- Home
- Entertainment
- Movie Reviews
- ಹುಡುಗ್ರು ಈ ಸಿನಿಮಾ ನೋಡಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ: OTTಗೆ ಬಂದ ಒಂದೇ ದಿನಕ್ಕೆ ಟ್ರೆಂಡಿಂಗ್!
ಹುಡುಗ್ರು ಈ ಸಿನಿಮಾ ನೋಡಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ: OTTಗೆ ಬಂದ ಒಂದೇ ದಿನಕ್ಕೆ ಟ್ರೆಂಡಿಂಗ್!
ಪ್ರೀತಿಯಲ್ಲಿ ಬೀಳುವ ಗಂಡಸರನ್ನು ಗೊಂಬೆಗಳನ್ನಾಗಿ ಮಾಡುವ ಮಾಟಗಾತಿ, ಆತ್ಮಗಳನ್ನು ಬಂಧಿಸಿಟ್ಟಿರುವ ಗೊಂಬೆಗಳ ಮನೆ, ವಿಚಿತ್ರ ವಿಜ್ಞಾನಿಯ ಪ್ರಯೋಗ! ಇಂತಹ ವಿಭಿನ್ನ ಕಥಾಹಂದರ ಹೊಂದಿರುವ 'ಡ್ರೋನ್ಸ್' ಸಿನಿಮಾ ಲಭ್ಯವಿದೆ.

ಡಿಜಿಟಲ್ ಲೋಕದಲ್ಲಿ ಸದ್ದು
ಇತ್ತೀಚಿನ ದಿನಗಳಲ್ಲಿ ಓಟಿಟಿ ವೇದಿಕೆಗಳು ವಿಭಿನ್ನ ಕಥಾಹಂದರದ ಸಿನಿಮಾಗಳಿಗೆ ದೊಡ್ಡ ವೇದಿಕೆಯಾಗಿವೆ. ಅದರಲ್ಲೂ ಹಾರರ್, ಸಸ್ಪೆನ್ಸ್ ಮತ್ತು ಫ್ಯಾಂಟಸಿ ಸಿನಿಮಾಗಳಿಗೆ ಪ್ರೇಕ್ಷಕರಿಂದ ವಿಶೇಷ ಮೆಚ್ಚುಗೆ ಸಿಗುತ್ತಿದೆ. ಇದೀಗ ಇಂತಹದ್ದೇ ವಿಭಿನ್ನ ಕಥೆಯುಳ್ಳ ತಮಿಳಿನ ಹಾರರ್ ಫ್ಯಾಂಟಸಿ ಸಿನಿಮಾ ಡಿಜಿಟಲ್ ಲೋಕದಲ್ಲಿ ಸದ್ದು ಮಾಡುತ್ತಿದೆ. ಓಟಿಟಿಯಲ್ಲಿ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಈ ಸಿನಿಮಾ ಯಾವುದು ಗೊತ್ತಾ? ಅದೇ ಸಿದ್ಧಿ ಇದ್ನಾನಿ, ಅಂಜಲಿ ನಾಯರ್ ಹಾಗೂ ದೇವದರ್ಶಿನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಡ್ರೋನ್ಸ್'.
ಪ್ರೈಮ್ ವಿಡಿಯೋದಲ್ಲಿ 'ಡ್ರೋನ್ಸ್' ಹವಾ!
ನವೆಂಬರ್ 20ರಿಂದ 'ಡ್ರೋನ್ಸ್' ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಓಟಿಟಿಗೆ ಬಂದ ಕೆಲವೇ ಸಮಯದಲ್ಲಿ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಪ್ರೈಮ್ ವಿಡಿಯೋದಲ್ಲಿನ ರೊಮ್ಯಾನ್ಸ್ ಸಿನಿಮಾಗಳ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ ಎನ್ನಲಾಗಿದೆ. ತಮಿಳಿನ ಜೊತೆಗೆ ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಈ ಸಿನಿಮಾ ಲಭ್ಯವಿದೆ. ಹೀಗಾಗಿ ವಿವಿಧ ಭಾಷೆಗಳ ಸಿನಿಪ್ರಿಯರು ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. 'ಬನ್ ಬಟರ್ ಜಾಮ್' ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಆರ್. ರಾಘವ್ ಮಿರ್ದತ್ ಅವರ ಎರಡನೇ ಸಿನಿಮಾ ಇದಾಗಿದೆ.
ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರಿಗೆ ಈಗ ಓಟಿಟಿಯಲ್ಲಿ ಅವಕಾಶ!
ಅಕ್ಟೋಬರ್ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ 'ಡ್ರೋನ್ಸ್' ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ, ಇದಕ್ಕೂ ಒಂದು ದಿನ ಮುನ್ನ ದೊಡ್ಡ ಸಿನಿಮಾ 'ಜೈಲರ್ 2' ಬಿಡುಗಡೆಯಾಗಿದ್ದರಿಂದ 'ಡ್ರೋನ್ಸ್'ಗೆ ನಿರೀಕ್ಷಿತ ಪ್ರಮಾಣದಲ್ಲಿ ಚಿತ್ರಮಂದಿರಗಳು ಸಿಗಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ದೊಡ್ಡ ಮಟ್ಟದ ಓಟ ಕಾಣಲು ಸಾಧ್ಯವಾಗಲಿಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ವೀಕ್ಷಿಸಲು ಸಾಧ್ಯವಾಗದವರಿಗೆ ಇದೀಗ ಓಟಿಟಿಯಲ್ಲಿ ನೋಡುವ ಅವಕಾಶ ಸಿಕ್ಕಿದೆ. ಐಎಂಡಿಬಿಯಲ್ಲಿ 7.4 ರೇಟಿಂಗ್ ಪಡೆದುಕೊಂಡಿರುವುದು ಕೂಡ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.
