ಪ್ರಖ್ಯಾತ ಭಾರತೀಯ ಆಟೋಮೊಟಿವ್ ಉದ್ಯಮಿ ಸಂಜಯ್ ಕಪೂರ್ ಲಂಡನ್‌ನಲ್ಲಿ ಜೇನುನೊಣ ಕಡಿತದಿಂದ ಹೃದಯಾಘಾತದಿಂದಾಗಿ ನಿಧನರಾದರು. ಪೋಲೋ ಪಂದ್ಯದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ತುರ್ತು ಚಿಕಿತ್ಸೆ ನೀಡಿದರೂ ಪ್ರಾಣ ಉಳಿಸಲಾಗಲಿಲ್ಲ.
ಪ್ರಖ್ಯಾತ ಭಾರತೀಯ ಆಟೋಮೊಟಿವ್ ಉದ್ಯಮಿ ಹಾಗೂ ಸೋನಾ ಕಾಮ್‌ಸ್ಟಾರ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಶ್ರೀ ಸಂಜಯ್ ಕಪೂರ್ ಗುರುವಾರ ಲಂಡನ್‌ನಲ್ಲಿ ನಿಧನರಾದರು. ಇಂಗ್ಲೆಂಡ್‌ನಲ್ಲಿ ನಡೆದ ಪೋಲೋ ಪಂದ್ಯಾವಳಿಯ ವೇಳೆ ಆಕಸ್ಮಿಕವಾಗಿ ಜೇನುನೊಣ ಕಚ್ಚಿದ ಕಾರಣದಿಂದ ಉಂಟಾದ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ. ವೈದ್ಯಕೀಯ ಸಹಾಯ ತಕ್ಷಣಕ್ಕೆ ಸಿಕ್ಕರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ತಿಳಿದುಬಂದಿದೆ. ಬಳಿಕ ಪೊಲೋ ಆಟವನ್ನು ಮೊಟಕುಗೊಳಿಸಲಾಯ್ತು . ಜೇನು ನೊಣ ಕುಟುಕಿದ ಬಳಿಕ ಶ್ವಾಸಕೋಶದ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಾಗಿ ಅವರಿಗೆ ಹೃದಯ ಸ್ತಂಭನವಾಗಿದೆ ಎನ್ನಲಾಗಿದೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಜನರಲ್ಲಿರುವ ಕುತೂಹಲವನ್ನು ಪ್ರತಿಬಿಂಬಿಸುವಂತೆ ಕಳೆದ 14 ಗಂಟೆಗಳಲ್ಲಿ ಸಂಜಯ್ ಕಪೂರ್ ಗಾಗಿ 2 ಲಕ್ಷಕ್ಕೂ ಹೆಚ್ಚು ಹುಡುಕಾಟಗಳು ಗೂಗಲ್‌ನಲ್ಲಿ ದಾಖಲಾಗಿವೆ. ಉದ್ಯಮ ಸಲಹೆಗಾರ ಸುಹೇಲ್ ಸೇಠ್ ಅವರು ANI ಗೆ ಈ ವಿಷಾದಕರ ಮಾಹಿತಿಯನ್ನು ದೃಢಪಡಿಸಿದ್ದಾರೆ.
ಕಪೂರ್ ಪಿಎ ಸ್ಪಷ್ಟನೆ
ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಆಟೋ ಕಾಂಪೊನೆಂಟ್ಸ್ ಕಂಪನಿ ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷ ಕಪೂರ್ ವ್ಯಾಪಾರ ಮತ್ತು ಪೋಲೋ ವಲಯಗಳಲ್ಲಿ ಚಿರಪರಿಚಿತ ಹೆಸರು. ಪೋಲೊ ಪಂದ್ಯದ ಮಧ್ಯದಲ್ಲಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ಬಳಿಕ ಒಂದು ಜೇನು ನೊಣ ಅವರ ಸಾವಿಗೆ ಮೂಲಕ ಕಾರಣ ಎಂಬುದು ಬಯಲಾಗಿದೆ. ಇಂಗ್ಲೆಂಡ್‌ನಲ್ಲಿ ಪೋಲೊ ಪಂದ್ಯದ ಸಮಯದಲ್ಲಿ ಜೇನುನೊಣವನ್ನು ನುಂಗಿದ ನಂತರ ಸಂಜಯ್ ಹೃದಯಾಘಾತದಿಂದ ನಿಧನರಾದರು ಎಂದು ಅವರ ವ್ಯವಹಾರ ಸಲಹೆಗಾರ ಸುಹೇಲ್ ಸೇಥ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ಉಲ್ಲೇಖಿಸಿ ವರದಿ ಮಾಡಿದೆ.
