೆ ನೇರವಾಗಿ ತಿಳಿಸಬೇಕು.
  • ಶಾಸಕರ ಶಕ್ತಿ ಪ್ರದರ್ಶನವನ್ನು ನೀವು ಮುನ್ನಡೆಸಬೇಕು.
  • ದೆಹಲಿ ಸಭೆಯಲ್ಲಿ ನಮ್ಮ ವಾದವನ್ನು ರಾಹುಲ್ ಗಾಂಧಿಯವರ ಮುಂದೆ ದೃಢವಾಗಿ ಮಂಡಿಸಬೇಕು.
  • ಅಗತ್ಯವಿದ್ದರೆ ‘ದಲಿತ ಕಾರ್ಡ್’ ಬಳಸುವತ್ತ ಗಮನಹರಿಸಬೇಕು.
  • ಅಧಿಕಾರ ಬಿಟ್ಟುಕೊಡಬಾರದು ಎಂಬ ಅಭಿಪ್ರಾಯ ಬಹುತೇಕ ಸಚಿವರಿಂದ ವ್ಯಕ್ತವಾಗಿದೆ

ಮುಂದೇನಾಗಬಹುದು?

  • ದೆಹಲಿಯಲ್ಲಿ ನಡೆಯಲಿರುವ ಸಭೆ, ರಾಜ್ಯ ರಾಜಕೀಯದ ಭವಿಷ್ಯಕ್ಕೆ ಮಹತ್ವಕೊಡುವುದರಲ್ಲಿ ಸಂಶಯವಿಲ್ಲ.
  • ಸಿಎಂ ಸಿದ್ದರಾಮಯ್ಯ ಸ್ಥಾನಕ್ಕೆ ಕುತ್ತು ಬರಲಿದೆಯಾ?
  • ಡಿಕೆ ಶಿವಕುಮಾರ್ ಬೆಂಬಲಿಗರ ಒತ್ತಡ ಮುಂದುವರೆಯುತ್ತದೆಯಾ?
  • ಅಹಿಂದ ಸಚಿವರ ಗುಂಪಿನ ಈ ದಿಢೀರ್ ಚಟುವಟಿಕೆ ಯಾವ ಸಂದೇಶವನ್ನು ನೀಡುತ್ತದೆ?

ಮುಂದಿನ ದಿನಗಳಲ್ಲಿ ಕರ್ನಾಟಕ ರಾಜಕೀಯದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.