ಹಾರರ್, ಫ್ಯಾಂಟಸಿ, ಸೈನ್ಸ್ ಫಿಕ್ಷನ್; ಕಥೆಯಲ್ಲಿ ಏನೇನಿದೆ?
'ಡ್ರೋನ್ಸ್' ಸಿನಿಮಾದ ವಿಶೇಷತೆಯೇ ಅದರ ವಿಭಿನ್ನ ಕಥಾಹಂದರ. ಹಾರರ್, ಫ್ಯಾಂಟಸಿ, ಸೈನ್ಸ್ ಫಿಕ್ಷನ್, ಕಾಮಿಡಿ ಹಾಗೂ ರೊಮ್ಯಾನ್ಸ್ ಅಂಶಗಳನ್ನು ಬೆರೆಸಿ ನಿರ್ದೇಶಕರು ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಕಾಲೇಜಿನಿಂದ ಅಮಾನತುಗೊಂಡ ಮೂವರು ವಿದ್ಯಾರ್ಥಿಗಳು ವಿಚಿತ್ರ ಸ್ವಭಾವದ ವಿಜ್ಞಾನಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆಯುವುದರೊಂದಿಗೆ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಮೂಢನಂಬಿಕೆ ಮತ್ತು ಜಾತಕಗಳನ್ನು ನಂಬದ ವಿಜ್ಞಾನಿ ಪದ್ಮನಾಭನ್, ಮನುಷ್ಯರಂತೆ ಭಾವನೆಗಳನ್ನು ವ್ಯಕ್ತಪಡಿಸುವ ಹ್ಯೂಮನಾಯ್ಡ್ವೊಂದನ್ನು ಸೃಷ್ಟಿಸುವ ಪ್ರಯತ್ನದಲ್ಲಿರುತ್ತಾನೆ. ಇದರ ನಡುವೆ ನಿದ್ರೆಯಲ್ಲಿ ನಡೆಯುವ ಅಭ್ಯಾಸವಿರುವ ವಿದ್ಯಾರ್ಥಿ, ಮಿನಿಯೇಚರ್ ಕಲಾವಿದೆ ಪ್ರಕೃತಿ, ಆಕೆಯ ಜೊತೆಗಿರುವ ಮಾಟಗಾತಿ, ಆತ್ಮಗಳನ್ನು ಬಂಧಿಸಿಟ್ಟಿರುವ ಗೊಂಬೆಗಳ ಮನೆ ಹಾಗೂ ಪ್ರೇಮದ ಶಾಪಕ್ಕೆ ಸಿಲುಕಿರುವ ಪೊಲೀಸ್ ಅಧಿಕಾರಿ ಹೀಗೆ ಹಲವು ವಿಚಿತ್ರ ಪಾತ್ರಗಳು ಕಥೆಯಲ್ಲಿ ಎದುರಾಗುತ್ತವೆ.
ಪ್ರೀತಿಯಲ್ಲಿ ಬಿದ್ದ ಗಂಡಸರನ್ನೇ ಗೊಂಬೆಗಳನ್ನಾಗಿ ಮಾಡುತ್ತಾಳೆ ಮಾಟಗಾತಿ!
ಇನ್ನು ಈ ಸಿನಿಮಾದಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಪ್ರೀತಿಯಲ್ಲಿ ಬೀಳುವ ಪುರುಷರನ್ನು ಗೊಂಬೆಗಳನ್ನಾಗಿ ಪರಿವರ್ತಿಸುವ ಮಾಟಗಾತಿಯ ಪಾತ್ರ. ಇಂತಹ ವಿಚಿತ್ರ ಘಟನೆಗಳು, ಅನಿರೀಕ್ಷಿತ ತಿರುವುಗಳು ಮತ್ತು ಭಾವನಾತ್ಮಕ ಕ್ಲೈಮ್ಯಾಕ್ಸ್ ಚಿತ್ರದ ಕಥೆಗೆ ಮತ್ತಷ್ಟು ರೋಚಕತೆ ನೀಡುತ್ತವೆ. ಹಾರರ್ ಜೊತೆಗೆ ಫ್ಯಾಂಟಸಿ, ಕಾಮಿಡಿ ಮತ್ತು ಪ್ರೇಮಕಥೆಯ ಅಂಶಗಳನ್ನೂ ಒಳಗೊಂಡಿರುವ 'ಡ್ರೋನ್ಸ್' ಸಿನಿಮಾ ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗಮನ ಸೆಳೆಯುತ್ತಿದೆ. ವಿಭಿನ್ನ ಕಥೆಗಳನ್ನು ಇಷ್ಟಪಡುವವರು ಈ ವಾರಾಂತ್ಯದಲ್ಲಿ ನೋಡಬಹುದಾದ ಸಿನಿಮಾಗಳ ಪಟ್ಟಿಗೆ ಇದನ್ನೂ ಸೇರಿಸಿಕೊಳ್ಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