53 ವರ್ಷದ ಸಂಜಯ್ ಕಪೂರ್ ಪೋಲೋ ಆಟ ಆಡುತ್ತಿದ್ದರು. ಪಂದ್ಯದ ಸಮಯದಲ್ಲಿ, ಸಂಜಯ್ ಆಕಸ್ಮಿಕವಾಗಿ ಜೇನುನೊಣವನ್ನು ನುಂಗಿದರು. ಆ ಕೀಟವು ಅವರ ಗಂಟಲಿನಲ್ಲಿ ಸಿಲುಕಿಕೊಂಡಿತು, ಇದರಿಂದಾಗಿ ಅವರಿಗೆ ತೀವ್ರ ನೋವು, ಕಿರಿಕಿರಿ ಉಂಟಾಯಿತು, ಇದರಿಂದ ಉಸಿರಾಟದ ಸಮಸ್ಯೆಯಾಯಿತು. ಅವರ ವ್ಯಾಪಾರ ಸಲಹೆಗಾರ ಸುಹೇಲ್ ಸೇಠ್ ಅವರು ಸಂಜಯ್ ಅವರ ಸಾವನ್ನು ದೃಢಪಡಿಸಿದ್ದಾರೆಂದು ಎಂದು ANI ವರದಿ ಮಾಡಿದೆ.
ಸಂಜಯ್ ಕಪೂರ್ ಭಾರತದ ಪ್ರಮುಖ ವ್ಯಾಪಾರ ಕುಟುಂಬವೊಂದರಲ್ಲಿ ಜನಿಸಿದರು. ಆಟೋ ಬಿಡಿಭಾಗಗಳ ಉದ್ಯಮದಲ್ಲಿ ಪ್ರಮುಖ ಹೆಸರಾದ ಸೋನಾ ಗ್ರೂಪ್‌ನ ಸಂಸ್ಥಾಪಕಿ ರಾಣಿ ಕಪೂರ್ ಮತ್ತು ಸುರಿಂದರ್ ಕಪೂರ್ ಅವರ ಪುತ್ರ. ಚಿಕ್ಕ ವಯಸ್ಸಿನಿಂದಲೇ ಸಂಜಯ್ ವ್ಯವಹಾರದ ಜಗತ್ತಿಗೆ ಒಗ್ಗಿಕೊಂಡರು ಮತ್ತು ಅವರ ತಂದೆಯ ಹೆಜ್ಜೆಗಳನ್ನು ಅನುಸರಿಸಿ ಉದ್ಯಮ ಜಗತ್ತಿನಲ್ಲೇ ಮುಂದುವರೆದರು. ಭಾರತ, ಯುಕೆ ಮತ್ತು ಯುಎಸ್‌ನಲ್ಲಿಅಧ್ಯಯನ ಮಾಡಿದ್ದ ಅವರು, ಉತ್ಸಾಹಭರಿತ ಉದ್ಯಮಿ ಮಾತ್ರವಲ್ಲದೆ, ಉದ್ಯಮಿಗಳ ಜಾಗತಿಕ ಸಂಘಟನೆಯ ಮೊದಲ ಭಾರತೀಯ ಅಧ್ಯಕ್ಷರಾಗಿದ್ದರು.
ಏನಿದು ಪೊಲೋ?
