ಅಮೆರಿಕದ ಪೌರತ್ವದಿಂದ ಸಂಜಯ್ ಕಪೂರ್ ಪಾರ್ಥೀವ ಶರೀರ ಭಾರತಕ್ಕೆ ತರಲು ಕಾನೂನು ತೊಡಕು!
ಉದ್ಯಮಿ ಸಂಜಯ್ ಕಪೂರ್ ಪೋಲೋ ಪಂದ್ಯದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೇನುನೊಣ ನುಂಗಿದ್ದೇ ಸಾವಿಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಅಮೆರಿಕದ ಪೌರತ್ವ ಹೊಂದಿರುವ ಕಾರಣ ಅಂತ್ಯಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ.

ಇಂಗ್ಲೆಂಡ್‌ನಲ್ಲಿ ನಡೆದ ಪೋಲೋ ಪಂದ್ಯಾವಳಿಯ ವೇಳೆ ಉದ್ಯಮಿ ಸಂಜಯ್ ಕಪೂರ್ ಅವರು ಹೃದಯಾಘಾತವಾಗಿ ಮೃತಪಟ್ಟಿದ್ದು, ಉದ್ಯಮ ಕ್ಷೇತ್ರ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ಶಾಕಿಂಗ್ ಸುದ್ದಿಯಾಗಿದೆ. ಇದೀಗ ಅವರು ಅಮೆರಿಕದ ಪೌರತ್ವ ಪಡೆದಿರುವುದರಿಂದ ಅಂತ್ಯಕ್ರಿಯೆಗಳು ವಿಳಂಬವಾಗಬಹುದು ಎನ್ನಲಾಗಿದೆ. ಏಕೆಂದರೆ ಅವರ ಅಂತ್ಯಕ್ರಿಯೆಯನ್ನು ತಾಯಿನಾಡದ ಭಾರತದಲ್ಲಿ ಮಾಡಲು ಕುಟುಂಬ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗುತ್ತದೆ ಎಂದು ತಿಳಿದುಬಂದಿದೆ. ಇಂಟರ್ನೆಟ್ ದಾಖಲಾಗಿರುವ ಕೆಲವು ಮಾಹಿತಿಗಳ ಪ್ರಕಾರ, ಪ್ರಜ್ಞೆ ತಪ್ಪುವ ಮೊದಲು ಅವರು "ನಾನು ಏನನ್ನೋ ನುಂಗಿದ್ದೇನೆ" ಎಂದು ಹೇಳಿದ್ದು, ಆಕಸ್ಮಿಕವಾಗಿ ಜೇನುನೊಣವನ್ನು ನುಂಗಿರುವ ಶಂಕೆ ವ್ಯಕ್ತವಾಗಿದೆ. ಇದೇ ಅವರು ಹೃದಯಾಘಾತಕ್ಕೀಡಾಗುವ ಅಸಾಮಾನ್ಯ ಕಾರಣವಾಗಿರಬಹುದು ಎನ್ನಲಾಗಿದೆ.
ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದೆ. ಆದರೆ ಅವರು ಅಮೆರಿಕದ ಪೌರತ್ವ ಹೊಂದಿದ್ದ ಕಾರಣ, ಮತ್ತು ಲಂಡನ್‌ನಲ್ಲಿ ಸಾವಿಗೀಡಾದ ಹಿನ್ನೆಲೆಯಲ್ಲಿ, ಅವರ ಶವವನ್ನು ಭಾರತಕ್ಕೆ ತರುವ ಕಾನೂನು ಪ್ರಕ್ರಿಯೆ ಸ್ವಲ್ಪ ಜಟಿಲವಾಗಿದೆ. ಈ ಕಾರಣದಿಂದ ಅಂತಿಮ ವಿಧಿವಿಧಾನಗಳಲ್ಲಿ ವಿಳಂಬ ಸಂಭವಿಸಬಹುದು ಎಂದು ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ. ಸಂಜಯ್ ಕಪೂರ್ ಅವರ ಶಾಕಿಂಗ್ ನಿಧನದ ಸುದ್ದಿ ಅವರು ಸಂಬಂಧ ಹೊಂದಿದ್ದ ವ್ಯಾಪಾರ ಹಾಗೂ ಸಾಮಾಜಿಕ ವಲಯಗಳಲ್ಲಿಂದು ಆಘಾತ ಉಂಟುಮಾಡಿದೆ. ಭಾರತದಲ್ಲಿ ಆಟೋ ಕಾಂಪೊನೆಂಟ್ ತಯಾರಿಕಾ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆವಾದ ಸೋನಾ ಕಾಮ್‌ಸ್ಟಾರ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದ ಅವರು, ಪೋಲೋ ಮತ್ತು ಮೋಟಾರ್‌ಸ್ಪೋರ್ಟ್ಸ್‌ಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಪ್ರಸಿದ್ಧ ಕ್ರೀಡಾರ್ಥಿಯಾಗಿ ಹೆಸರಾಗಿದ್ದರು.
ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಪಂದ್ಯಾವಳಿಯ ಸಂದರ್ಭದಲ್ಲಿ ಹಾಜರಿದ್ದವರು ಸಂಜಯ್ ಕಪೂರ್ ಅವರು ಹೃದಯಾಘಾತಕ್ಕೆ ಒಳಗಾಗುವ ಮೊದಲು "ನಾನು ಏನನ್ನಾದರೂ ನುಂಗಿದ್ದೇನೆ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ ಎಂಬುದನ್ನು ನೆನಪಿಸಿದ್ದಾರೆ. ಜನಪ್ರಿಯ ವ್ಯಾಪಾರ ತಜ್ಞ ಸುಹೇಲ್ ಸೇಠ್ ಕೂಡ ANI ಗೆ ನೀಡಿದ ಹೇಳಿಕೆಯಲ್ಲಿ, "ಪೋಲೋ ಪಂದ್ಯಾವಳಿಯ ವೇಳೆಯಲ್ಲಿ ಅವರು ಜೇನುನೊಣವನ್ನು ನುಂಗಿದ ನಂತರ ಹೃದಯಾಘಾತದಿಂದ ಮೃತರಾಗಿದ್ದಾರೆ" ಎಂದು ತಿಳಿಸಿದ್ದಾರೆ. ಈ ಮಾಹಿತಿಯಿಂದ, ಅವರು ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರ ಬಾಯಿಗೆ ಜೇನುನೊಣ ಹಾರಿಹೋಗಿರಬಹುದು ಎಂಬ ಅನೇಕರ ನಂಬಿಕೆ ನಿಜ ಎನಿಸಿದಂತಿದೆ.
ಪ್ರಸ್ತುತ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ದಾಖಲೆಗಳ ಕೆಲಸ ಪೂರ್ಣಗೊಂಡ ನಂತರ, ಅಂತಿಮ ವಿಧಿವಿಧಾನಗಳಿಗಾಗಿ ಶವವನ್ನು ಭಾರತಕ್ಕೆ ತರಲಾಗುವುದು" ಎಂದು ಸುಂಜಯ್ ಅವರ ಮಾವ ಅಶೋಕ್ ಸಚ್‌ದೇವ್ ಹೇಳಿದ್ದಾರೆ. ಅದಾಗಲೇ ಎರಡು ಮದುವೆಯಾಗಿದ್ದ ಸಂಜಯ್ ವಿಚ್ಚೇದನದ ಬಳಿಕ ಮೂರನೇ ಪತ್ನಿಯಾಗಿ ಉದ್ಯಮಿ ಪ್ರಿಯಾ ಸಚ್‌ದೇವ್ ಅವರನ್ನು ಮದುವೆಯಾದರು. ದೆಹಲಿಯಲ್ಲಿ ಇವರ ಮದುವೆ ನಡೆದಿತ್ತು ಇದಕ್ಕೂ ಮುನ್ನ ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಈ ದಂಪತಿಗೆ ಅಜಾರಿಯಾಸ್ ಕಪೂರ್ ಎಂಬ ಮಗನಿದ್ದಾನೆ. ಪ್ರಿಯಾಗೆ ಹಿಂದಿನ ಮದುವೆಯಿಂದ ಒಬ್ಬ ಮಗಳೂ ಇದ್ದಾಳೆ.
ಕರಿಷ್ಮಾ ಕಪೂರ್ ಅವರನ್ನು ವಿವಾಹವಾಗುವ ಮೊದಲು, ಸಂಜಯ್ ಕಪೂರ್ ಫ್ಯಾಷನ್ ಡಿಸೈನರ್ ನಂದಿತಾ ಮಹ್ತಾನಿ ಅವರನ್ನು ವಿವಾಹವಾಗಿದ್ದರು. ನಂದಿತಾ ಮಹ್ತಾನಿ ರಣಬೀರ್ ಕಪೂರ್ ಅವರೊಂದಿಗಿನ ಹಿಂದಿನ ಸಂಬಂಧ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಸ್ಟೈಲಿಸ್ಟ್ ಆಗಿ ಹೆಸರುವಾಸಿಯಾಗಿದ್ದಾರೆ. ಕರಿಷ್ಮಾ ಕಪೂರ್ ಎರಡನೇ ಪತ್ನಿಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹೀಗೆ ಸಂಜಯ್ ಒಟ್ಟು ಮೂರು ಮಕ್ಕಳ ತಂದೆಯಾಗಿದ್ದಾರೆ.