ಫಿಟ್ನೆಸ್, ಕ್ರೀಡೆ ಹಾಗೂ ನಿರಂತರ ಶಿಕ್ಷಣದತ್ತ ಬದ್ಧತೆಯುಳ್ಳ ವ್ಯಕ್ತಿಯಾಗಿದ್ದ ಶ್ರೀ ಕಪೂರ್, ಪೋಲೋ ಕ್ರೀಡೆಯು ಎಲ್ಲರಿಗೂ ಲಭ್ಯವಾಗುವಂತಾಗಬೇಕೆಂಬ ದೃಷ್ಟಿಕೋನದಿಂದ ಕಾರ್ಯನಿರ್ವಹಿಸುತ್ತಿದ್ದರು. ಸಂಜಯ್ ಕಪೂರ್ ಪೋಲೊ ಕ್ರೀಡೆಯ ಪ್ರಸಿದ್ಧ ವ್ಯಕ್ತಿ. ಅವರಿಗೆ ಪೊಲೋ ಎಂದರೆ ಎಲ್ಲಿಲ್ಲದ ಹುಚ್ಚು. ಪೋಲೋ ಕ್ರೀಡೆಯ ಅನೇಕ ಫೋಟೋಗ:ನ್ನು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಪೋಸ್ಟ್ ಮಾಡುತ್ತಿದ್ದರು. ಪೋಲೊ ಒಂದು ವಿಶಿಷ್ಟ ತಂಡ ಕ್ರೀಡೆಯಾಗಿದ್ದು, ಇದರಲ್ಲಿ ಆಟಗಾರರು ಕುದುರೆ ಮೇಲೆ ಕುಳಿತುಕೊಂಡು ತಮ್ಮ ಎದುರಾಳಿ ತಂಡದ ವಿರುದ್ಧ ಗೋಲು ಗಳಿಸಲು ಹೋರಾಟ ನಡೆಸುತ್ತಾರೆ. ಆಟಗಾರರು ಉದ್ದವಾದ ದಂಡದ ಸಹಾಯದಿಂದ ಮರ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ಸಣ್ಣ ಚೆಂಡನ್ನು ಗೋಲ್ ಕಡೆಗೆ ಚಲಿಸಲು ಯತ್ನಿಸುತ್ತಾರೆ.
ಜೇನುನೊಣ ನುಂಗಿದರೆ ಆಗುವ ಸಮಸ್ಯೆಗಳು:
ಜೇನುನೊಣವನ್ನು ನುಂಗುವುದರಿಂದ ಗಂಭೀರ ತೊಂದರೆಗಳು ಉಂಟಾಗಬಹುದು, ವಿಶೇಷವಾಗಿ ಕೀಟವು ವ್ಯಕ್ತಿಯ ಗಂಟಲು, ಅನ್ನನಾಳ ಅಥವಾ ಶ್ವಾಸಕೋಶವನ್ನು ಆಂತರಿಕವಾಗಿ ಕುಟುಕಿದರೆ ಸಮಸ್ಯೆಯಾಗುತ್ತದೆ. ಸಾಮಾನ್ಯವಾಗಿ ಜೇನುನೊಣದ ಕುಟುಕಿನಿಂದಾಗಿ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಉಂಟಾಗುತ್ತದೆ. ಸೂಕ್ಷ್ಮ ಪ್ರದೇಶಗಳಲ್ಲಿ ಊತ, ಉರಿಯೂತ ಅಥವಾ ಅನಾಫಿಲ್ಯಾಕ್ಸಿಸ್ ಎಂದು ಕರೆಯಲ್ಪಡುವ ವ್ಯವಸ್ಥಿತ ಅಲರ್ಜಿ ಹೃದಯರಕ್ತನಾಳದ ವ್ಯವಸ್ಥೆಯನ್ನು ಗಮನಾರ್ಹವಾಗಿ ಒತ್ತಡಕ್ಕೆ ಒಳಪಡಿಸಬಹುದು ಇದು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.
ಅಲರ್ಜಿಯಿಂದ ರಕ್ತದೊತ್ತಡ ಕುಸಿಯಲು ಮತ್ತು ಹೃದಯವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ಕಾರಣವಾಗಬಹುದು. ವಿಶೇಷವಾಗಿ ಅದು ಜೀವಂತವಾಗಿರುವಾಗ ಕುಟುಕಿದರೆ, ಉಸಿರುಗಟ್ಟುವಿಕೆ ಅಥವಾ ಹೈಪೋಕ್ಸಿಯಾವನ್ನು ಉಂಟುಮಾಡುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಇಂತಹ ಸಮಯದಲ್ಲಿ ತುರ್ತು ಆರೈಕೆಯನ್ನು ಮಾಡಲು ಸಮಯ ಬಹಳ ಕಡಿಮೆ ಇರುತ್ತದೆ ಎಂದು ಹಲವು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
